ಬೆಂಗಳೂರು,ಅ.1- ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ದುರುದ್ದೇಶಪೂರಕವಾಗಿ ರಾಜಕೀಯ ಮಾಡುತ್ತಿವೆ. ಏನೇ ಮಾಡಿದರೂ ಟೀಕೆ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿ ದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಸಿದ್ದರಾಮಯ್ಯ ಅವರಿಗೆ ಮಾನಸಿಕವಾಗಿ ಹಿಂಸೆ ನೀಡುವ ಪ್ರವೃತ್ತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಮತ್ತೊಂದೆಡೆ ಹರಿಯಾಣ ವಿಧಾನಸಭಾ ಚುನಾವಣಾ ಕಣದಲ್ಲಿ ಪ್ರಧಾನಮಂತ್ರಿಯವರು ಮುಡಾ ಪ್ರಕರಣವನ್ನು ಪ್ರಸ್ತಾಪಿಸುವ ಮೂಲಕ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಹೇಳಿದರು.
ಬಿಜೆಪಿ, ಜೆಡಿಎಸ ಪಕ್ಷಗಳು ಜೊತೆಯಾಗಿ ಸೇರಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿವೆ ಎಂದರು.ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಪಡೆದಿದ್ದ 14 ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಇದಕ್ಕೂ ಬಿಜೆಪಿಯವರು ನಾನಾ ರೀತಿಯ ಟೀಕೆಗಳನ್ನು ಮಾಡುತ್ತಿದ್ದಾರೆ. ರಾಜಕೀಯ ಮಾಡಬೇಕು, ಅಪಪ್ರಚಾರ ನಡೆಸಬೇಕು ಎಂದು ನಿರ್ಧರಿಸಿಕೊಂಡವರಿಗೆ ಯಾರು, ಏನೇ ಮಾಡಿದರೂ ತಪ್ಪಾಗಿ ಕಾಣುತ್ತದೆ ಎಂದು ಹೇಳಿದರು.
ನಿವೇಶನ ವಾಪಸ್ ನೀಡಿದ ಬಳಿಕ ಪ್ರಕರಣ ಕಾನೂನಾತಕವಾಗಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ನಾವು ಕಾದುನೋಡುತ್ತಿದ್ದೇವೆ. ತನಿಖೆಗೆ ಯಾವುದೇ ವಿರೋಧ ಇಲ್ಲ ಎಂದು ಸಿದ್ದರಾಮಯ್ಯನವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವಿರೋಧಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪದಲ್ಲಿ ಸತ್ಯ ಇದ್ದಾಗ ನೈತಿಕತೆಯ ಪ್ರಶ್ನೆ ಬರುತ್ತದೆ. ಮುಡಾ ಪ್ರಕರಣದಲ್ಲಿ ಆರೋಪಗಳೇ ಸುಳ್ಳಾಗಿವೆ. ಹೀಗಾಗಿ ಇಲ್ಲಿ ನೈತಿಕತೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಪಾರ್ವತಿಯವರು ಪತಿ ಸಿದ್ದರಾಮಯ್ಯನವರ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕಾಗಿ ನಿವೇಶನವನ್ನು ವಾಪಸ್ ನೀಡಿದ್ದಾರೆ. ರಾಜಕೀಯವಾಗಿ ಇಲ್ಲಸಲ್ಲದ ಆರೋಪಗಳು ಬರುತ್ತಿವೆ ಎಂಬ ಕಾರಣಕ್ಕಾಗಿಯೂ ಪಾರ್ವತಿಯವರು ನಿವೇಶನ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಇದರಲ್ಲಿ ತಪ್ಪು ಒಪ್ಪಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಸಿದ್ದರಾಮಯ್ಯನವರ ಕಡೆಗೆ ಇಡೀ ಕಾಂಗ್ರೆಸ್ ಪಕ್ಷ ನಿಂತಿದೆ. 136 ಶಾಸಕರ ಜೊತೆ ಕಾಂಗ್ರೆಸ್ ಹೈಕಮಾಂಡ್ ಕೂಡ ಬೆಂಬಲ ವ್ಯಕ್ತಪಡಿಸುವುದಾಗಿ ಸ್ಪಷ್ಟಪಡಿಸಿದೆ. ಮುಂದೆಯೂ ಇದು ಮುಂದುವರೆಯಲಿದೆ ಎಂದು ತಿಳಿಸಿದರು.ಜಾರಿ ನಿರ್ದೇಶನಾಲಯದ ತನಿಖೆಯಿಂದ ಲೋಕಾಯುಕ್ತ ತನಿಖೆಗೆ ಹಿನ್ನಡೆಯಾಗಲಿದೆಯೇ ಎಂಬುದನ್ನು ಲೋಕಾಯುಕ್ತ ಪೊಲೀಸರು ತಿಳಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.