Sunday, November 24, 2024
Homeರಾಜಕೀಯ | Politicsರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದ ಡಿಕೆಶಿ - ಪರಂ ಮಾತುಕತೆ

ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದ ಡಿಕೆಶಿ – ಪರಂ ಮಾತುಕತೆ

DCM DK Shivakumar And Home Minister Parameshwar Meeting

ಬೆಂಗಳೂರು,ಸೆ.30- ಗೃಹಸಚಿವ ಡಾ.ಜಿ.ಪರಮೇಶ್ವರ್‌ರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.ರಾಜಕೀಯ ಸೂಕ್ಷ್ಮ ಸನ್ನಿವೇಶದಲ್ಲಿ ಈ ಇಬ್ಬರೂ ನಾಯಕರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಖುದ್ದು ಡಿ.ಕೆ.ಶಿವಕುಮಾರ್‌ರವರೇ ಪರಮೇಶ್ವರ್‌ ಅವರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದು, ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌ರವರು, ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತಿದೆ. ತುಮಕೂರು, ಬೆಂಗಳೂರು, ಮಂಡ್ಯಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಶುರುವಾಗಿದೆ.

ಎತ್ತಿನಹೊಳೆಯಿಂದ ನೀರನ್ನು ಹೊರಗೆ ತೆಗೆಯಲಾಗಿದೆ. ಬಾಕಿ ಕಾಮಗಾರಿ ಮುಂದುವರೆಸಲು ಅರಣ್ಯ ಭೂಮಿ ಅಡ್ಡ ಬಂದಿದೆ. ಅದಕ್ಕೆ ಪರ್ಯಾಯ ಜಾಗ ನೀಡಲು ತುಮಕೂರು ಮತ್ತು ಹಾಸನದಲ್ಲಿ ಜಿಲ್ಲಾಡಳಿತಗಳು ಸ್ಥಳ ಗುರುತಿಸಿವೆ. ಮುಂದಿನ ವರ್ಷದೊಳಗೆ ತುಮಕೂರಿಗೆ ನೀರು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದರು.

ಹಿಂದಿನ ಬಿಜೆಪಿ ಸರ್ಕಾರ ಬೈರಗೊಂಡ್ಲು ಜಲಾಶಯದ ಯೋಜನೆಯನ್ನು ಬದಲಾವಣೆ ಮಾಡಿದೆ. ದೊಡ್ಡಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಕೊರಟಗೆರೆ ಗಡಿಭಾಗವಾಗಿರುವುದರಿಂದ ಪರಿಹಾರ ವಿಚಾರವಾಗಿ ತಗಾದೆಗಳಿವೆ.ಪರಮೇಶ್ವರ್‌ ಮತ್ತು ತಾವು ಎತ್ತಿನಹೊಳೆಯಿಂದ ಯೋಜನೆಯುದ್ದಕ್ಕೂ ದಸರಾ ಮುಗಿದ ಬಳಿಕ ವೈಮಾನಿಕ ಸಮೀಕ್ಷೆ ನಡೆಸುತ್ತೇವೆ. ನಾನು ಬೈರಗೊಂಡ್ಲು ಜಲಾಶಯದ ಸ್ಥಳವನ್ನು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.

ಈ ನಡುವೆ ಸಂಪರ್ಕ ಕಾಲುವೆಗಳ ಬಗ್ಗೆ ಸಮಿತಿ ರಚಿಸಲಾಗಿದೆ. ತಮ ಸರ್ಕಾರ ಕುಡಿಯುವ ನೀರು ಪೂರೈಸುವ ಭರವಸೆಯನ್ನು ಈಡೇರಿಸಲು ಬದ್ಧತೆ ತೋರಿಸುತ್ತೇವೆ ಎಂದರು.

ಈ ವೇಳೆ ರಾಜಕೀಯ ಕುರಿತು ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪತ್ರಕರ್ತರಿಗೆ ರಾಜಕೀಯ ಬಿಟ್ಟು ಬೇರೆ ಗೊತ್ತಿಲ್ಲವೇ?, ಜನ ನಮಗೆ ಅಧಿಕಾರ ನೀಡಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸುವತ್ತ ಮತ್ತು ಪ್ರಣಾಳಿಕೆಯಲ್ಲಿನ ಆಶ್ವಾಸನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ ನೀಡುತ್ತೇವೆ.

