ಬೆಂಗಳೂರು,ಸೆ.30- ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕಿಸ್ತಾನದ ಪ್ರಜೆ ಹಾಗೂ ಹಲವು ಬಾಂಗ್ಲ ದೇಶೀಯರ ಬಗ್ಗೆ ತನಿಖೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಗೃಹಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ ಹತ್ತು ವರ್ಷದಿಂದ ಭಾರತದಲ್ಲಿದ್ದಾರೆ. ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಯಾವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು ಎಂಬುದು ಹೊರಬರಲಿದೆ. ಹತ್ತು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದರು ಎಂಬುದು ಸತ್ಯವಾಗಿದ್ದರೆ, ಕೇಂದ್ರ ಗುಪ್ತದಳದ ಗಮನಕ್ಕೆ ಬರಲಿಲ್ಲ. ಬಂಧಿತರು ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದರು. ಹೆಸರು ಬದಲಾಯಿಸಿಕೊಂಡಿದ್ದಾರೆ. ತನಿಖೆಯಲ್ಲಿ ಏನೆಲ್ಲ ಮಾಹಿತಿಗಳು ಹೊರಬರುತ್ತವೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.
ಬಹಳ ಜನ ಬಾಂಗ್ಲಾ ದೇಶದವರು ಬಂದಿದ್ದಾರೆ. ಪ್ರತಿನಿತ್ಯ ಅವರನ್ನು ವಶಕ್ಕೆ ಪಡೆದು ವರದಿ ನೀಡುತ್ತಿದ್ದೇವೆ. ಬಾಂಗ್ಲಾ ಗಡಿಯಲ್ಲಿ ನುಸುಳದಂತೆ ಬಂದೋಬಸ್ತ್ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬಾಂಗ್ಲಾ ದೇಶದ ಹೈಕಮೀಷನ್‌ಗೂ ಮಾಹಿತಿ ನೀಡುತ್ತೇವೆ ಎಂದರು.
ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಿದ್ದರು. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವರು ಹೇಳಿದರು.
ಎತ್ತಿನಹೊಳೆ ಯೋಜನೆ ವೇಗವಾಗಿ ಆಗುತ್ತಿಲ್ಲ. ಹಣ ಬಿಡುಗಡೆ ಆಗಬೇಕಿದೆ. ದೊಡ್ಡಬಳ್ಳಾಪುರದಲ್ಲಿ ನೀರು ಸಂಗ್ರಹಕ್ಕೆ ಐದು ಸಾವಿರ ಎಕರೆ ಭೂಮಿ ಪ್ರಸ್ತಾಪ ಮಾಡಲಾಗಿತ್ತು. ಅದರಲ್ಲಿ 2,500 ಎಕರೆ ಭೂಮಿ ಕೊರಟಗೆರೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಿಂದಿನ ಸರ್ಕಾರ ಇದನ್ನು ಬದಲಾಯಿಸಿ, ನಿಲ್ಲಿಸಿತ್ತು. ಅದು ಆಗಬಾರದು ಎಂಬ ಚರ್ಚೆ ನಡೆಯುತ್ತಿತ್ತು.
ಮುಂದಿನ ವರ್ಷಕ್ಕಾದರು ಜಿಲ್ಲೆಗೆ ನೀರು ಬರಬೇಕು. ಈ ಬಗ್ಗೆ ಚರ್ಚಿಸಲು ಭೇಟಿ ಮಾಡುವುದಾಗಿ ಡಿಸಿಎಂ ಅವರಿಗೆ ಹೇಳಿದ್ದೆ. ಡಿಸಿಎಂ ಅವರು ನಾನೇ ಬರುತ್ತೇನೆ, ಮಾತಾಡೋಣ ಎಂದಿದ್ದರು. ಬನ್ನಿ ಎಂದು ಕರೆದ್ದೆಿ ಎಂದು ಸ್ಪಷ್ಟನೆ ನೀಡಿದರು.
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಿದ್ದಾರೆ. ನಾವು ಮಾತಾಡಿಕೊಳ್ಳದಿದ್ದರೆ ಇನ್ನ್ಯಾರು ಮಾತಾಡಿಕೊಳ್ಳಬೇಕು? ನಮ ಸಮಸ್ಯೆಗಳ ಬಗ್ಗೆ ನಾವೇ ಚರ್ಚೆ ಮಾಡಬೇಕು. ನಾನು ಮತ್ತು ಡಿ.ಕೆ.ಶಿವಕುಮಾರ್ ಅವರು ಹೊಸದಾಗಿ ಭೇಟಿ ಆಗುತ್ತಿದ್ದೇವೆಯೇ? ಎಂದು ಪ್ರಶ್ನಿಸಿದರು.
