ಮೈಸೂರು,ಸೆ.29– ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು ಕುಮಾರಸ್ವಾಮಿಯವರನ್ನು ನೇರವಾಗಿ ಟೀಕಿಸಿಲ್ಲ, ಬರ್ನಾಡ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಪ್ಪು ಮಾಡಿದ್ದಾರೆ. ಅದಕ್ಕಾಗಿ ಅಧಿಕಾರಿಗಳ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಮತ್ತು ಎಡಿಜಿಪಿ ನಡುವೆ ನಡೆಯುತ್ತಿರುವ ವಾದ-ಪ್ರತಿವಾದಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಅದಕ್ಕೆ ಚಂದ್ರಶೇಖರ್ ಉತ್ತರ ನೀಡಿದ್ದಾರೆ. ನನಗೆ ಅಷ್ಟೇ ಗೊತ್ತಿದೆ. ಕಾನೂನು ಬಾಹಿರವಾಗಿ ನಡೆದುಕೊಂಡಾಗ ಅಧಿಕಾರಿಗಳ ವಿರುದ್ಧ ಆರೋಪ ಮಾಡುವುದು ಕಂಡುಬರುತ್ತದೆ ಎಂದು ಹೇಳಿದರು.
ಕುಮಾರಸ್ವಾಮಿಯವರನ್ನು ಹಂದಿ ಎಂದು ಚಂದ್ರಶೇಖರ್ ಅವರು ಹೇಳಿಲ್ಲ. ಬರ್ನಾಡ್ ಶಾ ಹೇಳಿದ್ದನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ನಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದರು.
ಕುಮಾರಸ್ವಾಮಿಯವರ ಟೀಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುಲಾಗುವುದು. ಎಲ್ಲದಕ್ಕೂ ಕಾನೂನು ಇದೆ. ದೂರು ಕೊಟ್ಟಾಕ್ಷಣ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಮುಡಾ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸದ್ಯಕ್ಕೆ ತಾವು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಯಾರು ಎಂಬುದೇ ನನಗೆ ಗೊತ್ತಿಲ್ಲ. ನಾನು ಇವತ್ತಿನವರೆಗೂ ಅವರನ್ನು ನೋಡಿಯೇ ಇಲ್ಲ. ಅವರ ಮೇಲೆ ಏನೇನು ಕೇಸ್‌ಗಳಿರುವುದೂ ನನಗೆ ಗೊತ್ತಿಲ್ಲ. ಅವರು ಇಡಿಗೆ ದೂರು ಕೊಟ್ಟಿರಬಹುದು. ದೂರು ಕೊಟ್ಟ ತಕ್ಷಣ ಅದು ತನಿಖೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೊಟ್ಟಿದ್ದಾರೆ ಕೊಡಲಿ ಬಿಡಿ ಎಂದರು.
ಮೈಸೂರಿನಲ್ಲಿ ರೇವ್ ಪಾರ್ಟಿ ನಡೆದಿರುವ ಸ್ಥಳದಲ್ಲಿ ದಾಳಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತಹ ಯಾವುದೇ ಪ್ರಕರಣಗಳಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ತಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.