Tuesday, January 13, 2026
Homeರಾಜ್ಯಬ್ಯಾಲೆಟ್‌ ಪೇಪರ್‌ನಲ್ಲಿ ನಡೆಯಲಿದೆಯೇ ಜಿಬಿಎ ಚುನಾವಣೆ..?

ಬ್ಯಾಲೆಟ್‌ ಪೇಪರ್‌ನಲ್ಲಿ ನಡೆಯಲಿದೆಯೇ ಜಿಬಿಎ ಚುನಾವಣೆ..?

Will the GBA elections be held on ballot paper?

ಬೆಂಗಳೂರು,ಜ.13- ಒಂದಿಲ್ಲೊಂಂದು ಕಾರಣಗಳಿಂದ ಹಲವಾರು ವರ್ಷಗಳಿಂದ ಮುಂದೂಡಿದ್ದ ಬಹುನಿರೀಕ್ಷಿತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಚುನಾವಣೆಯನ್ನು ವಿದ್ಯುನಾನ ಮತಯಂತ್ರ(ಇವಿಎಂ)ದಲ್ಲಿ ಇಲ್ಲವೇ ಬದಲಿಗೆ ಮತಪತ್ರ (ಬ್ಯಾಲೆಟ್‌ ಪೇಪರ್‌) ಬಳಸಬೇಕೇ, ಬೇಡವೆ? ಎಂಬ ಜಿಜ್ಞಾಸೆ ರಾಜ್ಯ ಚುನಾವಣಾ ಆಯೋಗಕ್ಕೆ ಎದುರಾಗಿದೆ.

ಜೂನ್‌ ಮಾಸಾಂತ್ಯದೊಳಗೆ ನಡೆಯಬೇಕಾಗಿರುವ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರದಲ್ಲಿ ನಡೆಸಲಾಗುತ್ತದೆಯೊ ಅಥವಾ ಮತಪತ್ರಗಳಲ್ಲಿ ನಡೆಸಲಾಗುತ್ತದೆಯೊ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ, ರಾಜ್ಯ ಚುನಾವಣಾ ಆಯೋಗ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಕೆಲವು ತಿಂಗಳ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇವಿಎಂ ಬದಲಿಗೆ ಬ್ಯಾಲೆಟ್‌ ಪೇಪರ್‌ ಬಳಸಲು ತೀರ್ಮಾನಿಸಿ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಿತ್ತು. ಇವಿಎಂ, ಮತಗಳ್ಳತನದ ವಿರುದ್ಧ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌‍ ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರದ ನಿರ್ಧಾರ ಮತದಾರರಲ್ಲಿ ಕುತೂಹಲ ಕೆರಳಿಸಿದೆ.

ರಾಜ್ಯ ಚುನಾವಣಾ ಆಯೋಗವು, ಸುಪ್ರೀಂ
ಕೋರ್ಟ್‌ ಆದೇಶದ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿ, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ. ಆದರೆ, ಚುನಾವಣೆ ಇವಿಎಂನಲ್ಲೋ ಅಥವಾ ಬ್ಯಾಲಟ್‌ ಪೇಪರ್‌ನಲ್ಲೋ ಎನ್ನುವುದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.ಜಿಬಿಎ ಅಡಿಯಲ್ಲಿ ಹೊಸದಾಗಿ ರಚನೆಯಾಗಿರುವ ಐದು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ) ಬದಲಿಗೆ ಬ್ಯಾಲೆಟ್‌ ಪೇಪರ್‌ ಬಳಸಲಾಗುವುದು. ಬ್ಯಾಲೆಟ್‌ ಪೇಪರ್‌ ಬಳಸಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸಲು ಎಸ್‌‍ಇಸಿ ಸಿದ್ಧವಾಗಿದೆ.

