ಜೆರುಸೆಲಮ್,ಅ.2– ಹಿಜ್ಬುಲ್ಲಾ ನಾಯಕತ್ವವನ್ನು ಹತ್ಯೆ ಮಾಡಿದ ಬೆನ್ನಲ್ಲೇ ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ತೀವ್ರಗೊಂಡಿದ್ದು, ಇರಾನ್ 200ಕ್ಕೂ ಹೆಚ್ಚು ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್ ನಾಗರಿಕ ಪ್ರದೇಶಗಳ ಮೇಲೆ ಉಡಾವಣೆ ಮಾಡಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರತಿ ದಾಳಿ ಆರಂಭಿಸಿದೆ. ಹೀಗಾಗಿ ಜಾಗತಿಕವಾಗಿ ಮತ್ತೊಂದು ಯುದ್ಧದ ಭೀತಿ ಎದುರಾಗಿದೆ.
ಈಗಾಗಲೇ ರಷ್ಯಾ ಮತ್ತು ಉಕ್ರೇನ್ ಯುದ್ಧ ಸಂಘರ್ಷದಿಂದಾಗಿ ಜಾಗತಿಕವಾಗಿ ಆರ್ಥಿಕ, ಸಾಮಾಜಿಕ ಏರಿಳಿತಗಳು ತೀವ್ರವಾಗಿವೆ. ಅದರ ಬೆನ್ನಲ್ಲೇ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಹಾಗೂ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ನಡುವೆ ಸಂಘರ್ಷಮಯ ವಾತಾವರಣವಿದ್ದು, ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.
ಹಿಜ್ಬುಲ್ನ ಪರಮೋಚ್ಛ ನಾಯಕ ಹಸನ್ ನಸ್ರುಲ್ಲಾನನ್ನು ಹತ್ಯೆ ಮಾಡಿದ್ದಕ್ಕಾಗಿ ಇರಾನ್ ಪ್ರತಿಕಾರ ತೀರಿಸಿಕೊಳ್ಳಲಿದೆ. ಇಸ್ರೇಲ್ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ಮಾಡಬಹುದು ಎಂಬ ಮುನ್ಸೂಚನೆಯನ್ನು ಅಮೆರಿಕ ನೀಡಿದ ಕೆಲವೇ ಘಂಟೆಗಳಲ್ಲಿ 180 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಇರಾನ್ ಇಸ್ರೇಲ್ನ ಜನವಸತಿ ಪ್ರದೇಶದ ಮೇಲೆ ಉಡಾವಣೆ ಮಾಡಿದೆ. ಇದರಿಂದ ಹೆಚ್ಚಿನ ಹಾನಿ ಆಗಿಲ್ಲ. ಬಲಿಷ್ಠ ಇಸ್ರೇಲ್ ಸೇನೆ ದಾಳಿಯನ್ನು ಸಮರ್ಥವಾಗಿ ಪ್ರತಿರೋಧಿಸಿದೆ.
ಕ್ಷಿಪಣಿಗಳಿಂದ ಹೆಚ್ಚಿನ ಹಾನಿ ಆಗಿಲ್ಲ. ಆದರೂ ಕೆಲವು ಇಸ್ರೇಲ್ನ ಜನವಸತಿ ಪ್ರದೇಶಗಳಲ್ಲಿ ನೆಲಕ್ಕಪ್ಪಳಿಸಿವೆ. ಯಾವುದೇ ಸಾವು-ನೋವುಗಳಾಗಿಲ್ಲ. ಆಸ್ತಿಗಳಿಗೂ ಹೆಚ್ಚಿನ ಹಾನಿಯಾಗಿಲ್ಲ ಎಂದು ವರದಿಯಾಗಿದೆ.ಇರಾನ್ನ ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಇಸ್ರೇಲ್ನ ಪ್ರಧಾನಿ ಬೆಂಜುಮಿನ್ ನೆತ್ಯಾಹು ಎಚ್ಚರಿಕೆ ನೀಡಿದ್ದಾರೆ. ಇರಾನ್ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ಖಂಡಿತ ಬೆಲೆ ತೆರಬೇಕು ಎಂದು ಕಳೆದ ತಡರಾತ್ರಿ ನಡೆದ ತುರ್ತು ಭದ್ರತಾ ಸಂಪುಟ ಸಭೆಯ ಬಳಿಕ ಘೋಷಣೆ ಮಾಡಿದ್ದಾರೆ.