ಮುಂದಿನ ದಿನಗಳಲ್ಲಿ ಜನರಿಗೆ ನಾವು ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಅಗತ್ಯವಿದೆ. ಆದ್ದರಿಂದ ಅಭಿವೃದ್ಧಿ ವಿಚಾರವನ್ನು ಆಯ್ಕೆ ಮಾಡಿದ್ದೇವೆ. ರಾಜಕೀಯ ಕುರಿತು ಪ್ರತಿದಿನವೂ ಮಾತನಾಡುತ್ತಲೇ ಇರುತ್ತೇವೆ ಎಂದು ಹೇಳಿದರು.ಹಗಲು-ರಾತ್ರಿ ಸಮಯ ಓಡುತ್ತಿದೆ. ಅಭಿವೃದ್ಧಿಯ ಕುರಿತು ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದರು.

ನಾವಿಬ್ಬರೂ ಸಭೆ ನಡೆಸಿದ್ದು, ಅಧಿಕಾರಿಗಳಿಲ್ಲದೇ ಇರುವುದು ದೊಡ್ಡ ವಿಚಾರವಲ್ಲ. ಕಾಂಗ್ರೆಸ್‌‍ನಲ್ಲಿ 136 ಜನ ಶಾಸಕರು ಒಟ್ಟಾಗಿದ್ದೇವೆ. ಅಧಿಕಾರಕ್ಕಾಗಿ ಯಾವುದೇ ಸಂಧಾನವಿಲ್ಲ ಎಂದು ಹೇಳಿದರು.ನಾಯಕತ್ವ ಸದೃಢವಾಗಿದ್ದ ಮೇಲೆ ಅಧಿಕಾರಿಗಳ ಅಗತ್ಯವಿಲ್ಲ, ನಾವೇ ಚರ್ಚೆ ಮಾಡಬಹುದು. ಹೀಗಾಗಿ ಈ ಸಭೆಗೆ ಯಾವ ಅಧಿಕಾರಿಗಳನ್ನು ಕರೆದಿಲ್ಲ. ನಾವೇ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಉತ್ತಮ ಖಾತೆಯನ್ನು ನೀಡಿದ್ದಾರೆ. ಅನಗತ್ಯವಾದ ಚರ್ಚೆಗಳನ್ನು ಬಿಟ್ಟು ಲಕ್ಷ ಜನರಿಗೆ ಉದ್ಯೋಗ ನೀಡುವ ಯೋಜನೆಗಳನ್ನು ತರಲು ಪ್ರಯತ್ನ ಮಾಡಲಿ. ಹಾಸನ, ಮಂಡ್ಯ, ಬೆಂಗಳೂರು, ಬೀದರ್‌, ಗುಲ್ಬರ್ಗದಂತಹ ಜಿಲ್ಲೆಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಲಿ. ನಮ ಸರ್ಕಾರ ಕೂಡ ಸಹಕಾರ ನೀಡಲಿದೆ. ರಾಜಕಾರಣ ಇದ್ದಿದ್ದೇ ಎಂದು ಸಲಹೆ ನೀಡಿದರು.

ಎಡಿಜಿಪಿ ಚಂದ್ರಶೇಖರ್‌ ಅವರು ಎಚ್‌.ಡಿ.ಕುಮಾರಸ್ವಾಮಿಯವರ ಕುರಿತು ಬರೆದಿರುವ ಪತ್ರ ಕೆಪಿಸಿಸಿ ಕಚೇರಿಯಲ್ಲಿ ತಯಾರಾಗಿದೆ ಎಂಬುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅದು ಅವರಿಬ್ಬರಿಗೂ ಸೇರಿದ ವಿಚಾರ. ತನಿಖೆ ಮಾಡುವವರು, ವರದಿ ನೀಡುವವರು ಚಂದ್ರಶೇಖರ್‌. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದರು.

ರಾಜ್ಯಸರ್ಕಾರವನ್ನು ಪತನಗೊಳಿಸಲು 1,200 ಕೋಟಿ ರೂ. ಸಿದ್ಧವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ಇದನ್ನು ಕಾಂಗ್ರೆಸ್‌‍ ಗಂಭೀರವಾಗಿ ಪರಿಗಣಿಸಿದೆ. ಹೈಕಮಾಂಡ್‌ಗೂ ಈ ವಿಚಾರವನ್ನು ತಿಳಿಸಲಾಗಿದ್ದು, ಪಕ್ಷದ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇವೆ. ಕಾನೂನು ಪ್ರಕಾರ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

RELATED ARTICLES

Latest News