ಈ ವಿಷಯವಾಗಿ ಕೇಂದ್ರ ಚುನಾವಣಾ ಆಯೋಗದ ಸಲಹೆ ಪಡೆಯುವ ಅಗತ್ಯವಿಲ್ಲ. ಎಸ್‌‍ಇಸಿ ಒಂದು ಸಂವಿಧಾನಾತಕ ಸಂಸ್ಥೆಯಾಗಿದ್ದು, ಕೇಂದ್ರ ಚುನಾವಣಾ ಆಯೋಗದಷ್ಟೇ ಅಧಿಕಾರವನ್ನು ಹೊಂದಿದೆ ಎಂಬ ಸಮರ್ಥನೆಯನ್ನು ನೀಡಿದೆ. ಬಿಜೆಪಿ ಮತಪತ್ರ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರೆ ಕಾಂಗ್ರೆಸ್‌‍ ಮತಪತ್ರ ಬಳಸುವುದನ್ನು ಸಮರ್ಥಿಸಿಕೊಂಡಿದ್ದು ಕಾನೂನಿನಲ್ಲೇ ಇದಕ್ಕೆ ಅವಕಾಶವಿದೆ ಎಂದಿದೆ.

ಸ್ಥಳೀಯ ಸಂಸ್ಥೆಗಳಾದ ಪುರಸಭೆ, ಪಾಲಿಕೆಗಳು, ಗ್ರಾಮ ಪಂಚಾಯತ್‌, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಐದು ನಗರ ಪಾಲಿಕೆಗಳಲ್ಲಿ ಮತಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಬ್ಯಾಲೆಟ್‌ ಪೇಪರ್‌ ಬಳಕೆಗಾಗಿ ನಿಯಮ ತಿದ್ದುಪಡಿ ಮಾಡಲು ನಾಲ್ಕು ಪ್ರತ್ಯೇಕ ಕರಡು ಮಸೂದೆಗಳನ್ನು ರೂಪಿಸಿತ್ತು. ಕರಡು ಮಸೂದೆಗಳ ಮೂಲಕ ಗ್ರಾಮ ಪಂಚಾಯತಿ, ಮಹಾನಗರ ಪಾಲಿಕೆಗಳು, ಪುರಸಭೆ ಹಾಗೂ ಜಿಬಿಎ ವ್ಯಾಪ್ತಿಯಲ್ಲಿ ಬ್ಯಾಲೆಟ್‌ ಪೇಪರ್‌ ಮೂಲಕ ಮತದಾನ ಮಾಡಲು ನಿಯಮ ತಿದ್ದುಪಡಿ ಮಾಡಲಾಗಿತ್ತು.

ಮೂಲಗಳ ಪ್ರಕಾರ, ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳ ರೀತಿಯಲ್ಲೇ ಬೆಂಗಳೂರು ಮಹಾನಗರದ ಚುನಾವಣೆಯನ್ನೂ ಮತಪತ್ರಗಳ ಮೂಲಕ ನಡೆಸಲು ಹೆಚ್ಚಿನ ಒಲವಿದೆ. ಇವಿಎಂಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎನ್ನುವುದು ಸರ್ಕಾರದ ನಂಬಿಕೆಯಾಗಿದೆ.

ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ಈ ಐದು ಪಾಲಿಕೆಗಳ ಒಟ್ಟು 369 ವಾರ್ಡ್‌ಗಳಿಗೆ ಚುನಾವಣೆ ನಡೆಯಬೇಕಿದೆ. 2020ರ ಚುನಾವಣೆಯಲ್ಲಿ 198 ವಾರ್ಡ್‌ಗಳಿದ್ದವು ಮತ್ತು ಇವಿಎಂನಲ್ಲಿ ಚುನಾವಣೆ ನಡೆದಿತ್ತು. ಜ.29, 2021ರಂದು, ಅಂದಿನ ಬಿಜೆಪಿ ಸರ್ಕಾರ ವಾರ್ಡ್‌ ಮರುವಿಂಗಡಿಸಿ 243ಕ್ಕೆ ಏರಿಸಿತ್ತು. ಸಿದ್ದರಾಮಯ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಗ್ರೇಟರ್‌ ಬೆಂಗಳೂರು ಗವರ್ನೆನ್ಸ್ ಆಕ್ಟ್‌ -2024 ಪ್ರಕಾರ, ಐದು ಪಾಲಿಕೆಗಳ ಚುನಾವಣೆಗಳನ್ನು ಬ್ಯಾಲೆಟ್‌ ಪೇಪರ್‌ ಅಥವಾ ಇವಿಎಂ ಮೂಲಕ ನಡೆಸಲು ಅವಕಾಶವಿದೆ. ಆದರೆ, ಚುನಾವಣಾ ಆಯೋಗ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.

