ಬೆಂಗಳೂರು, ಸೆ.30- ಹಿಂದೂ ಹೆಸರನ್ನಿಟ್ಟುಕೊಂಡು ನಗರದ ಹೊರವಲಯದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಸೇರಿದಂತೆ ನಾಲ್ವರು ವಿದೇಶಿ ಪ್ರಜೆಗಳನ್ನು ಜಿಗಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ನಗರಜಿಲ್ಲೆ ಆನೇಕಲ್ನ ಜಿಗಣಿ ಬಳಿಯ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಪಾಕ್ಪ್ರಜೆ ಜೊತೆಗೆ ಬಾಂಗ್ಲಾದೇಶದ ಆತನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ನೆಲೆಸಿದ್ದ ಈತ ತದನಂತರದಲ್ಲಿ ಪಾಕ್ ತೊರೆದು ಬಾಂಗ್ಲಾದೇಶಕ್ಕೆ ಹೋಗಿದ್ದಾನೆ. ಆವೇಳೆ ಡಾಕಾದಲ್ಲಿ ಬಾಂಗ್ಲಾದೇಶದ ಯುವತಿಯನ್ನು ವಿವಾಹವಾಗಿದ್ದಾನೆ. 2014ರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಾಕ್ಪ್ರಜೆ ಅಕ್ರಮವಾಗಿ ದೆಹಲಿಗೆ ಬಂದು ನೆಲೆಸಿದ್ದು, ತದನಂತರದಲ್ಲಿ ಅಲ್ಲಿನ ಸ್ಥಳೀಯ ವ್ಯಕ್ತಿಯ ನೆರವಿನೊಂದಿಗೆ ಆಧಾರ್ಕಾರ್ಡ್, ಡ್ರೈವಿಂಗ್ ಲೈನ್ಸೆನ್ಸ್, ಪಾಸ್ಪೋರ್ಟ್ ಮಾಡಿಸಿಕೊಂಡಿದ್ದಾನೆ.
ಎಲ್ಲಾ ದಾಖಲಾತಿಗಳು ಕೈಸೇರಿದ ನಂತರ 2018ರಲ್ಲಿ ಬೆಂಗಳೂರಿಗೆ ಬಂದು ನಗರ ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಕುಟುಂಬದೊಂದಿಗೆ ನೆಲೆಸಿದ್ದನು.
ಹೆಸರು ಬದಲಿಸಿಕೊಂಡಿದ್ದ:
ತನ್ನ ಗುರುತು ಯಾರಿಗೂ ಸಿಗಬಾರದೆಂದು ತನ್ನ ಹೆಸರನ್ನು ಶಂಕರ್ಶರ್ಮಾ ಎಂದು ಬದಲಾಯಿಸಿಕೊಂಡಿದ್ದಾನೆ.ಈ ನಡುವೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಪಾಕಿಸ್ತಾನದ ಪ್ರಜೆ ಜಿಗಣಿಯಲ್ಲಿ ವಾಸವಾಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಜಿಗಣಿ ಪೊಲಿಸರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಹಿರಿಯ ಅಧಿಕಾರಿಗಳೊಂದಿಗೆ ಜಿಗಣಿ ಠಾಣೆ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಪ್ರಜೆ ವಾಸವಾಗಿದ್ದ ಅಪಾರ್ಟ್ಮೆಂಟ್ಗೆ ತೆರಳಿ ಮನೆಯನ್ನೆಲ್ಲಾ ಶೋಧಿಸಿ, ಲ್ಯಾಪ್ಟ್ಯಾಪ್, ಮೊಬೈಲ್ ಸಮೇತ ಪಾಕ್ಪ್ರಜೆ ಸೇರಿದಂತೆ ಆತನ ಪತ್ನಿ, ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಜಿಗಣಿ ಠಾಣೆ ಪೊಲೀಸರು ಪಾಕಿಸ್ತಾನ ಪ್ರಜೆಯನ್ನು ಗೌಪ್ಯಸ್ಥಳದಲ್ಲಿರಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಎಷ್ಟು ವರ್ಷಗಳಿಂದ ಜಿಗಣಿಯಲ್ಲಿ ಈತ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದ, ಯಾವ ವೃತ್ತಿ ಮಾಡುತ್ತಿದ್ದ, ಇಲ್ಲಿ ನೆಲೆಸಲು ಯಾರು ನೆರವಾದರು, ಈತನಿಗೆ ಸಹಕರಿಸಿದ ಸ್ಥಳೀಯ ವ್ಯಕ್ತಿಗಳು ಯಾರು ಎಂಬಿತ್ಯಾದಿ ಮಾಹಿತಿಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಕೆಲ ತಿಂಗಳುಗಳ ಹಿದೆಯಷ್ಟೇ ಜಿಗಣಿಯಲ್ಲಿ ನೆಲೆಸಿದ್ದ ಶಂಕಿತ ಉಲ್ಫಾ ಉಗ್ರ ಬಂಧನದ ಬೆನ್ನಲ್ಲೇ ಇದೀಗ ಪಾಕಿಸ್ತಾನ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳ್ಳ ಮಾರ್ಗ:
ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಲು ಕಳ್ಳಮಾರ್ಗ ಕಂಡುಕೊಂಡು ಅತಿ ಸುಲಭವಾಗಿ ಅತಿಕ್ರಮಣ ಪ್ರವೇಶ ಮಾಡಿರುವುದು ಗೊತ್ತಾಗಿದೆ. ಆಗಿಂದಾಗೆ ಬಾಂಗ್ಲಾದೇಶದಿಂದ ಭಾರತಕ್ಕೆ ಯಾವ ಮಾರ್ಗಗಳಲ್ಲಿ ನುಸುಳುತ್ತಿದ್ದಾರೆ ಎಂಬುವುದನ್ನು ಪತ್ತೆ ಹಚ್ಚಬೇಕಿದೆ.