ಇಂಫಾಲ್,ಅ.3– ಮಣಿಪುರದ ಹಲವು ಜಿಲ್ಲೆಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಾಗರೂಕರಾಗಿರಲು ಎಲ್ಲ 16 ಜಿಲ್ಲಾ ಪೊಲೀಸ್ ವರಿಷ್ಠರಿಗೆ ಗೃಹ ಇಲಾಖೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಉಖ್ರುಲ್ ಜಿಲ್ಲೆಯಲ್ಲಿ ಬುಧವಾರ ಎರಡು ನಾಗಾ ಗ್ರಾಮಗಳ ನಿವಾಸಿಗಳ ನಡುವೆ ಘರ್ಷಣೆ ನಡೆದಿದೆ. ಎರಡು ಗ್ರಾಮಗಳ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗುಂಡಿನ ಕಾಳಗದಲ್ಲಿ ಮಣಿಪುರ ರೈಫಲ್ಸ್ ಸೈನಿಕ ಸೇರಿದಂತೆ ಮೂವರು ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ.
ಈ ಘಟನೆ ವರದಿಯಾದ ಬಳಿಕ ಮಣಿಪುರ ಪೊಲೀಸರು ಎಲ್ಲಾ 16 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗೆ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ -ಎಡಿಜಿ ಎಲ್. ಕೈಲುನ್ ಹೊರಡಿಸಿರುವ ತುರ್ತು ಸಂದೇಶದಲ್ಲಿ ಎಲ್ಲಾ 16 ಜಿಲ್ಲಾ ಎಸ್‌ಪಿಗಳಿಗೆ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಶಸಾ್ತ್ರಸ್ತ್ರ ಮತ್ತು ಮದ್ದುಗುಂಡುಗಳಿಗೆ ಸರಿಯಾದ ಭದ್ರತೆ ಖಚಿತಪಡಿಸಿಕೊಳ್ಳಬೇಕು. ಎಲ್ಲ ಅಧಿಕಾರಿಗಳು, ಪೊಲೀಸ್ ಠಾಣೆಗಳು, ಔಟ್‌ಪೋಸ್ಟ್‌ಗಳು ಮತ್ತು ನಾಕಾ ಪಾಯಿಂಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಎಡಿಜಿ ತಮ ತುರ್ತು ಸಂದೇಶದಲ್ಲಿ ತಿಳಿಸಿದ್ದಾರೆ.
ಶಾಂತಿ ಕಾಪಾಡುವಂತೆ ಸಿಎಂ ಮನವಿ: ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಮೂವರು ನಾಗಾಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಜನರು ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ಕೂಡ ಕೊಟ್ಟಿದ್ದಾರೆ.
ಎಲ್ಲಾ ಗಾಯಾಳುಗಳಿಗೆ ಇಂಫಾಲ್ ಮತ್ತು ಉಖ್ರುಲ್‌ನಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲು ಸರ್ಕಾರದಿಂದ ಸಹಾಯ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬುಧವಾರ ರಾತ್ರಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇಟಿ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರ ಅಪಹರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 27ರಿಂದ ಕಣಿವೆಯ ಆರು ಜಿಲ್ಲೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ಜಿಲ್ಲೆಗಳಲ್ಲಿ ಪೊಲೀಸರು ಈಗಲೂ ಸಹ ಕಟ್ಟೆಚ್ಚರ ವಹಿಸಿದ್ದಾರೆ.
ಏತನಧ್ಯೆ ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಲೀಶಾಂಗ್ ಗ್ರಾಮದ ಬಳಿ ಮಂಗಳವಾರ ಅಪರಿಚಿತ ಬಂದೂಕುಧಾರಿಗಳು ನಿಷೇಧಿತ ಉಗ್ರಗಾಮಿ ಸಂಘಟನೆಯ ಸ್ವಯಂಘೋಷಿತ ಪಟ್ಟಣದ ಕಮಾಂಡರ್‌ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹತ್ಯೆಗೀಡಾದ ಉಗ್ರಗಾಮಿಯನ್ನು ಸೆಖೋಹಾವೊ ಹಾಕಿಪ್ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.
ಯುವಕರ ಬಿಡುಗಡೆಗೆ ಒತ್ತಾಯಿಸಿ ಬಂದ್:
ಇಬ್ಬರು ಯುವಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಬಂದ್‌ನಿಂದಾಗಿ ಮಣಿಪುರದ ಆರು ಕಣಿವೆ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಂಗಡಿಗಳು, ಮಾರುಕಟ್ಟೆಗಳು, ವಾಣಿಜ್ಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳು ಮುಚ್ಚಲ್ಪಟ್ಟಿವೆ ಮತ್ತು ಸ್ಥಗಿತದ ದೃಷ್ಟಿಯಿಂದ ಖಾಸಗಿ ವಾಹನಗಳು ರಸ್ತೆಯಿಂದ ಹೊರಗುಳಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದ್ ಬಗ್ಗೆ ಮಾತನಾಡಿರುವ ಜೆಎಸಿ ಸಂಚಾಲಕ ಎಲ್.ಸುಬೋಲ್, ಇಬ್ಬರು ಯುವಕರನ್ನು ಬಿಡುಗಡೆ ಮಾಡುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಯುವಕರನ್ನು ಬಿಡುಗಡೆ ಮಾಡುವಂತೆ ವಿವಿಧ ನಾಗರಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಎನ್‌ಜಿಒಗಳು ರಾಜ್ಯ ಸರ್ಕಾರ ಮತ್ತು ಕುಕಿ ಹೋರಾಟಗಾರರನ್ನು ಒತ್ತಾಯಿಸುತ್ತಿವೆ.
ಘಟನೆಯ ಹಿನ್ನೆಲೆ:
ತೌಬಲ್ ಜಿಲ್ಲೆಯ ನಿವಾಸಿಗಳಾದ ಮೂವರು ಯುವಕರು ಸೆಪ್ಟೆಂಬರ್ 27 ರಂದು ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ನಡುವಿನ ನ್ಯೂ ಕೀಥೆಲ್‌ಮಂಬಿಯಲ್ಲಿ ಸೇನಾ ನೇಮಕಾತಿ ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದಾಗ ಶಸ್ತ್ರಸಜ್ಜಿತ ಕುಕಿ ಉಗ್ರಗಾಮಿಗಳು ಅವರನ್ನು ಅಪಹರಿಸಿದ್ದರು. ಅಪಹರಣಕ್ಕೊಳಗಾದ ಇಬ್ಬರು ಯುವಕರನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಅವರನ್ನು ಕೇಳಿದ್ದೇನೆ ಎಂದು ಮಣಿಪುರ ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದರು.
ಇಬ್ಬರು ಯುವಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಕೇಂದ್ರ ಮತ್ತು ರಾಜ್ಯ ಭದ್ರತಾ ಪಡೆಗಳು ತಮ ಪ್ರಯತ್ನವನ್ನು ಮುಂದುವರೆಸಿವೆ, ಡಿಜಿಪಿ ಅವರೇ ಸ್ಥಳಕ್ಕೆ ತೆರಳಿ ಅಪಹರಣಕಾರರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಸಕಾರಾತಕ ಫಲಿತಾಂಶ ಬರುತ್ತದೆ ಎಂದು ನಾವು ಭಾವಿಸುತ್ತೇವೆ. ಅಪಹರಣಕಾರರು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ, ಆದರೆ ನಾವು ಇಬ್ಬರು ಯುವಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ಈ ಹಿಂದೆಯೇ ಮಾಹಿತಿ ನೀಡಿದ್ದರು.