Sunday, October 6, 2024
Homeರಾಜ್ಯಅಯೋಡಿನ್‌ ಕೊರತೆಯ ಬಗ್ಗೆ ಜಾಗೃತಿ ಅವಶ್ಯಕ: ಸಚಿವ ಡಾ. ಎಂ.ಸಿ. ಸುಧಾಕರ್‌

ಅಯೋಡಿನ್‌ ಕೊರತೆಯ ಬಗ್ಗೆ ಜಾಗೃತಿ ಅವಶ್ಯಕ: ಸಚಿವ ಡಾ. ಎಂ.ಸಿ. ಸುಧಾಕರ್‌

ಬೆಂಗಳೂರು: ಅಯೋಡಿನ್‌ ಕೊರತೆಯ ಬಗ್ಗೆ ಗರ್ಭಿಣಿಯರು, ಹಾಲುಣಿಸುವ ತಾಯಂದಿರುವ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಐಟಿಸಿ ಹಾಗೂ ಇನ್‌ಸ್ಟಿಟ್ಯೂಟ್‌ ಆಫ್‌ ಗ್ಲೋಬಲ್‌ ಡೆವಲಪ್‌ಮೆಂಟ್‌ (ಐಜಿಡಿ) ಅವರ ವಿನೂತನ “ಆಶೀರ್ವಾದ್‌ ಸ್ಮಾರ್ಟ್‌ ಇಂಡಿಯಾ” ಕಾರ್ಯಕ್ರಮ ಹೆಚ್ಚು ಪ್ರಸ್ತುತ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಹೇಳಿದರು.

ಐಟಿಸಿ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್ ಸಹಯೋಗದಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಡೆದ “ಆಶಿರ್ವಾದ್‌ ಸ್ಮಾರ್ಟ್‌ ಇಂಡಿಯಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಯೋಡಿನ್‌ ಕೊರತೆ ಬಗ್ಗೆ ಹೆಚ್ಚು ಅರಿವಿನ ಅಗತ್ಯವಿದೆ. ಅದರಲ್ಲೂ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಮಕ್ಕಳ ಬುದ್ದಿ ಬೆಳವಣಿಗೆಗೆ ಅಯೋಡಿನ್‌ನ ಅತ್ಯವಶ್ಯಕ. ಆದರೆ, ಬಡತನದ ಹಿನ್ನೆಲೆ ಇರುವವರು ಅಯೋಡಿನ್‌, ಪ್ರೊಟಿನ್‌, ವಿಟಮಿನ್ಸ್‌ಯುಕ್ತ ಆಹಾರ ಸೇವನೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರವು ಈಗಾಗಲೇ ಅಜೀಂ ಪ್ರೇಮ್‌ಜೀ ಫೌಂಡೇಷನ್‌ ಸಹಕಾರದಿಂದ ವಾರದಲ್ಲಿ ಆರು ದಿನವೂ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಜೊತೆಗೆ ಮಕ್ಕಳಿಗೆ ಹಾಲು ಸಹ ನೀಡಲಾಗುತ್ತಿದೆ, ಇದರಿಂದ ಮಕ್ಕಳಿಗೆ ಬೇಕಾದ ಅಯೋಡಿನ್‌ ದೊರೆಯುತ್ತಿದೆ.

ಯಾವುದೇ ಜಾಗೃತಿ ಕಾರ್ಯಕ್ರಮವೇ ಆಗಲಿ ಅದು ಶಾಲೆಗಳ ಮೂಲಕ ಮಕ್ಕಳಿಂದಲೇ ಶುರುವಾಗಬೇಕು. ಮಕ್ಕಳಿಗೆ ಅಯೋಡಿನ್‌ನ ಕೊರತೆಯಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದರೆ, ಅವರು ತಮ್ಮ ಕುಟುಂಬಸ್ಥರನ್ನು ಜಾಗೃತರನ್ನಾಗಿಸುತ್ತಾರೆ. ಹೀಗಾಗಿ ಐಟಿಸಿ ಅವರ ಈ ಸ್ಮಾರ್ಟ್‌ ಇಂಡಿಯಾ ಕಾರ್ಯಕ್ರಮ ಹೆಚ್ಚು ಪ್ರಸ್ತುತವೆಂದು ಹೇಳಿದರು.

