ಲಕ್ನೋ, ಜ.14- ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೆಂದು ಪರಿಚಯಿಸಿಕೊಂಡು ಪುರಷನೊಂದಿಗೆ ಮಾತುಕತೆ ನಡೆಸಿ ಮೋಹದ ಬಲೆಗೆ ಬೀಳಿಸಿ ಆತನಿಂದ ಸುಮಾರು 1.92 ಕೋಟಿ ರೂ.ಸುಲಿಗೆ ಮಾಡಿದ್ದ ಸೈಬರ್ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಗುಡಂಬಾ ಪೊಲೀಸ್ ಠಾಣೆ ವ್ಯಾಪ್ತಿಯ ಮಿಶ್ರಿಪುರ ಡಿಪೋ ಪ್ರದೇಶದ ನಿವಾಸಿ ಇಮ್ರಾನ್ ಘಾಜಿ (34) ಬಂಧಿತ ಆರೋಪಿ.
ಭಾವಿಕಾ ಶೆಟ್ಟಿ ಎಂದು ಗುರುತಿಸಿಕೊಂಡಿದ್ದ ಆರೋಪಿ ಮಹಿಳೆಯಂತೆ ನಟಿಸಿ ವಾಟ್ಸಾಪ್ನಲ್ಲಿ ಸ್ನೇಹ ಬೆಳೆಸಿ ನಂತರ ಹೆಚ್ಚಿನ ಆದಾಯವನ್ನು ನೀಡುವ ಭರವಸೆ ಮೂಲಕ ಹಣ ಹೂಡಿಕೆ ಮಾಡುವಂತೆ ಮಾಡಿ ವಿವಿಧ ಬ್ಯಾಂಕ್ ಖಾತೆಗಳಿಗೆ 1.92 ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡಿದ್ದ.
ವಂಚನೆ ಕುರಿತು ಶಲಭ್ ಪಾಂಡೆ ಎಂಬುವವರು ಕಳೆದ ಜೂನ್ 2ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೆರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆಯ ನಂತರ ಪೊಲೀಸ್ ತಂಡವು ಆರೋಪಿ ಘಾಜಿ ಎಂಬಾತನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಆರೋಪಿಯು ತನ್ನ ಆಕ್ಸಿಸ್ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ ನಂತರ, ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ಪಡೆದುಕೊಂಡು ವಂಚನೆಯ ಹಣವನ್ನು ಪಡೆಯಲು ಸಹಚರ ಶೆಹಜಾದ್ ಎಂಬಾತನ ಸಹಾಯದಿಂದ ಬಹುಬ್ಯಾಂಕ್ ಖಾತೆಗಳನ್ನು ತೆರೆದಿದ್ದಾನೆ ಎಂಬುದು ಗೊತ್ತಾಗಿದೆ.
ವಂಚನೆಯಿಂದ ಬಂದ ಮೊತ್ತದಲ್ಲಿ 54 ಲಕ್ಷ ರೂ.ಗಳನ್ನು ಘಾಜಿಯ ಖಾತೆಗಳ ಮೂಲಕ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಒಂದು ತಿಂಗಳೊಳಗೆ ಸುಮಾರು 1.52 ಕೋಟಿ ರೂ.ಗಳ ವಹಿವಾಟು ನಡೆಸಿರುವುದು ತೋರಿಸುತ್ತದೆ. ಆರೋಪಿಗಳಿಂದ ನಕಲಿ ಗುರುತಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಜಾಲದ ಇತರ ಸದಸ್ಯರನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