ಕ್ಷಿಪಣಿ ದಾಳಿಗಳು ವಿಫಲಗೊಂಡಿವೆ. ಈ ಮೊದಲು ಗಾಜಾ, ಲೆಬನಾನ್ ಹಾಗೂ ಇತರರಿಗೆ ಪಾಠ ಕಲಿಸಿದಂತೆ ಕ್ಷಿಪಣಿ ದಾಳಿ ನಡೆಸಿದ ಇರಾನ್ಗೆ ಅತ್ಯಂತ ನೋವಿನ ಪಾಠ ಕಲಿಸಲಾಗುವುದು. ನಮ ಮೇಲೆ ಯಾರು ದಾಳಿ ಮಾಡುತ್ತಾರೋ ಅವರ ವಿರುದ್ಧ ನಾವು ಪ್ರತಿದಾಳಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ತೀಕ್ಷ್ಣ ಪ್ರತಿಕ್ರಿಯೆಗಾಗಿ ಈಗಾಗಲೇ ಇಸ್ರೇಲ್ ಕ್ಷಿಪಣಿ ಉಡಾವಣೆ ಸೇರಿದಂತೆ ಯುದ್ಧ ಸಲಕರಣೆಗಳ ಬಳಕೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.ಇರಾನ್ ಕ್ಷಿಪಣಿ ದಾಳಿಗಷ್ಟೇ ಸೀಮಿತವಾದರೆ ಭೂಪ್ರದೇಶದಲ್ಲೂ ಉಗ್ರರನ್ನು ನುಗ್ಗಿಸಿ ನೇರ ಯುದ್ಧ ಮಾಡುವ ಪ್ರಯತ್ನ ನಡೆಸಿತ್ತು. ಈವರೆಗಿನ ವರದಿ ಪ್ರಕಾರ ಅತಿಕ್ರಮಣವಾಗಿ ಒಳನುಸುಳಿ ಮನಸೋ ಇಚ್ಛೆ ಗುಂಡು ಹಾರಿಸುತ್ತಿದ್ದ ಇಬ್ಬರು ಉಗ್ರರನ್ನು ಇಸ್ರೇಲ್ ಭದ್ರತಾ ಅಧಿಕಾರಿಗಳು ಹೊಡೆದುರುಳಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಈ ಸಂಘರ್ಷಮಯ ವಾತಾವರಣ ಜಾಗತಿಕವಾಗಿ ಮತ್ತಷ್ಟು ಸಂಕಷ್ಟಗಳ ಮುನ್ಸೂಚನೆಯನ್ನು ನೀಡಿದೆ.ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ. ಅಮೆರಿಕ ಇಸ್ರೇಲ್ಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ.
ಅರಬ್ ರಾಷ್ಟ್ರಗಳ ಅಭಿಪ್ರಾಯಗಳು ಹಾಗೂ ನಿಲುವುಗಳು ಇನ್ನೂ ಮುಗುಂ ಆಗಿಯೇ ಉಳಿದಿವೆ.ಈ ನಡುವೆ ಯಾವುದೇ ಕ್ಷಣದಲ್ಲಾದರೂ ಮತ್ತೊಂದು ಸುತ್ತಿನ ಅಪಾಯಕಾರಿ ಆಗುವ ಕ್ಷುದ್ರ ಸನ್ನಿವೇಶವನ್ನು ವಿಶ್ವ ಎದುರು ನೋಡುವಂತಾಗಿದೆ.