ಇಂದು ಕ್ರಿಮಿನಾಶಕಗಳ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಂಡಿದ್ದು, ಅದರಲ್ಲಿ ಬೆಳೆಯುವ ಬೆಳೆಯಲ್ಲೂ ಅಯೋಡಿನ್‌ ಸಿಗುತ್ತಿಲ್ಲ. ಕುಡಿಯುವ ನೀರಿನಲ್ಲೂ ಸಹ ಮಿನರಲ್ಸ್‌ ಕೊರತೆಯಾಗಿದೆ. ಈ ಎಲ್ಲದರ ಪರಿಣಾಮ ಕುಡಿಯುವ ನೀರು, ಸೇವಿಸುವ ಆಹಾರದಲ್ಲಿ ಅಯೋಡಿನ್‌ ಪಡೆಯಲಾಗುತ್ತಿಲ್ಲ. ಇದಕ್ಕೆ ಸಪ್ಲಿಮೆಂಟ್‌ನ ಅವಶ್ಯಕತೆ ಇದೆ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಹಕಾರದಲ್ಲಿ ಎಲ್ಲೆಡೆ ಅಯೋಡಿನ್‌ ಕೊರತೆ ನೀಗಿಸುವ ಕುರಿತು ಜಾಗೃತಿ ಮೂಡಿಸುವ ಹೆಜ್ಜೆ ಇಡುವುದು ಅನಿವಾರ್ಯ ಎಂದು ತಿಳಿಸಿದರು.

ಐಟಿಸಿ ಲಿಮಿಟೆಡ್‌ನ ಸ್ಟೇಪಲ್ಸ್ & ಅಡ್ಜೆಸೆನ್ಸಿಸ್ ಅನುಜ್ ರುಸ್ತಗಿ ಮಾತನಾಡಿ, ITC ಲಿಮಿಟೆಡ್ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್ ಸಹಯೋಗದೊಂದಿಗೆ ಆಶೀರ್ವಾದ ಸ್ಮಾರ್ಟ್ ಇಂಡಿಯಾ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಈ ಉಪಕ್ರಮದ ಅಡಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 30 ಜಿಲ್ಲೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಅಯೋಡಿನ್ ಸೇವನೆ ಮತ್ತು ಸಮತೋಲಿತ ಪೋಷಣೆಯ ಪ್ರಾಮುಖ್ಯತೆಯ ಬಗ್ಗೆ ಹಾಗೂ ಅಯೋಡಿನ್ ಕೊರತೆಯ ಅಸ್ವಸ್ಥತೆಗಳ (ಐಡಿಡಿ) ಸಮಸ್ಯೆಯನ್ನು ಗುರಿಯಾಗಿಟ್ಟುಕೊಂಡು ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.