ರಾಹುಲ್‌ ಗಾಂಧಿಯವರ ವೋಟ್‌ ಚೋರಿ ಅಭಿಯಾನದ ನಂತರ ಇವಿಎಂ ಸೇಫೋ ಅಥವಾ ಹಿಂದಿನ ರೀತಿಯಲ್ಲಿ ಬ್ಯಾಲೆಟ್‌ ಪೇಪರ್‌ ಪದ್ದತಿಯೇ ಉತ್ತಮವೋ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಬೆಂಗಳೂರಿನ ಮತದಾರರು ಕೂಡಾ ತಮ ಹಕ್ಕನ್ನು ಚಲಾಯಿಸಲು ಯಾವ ವಿಧಾನವನ್ನು ಆಯೋಗ ಅಂತಿಮಗೊಳಿಸುತ್ತದೆ ಎನ್ನುವ ಕಾತುರದಲ್ಲಿದ್ದಾರೆ.

ಸಚಿವ ಸಂಪುಟದಲ್ಲಿ ತೀರ್ಮಾನ : ಜಿಬಿಎ ವ್ಯಾಪ್ತಿಯಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆಗೆ ಅನುವು ಮಾಡಿಕೊಡಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಎರಡನೇ ತಿದ್ದುಪಡಿ ಮಸೂದೆ-2025, ಪುರಸಭೆಗಳಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆಗೆ ಪೂರಕವಾಗಿ ಕರ್ನಾಟಕ ಪುರಸಭೆಗಳ (ತಿದ್ದುಪಡಿ) ಮಸೂದೆ-2025, ಮಹಾನಗರ ಪಾಲಿಕೆಗಳಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆಗೆ ಅನುವು ಮಾಡಿಕೊಡಲು ಕರ್ನಾಟಕ ಮಹಾನಗರ ಪಾಲಿಕೆಗಳು (ಎರಡನೇ ತಿದ್ದುಪಡಿ) ಮಸೂದೆ-2025 ಮತ್ತು ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆ ಮಾಡುವಂತೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ-2025 ಕರಡನ್ನು ರೂಪಿಸಿತ್ತು.

ಗ್ರಾಪಂ ಚುನಾವಣೆಗಳನ್ನು ಬಿಟ್ಟು ಉಳಿದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬಳಕೆ ಮಾಡಲಾಗುತ್ತಿತ್ತು. ಆದರೆ ಬೀದರ್‌ ಜಿಲ್ಲೆಯಲ್ಲಿ ಮಾತ್ರ ಪ್ರಯೋಗಿಕವಾಗಿ ಗ್ರಾಮಪಂಚಾಯಿತಿ ಚುನಾವಣೆಗೆ ಇವಿಎಂ ಬಳಕೆ ಮಾಡಲಾಗಿತ್ತು. ಈ ಹೊಸ ಕಾನೂನಿಗೆ ಒಪ್ಪಿಗೆ ಸಿಕ್ಕಿದರೆ ಗ್ರೇಟರ್‌ ಬೆಂಗಳೂರು ಚುನಾವಣೆ ಸೇರಿದಂತೆ ಎಲ್ಲ ಮಹಾನಗರಪಾಲಿಕೆ, ನಗರಸಭೆ, ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ ಚುನಾವಣೆಗಳಿಗೂ ಬ್ಯಾಲೆಟ್‌ ಪೇಪರ್‌ ಮೂಲಕ ಮತದಾನ ಆಗಲಿದೆ.

RELATED ARTICLES

Latest News