ಬೆಂಗಳೂರು, ಅ..3-ನಿನ್ನೆ ರಾತ್ರಿ ಬಿದ್ದ ಭಾರಿ ಮಳೆ ಹಾಗೂ ಸಿಡಿಲಿನ ಹೊಡೆತದಿಂದ ಹಾರೋಹಳ್ಳಿ ಹಾಗೂ ತೊರೆಕಾಡನಹಳ್ಳಿ ವ್ಯಾಪ್ತಿಯಲ್ಲಿನ ಟ್ರಾನ್‌್ಸಫಾರ್ಮರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ನೀರು ಪೂರೈಕೆಯಲ್ಲಿ ನಗರದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿನ್ನೆ ರಾತ್ರಿ ಗುಡುಗು ಸಹಿತ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ಪಂಪಿಂಗ್ ಸ್ಟೇಷನ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುವ ಲೈನ್‌ಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ ಎಂದಿದ್ದಾರೆ.
ನಿನ್ನೆ ರಾತ್ರಿ 11 ಗಂಟೆಯಿಂದ ಪ್ರಮುಖ ಪಂಪಿಂಗ್ ಸ್ಟೇಷನ್‌ಗಳಾದ ಟಿ.ಕೆ.ಹಳ್ಳಿ ಹಾಗೂ ಹಾರೋಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಸಂಪರ್ಕವಿಲ್ಲದೆ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಪ್ರಮುಖ ಪಂಪಿಂಗ್ ಸ್ಟೇಷನ್‌ಗಳು ಸ್ಥಗಿತಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಸಂಪರ್ಕ ಮರುಸ್ಥಾಪನೆಗೊಂಡು ಯಥಾಸ್ಥಿತಿಗೆ ಮರಳುವವರೆಗೂ ಬೆಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕೆಪಿಟಿಸಿಎಲ್ ವತಿಯಿಂದ ರಿಪೇರಿ ಕೈಗೊಂಡ ನಂತರವಷ್ಟೇ ನೀರು ಪೂರೈಕೆಯಲ್ಲಿ ಯಥಾಸ್ಥಿತಿಗೆ ಮರಳಲಿದೆ ಎಂದು ಅವರು ಹೇಳಿದ್ದಾರೆ.