ಡಿಸಿಎಂ ಭೇಟಿಯನ್ನು ಬೇರೆ ರೀತಿಯ ದೃಷ್ಟಿಕೋನದಲ್ಲಿ ನೋಡಬೇಕಿಲ್ಲ. ನಮ ಕೆಲಸ ಕಾರ್ಯಗಳಾಗಬೇಕಾಗುತ್ತದೆ. ಗುಬ್ಬಿಯಿಂದ ಕುಣಿಗಲ್‌ವರೆಗೆ ಎಕ್‌್ಸಪ್ರೆಸ್ ಕೆನಲ್ ಮಾಡಲು ಅನುಮತಿ ಸಿಕ್ಕಿದೆ. ಕೆಲಸ ಆರಂಭಿಸುವಾಗ ಜನರು ತಡೆದಿದ್ದಾರೆ. ಈ ಬಗ್ಗೆಯೂ ಚರ್ಚಿಸಲಾಗಿದೆ. ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ತಾಂತ್ರಿಕ ಸಮಿತಿ ಮಾಡಿದ್ದಾರೆ. ಅದರ ವರದಿ ಬಂದ ಮೇಲೆ ಮುಂದುವರಿಯುತ್ತದೆ. ಭೇಟಿ ಮಾಡುವುದಕ್ಕೆ ಬೇರೆಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಸಾವಿರ ಕೋಟಿ ರೂ. ನೋಡಿಲ್ಲ. ಸರ್ಕಾರ ಅಸ್ಥಿರಗೊಳಿಸಲು ಸಾವಿರ ಕೋಟಿ ರೂ. ಎಲ್ಲಿಟ್ಟಿದ್ದಾರೆ ಎಂಬುದನ್ನು ಯತ್ನಾಳ್ ಅವರನ್ನೇ ಕೇಳಬೇಕು. ಸಾವಿರ ಕೋಟಿ ಎಲ್ಲಿಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಸುಮೋಟೋ ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು. ಸಂದರ್ಭ ಬಂದರೆ ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಫ್ರೇಜರ್ ಟೌನ್‌ನಲ್ಲಿ ಪೊಲೀಸ್ ವಸತಿಗೃಹಗಳ ದುಸ್ಥಿತಿಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸುತ್ತೇನೆ. ಸಾಧ್ಯವಾದರೆ ಖುದ್ದಾಗಿ ಭೇಟಿ ನೀಡಿ, ಸೂಕ್ತ ನಿರ್ದೇಶನ ನೀಡುತ್ತೇನೆ ಎಂದು ಹೇಳಿದರು.
ಹಿರಿಯ ಅಧಿಕಾರಿ ಏನು ಪದ ಬಳಕೆ ಮಾಡಿದ್ದಾರೆ. ಬರ್ನಾಡ್ ಷಾ ಆ ರೀತಿ ಹೇಳಿದ್ದಾರೆ ಅಂತ ಹೇಳಿದ್ದಾರೆಯೇ ಹೊರತು, ಕುಮಾರಸ್ವಾಮಿ ಅವರಿಗೆ ರೆಫರ್ ಮಾಡಿ ಹೇಳಿಲ್ಲವಲ್ಲ. ನಮಗೆ ಓದುವುದಕ್ಕೆ ಬರಬೇಕಲ್ಲ. ಓದುವುದಕ್ಕೆ, ಅರ್ಥ ಮಾಡಿಕೊಳ್ಳಲು ಬಂದರೆ ಈ ರೀತಿ ಪ್ರಶ್ನೆಯೇ ಬರುವುದಿಲ್ಲ ಎಂದರು.
ಬರ್ನಾಡ್ ಷಾ ಹೇಳಿರುವುದನ್ನು ಉಲ್ಲೇಖಿಸಿದ್ದಾರೆ. ಕುಮಾರಸ್ವಾಮಿ ಅವರು ನನಗೆ ಅನ್ವಯಿಸುತ್ತದೆ ಎಂದು ಏಕೆ ಅಂದುಕೊಳ್ಳಬೇಕು. ಗಾದೆಮಾತು, ನಾಣ್ಣುಡಿ, ದೊಡ್ಡವರು ಹೇಳಿದ ಮಾತುಗಳನ್ನು ಒಂದು ಅರ್ಥದಲ್ಲಿ ಹೇಳುತ್ತಾರೆ. ನಮಗೆ ಹೇಗೆ ಬೇಕೋ ಹಾಗೇ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇ.ಡಿ ಅವರಿಗೆ ಮತ್ತೇ ದೂರು ಕೊಡಲಿ. ಅದೆಲ್ಲವನ್ನು ಕಾನೂನು ನೋಡಿಕೊಳ್ಳುತ್ತದೆ. ನಾವು ಪ್ರತಿಕ್ರಿಯಿಸಲು ಆಗುವುದಿಲ್ಲ ಎಂದರು.
ಯಾರಿಗೆ ಯಾರು ದ್ವೇಷ ಮಾಡುತ್ತಾರೋ ಗೊತ್ತಿಲ್ಲ. ದಿನಬೆಳಗಾದರೆ ಇದೇ ಆಗಿದೆ. ಇವರಿಗೆ ಅವರು ಏನೋ ಅಂದರು, ಅವರಿಗೇ ಇವರು ಏನೋ ಅಂದರು ಎಂಬುದಾಗಿದೆ. ಸಾರ್ವಜನಿಕ ಜೀವನ ಇಷ್ಟರ ಮಟ್ಟಿಗೆ ಕಲುಷಿತ ಆದರೆ ಬಹಳ ಕಷ್ಟ ಎಂದು ಅವರು ಬೇಸರ ವ್ಯಕ್ತಪಡಿಸಿದರು.