“ರಾಷ್ಟ್ರೀಯ ಅಯೋಡಿನ್ ಸಮೀಕ್ಷೆಯ ಪ್ರಕಾರ, ಸುಮಾರು 50ರಷ್ಟು ವಯಸ್ಕರು ಅಯೋಡಿನ್ ಯುಕ್ತ ಉಪ್ಪಿನ ಬಗ್ಗೆ ತಿಳಿದಿಲ್ಲ. ಶೇ.31 ರಷ್ಟು ವಯಸ್ಕರು ಪ್ಯಾಕ್ನಲ್ಲಿ ದೊರೆಯುವ ಎಲ್ಲವೂ ಶುದ್ಧ ಅಯೋಡಿಕರಿಸಿದ ಉಪ್ಪು ಎಂಬ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ನಾವು ಸಾಮಾನ್ಯವಾಗಿ ಸೇವಿಸುವ ಆಹಾರದಿಂದ ಅಯೋಡಿನ್ ಅನ್ನು ಪೂರೈಸುವ ಮೂಲಕ ಅಯೋಡಿನ್ ಕೊರತೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಕಾರ್ಯಕ್ರಮದೊಂದಿಗೆ, ನಾವು ಅಯೋಡಿನ್ ಸೇವನೆ ಮತ್ತು ಆರೋಗ್ಯಕರ ಆಹಾರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದೇವೆ. ನಮ್ಮ ಉಪಕ್ರಮವು ಸಮುದಾಯಗಳು, ಶಾಲೆಗಳು ಮತ್ತು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಹೆಜ್ಜೆ ಇಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಐಜಿಡಿ ಪ್ರಾಜೆಕ್ಟ್‌ ನಿರ್ದೇಶಕ ಡಾ. ಶಾಂತನು ಶರ್ಮಾ, “ಮೆದುಳಿನ ಹಾನಿ ಮತ್ತು ಬುದ್ಧಿಮಾಂದ್ಯತೆಯು ಅಯೋಡಿನ್ ಕೊರತೆಯಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗಲಿದೆ. ಅಯೋಡಿನ್‌ ಪ್ರಮುಖವಾಗಿ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ, ಚಯಾಪಚಯ ಕ್ರಿಯೆಯ ನಿಯಂತ್ರಣಕ್ಕೆ ಅಗತ್ಯವಿದೆ. ಅಯೋಡಿನ್‌ ಗರ್ಭಿಣಿ ಮತ್ತು ಶುಶ್ರೂಷಾ ತಾಯಂದಿರಿಗೆ ಇದು ಹೆಚ್ಚು ಮುಖ್ಯವಾಗಿದೆ. ಏಕೆಂದರೆ ಅಯೋಡಿನ್ ಕೊರತೆಯಿಂದ ಗರ್ಭಪಾತ ಮತ್ತು ಭ್ರೂಣಗಳ ಸಾವಿಗೆ ಕಾರಣವಾಗಬಹುದು.

1962 ರಲ್ಲಿ ಭಾರತ ಸರ್ಕಾರವು ಸಾಮಾನ್ಯ ಉಪ್ಪನ್ನು ಅಯೋಡಿಕರಿಸಿದ ಉಪ್ಪಿನೊಂದಿಗೆ ರಾಷ್ಟ್ರೀಯ ಗಾಯಿಟರ್ ನಿಯಂತ್ರಣ ಕಾರ್ಯಕ್ರಮವಾಗಿ ಉಪ್ಪು ಅಯೋಡೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಿತು. 2005 ರಲ್ಲಿ, ಸಾರ್ವತ್ರಿಕ ಉಪ್ಪು ಅಯೋಡೀಕರಣವನ್ನು ದೇಶದಲ್ಲಿ ಕಡ್ಡಾಯಗೊಳಿಸಲಾಯಿತು. ಆದರೂ, ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ರ ಪ್ರಕಾರ, ಅಯೋಡಿಕರಿಸಿದ ಲವಣಗಳ ವ್ಯಾಪ್ತಿಯು ಇನ್ನೂ ಶೇ.100ರಷ್ಟು ತಲುಪಿಲ್ಲ. ಇದು ಮುಖ್ಯವಾಗಿ ಅಯೋಡಿಕರಿಸಿದ ಉಪ್ಪು ಲಭ್ಯವಿಲ್ಲದಿರುವುದು ಮತ್ತು ಅಯೋಡಿನ್ ಕೊರತೆಯ ಕಾಯಿಲೆಗಳ ಕಳಪೆ ಜ್ಞಾನದಿಂದಾಗಿ ಸಾಕಷ್ಟು ಜನರು ಅಯೋಡಿನ್‌ ಕೊರತೆಯಿಂದ ಬಳಲುತ್ತಿದ್ದಾರೆ.

RELATED ARTICLES

Latest News