Sunday, October 6, 2024
Homeರಾಜ್ಯನಾಡಹಬ್ಬ ಮೈಸೂರು ದಸರಾಗೆ ಹಿರಿಯ ಸಾಹಿತಿ, ನಾಡೋಜ ಹಂಪನಾ ಅವರಿಂದ ಅದ್ದೂರಿ ಚಾಲನೆ

ನಾಡಹಬ್ಬ ಮೈಸೂರು ದಸರಾಗೆ ಹಿರಿಯ ಸಾಹಿತಿ, ನಾಡೋಜ ಹಂಪನಾ ಅವರಿಂದ ಅದ್ದೂರಿ ಚಾಲನೆ

Mysuru Dasara inauguration by Nadoja Hampa Nagarajaiah

ಮೈಸೂರು,ಅ.3- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಮೂಲಕ ರಾಜ್ಯದೆಲ್ಲೆಡೆ ನವರಾತ್ರಿ ಹಬ್ಬ ಆರಂಭವಾಯಿತು.ಬೆಳಗ್ಗೆ 9.15 ರಿಂದ 9.45 ರವರೆಗಿನ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬ ದಸರಾಗೆ ಚಾಲನೆ ನೀಡಲಾಯಿತು.

ಹಿರಿಯ ಸಾಹಿತಿ, ನಾಡೋಜ ಡಾ.ಹಂಪ ನಾಗರಾಜಯ್ಯನವರು ದಸರಾ ಮಹೋತ್ಸವವನ್ನು ಉದ್ಘಾಟಿಸುವ ಮೂಲಕ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡಿ ವೈಭವದ ದಸರಾಗೆ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಹೆಚ್‌.ಸಿ.ಮಹದೇವಪ್ಪ, ಹೆಚ್‌.ಕೆ.ಪಾಟೀಲ್‌, ಶಿವರಾಜ್‌ ತಂಗಡಗಿ, ಕೆ.ವೆಂಕಟೇಶ್‌, ಕೆ.ಹೆಚ್‌.ಮುನಿಯಪ್ಪ, ಶಾಸಕ ಶ್ರೀವತ್ಸ ಸೇರಿದಂತೆ ಗಣ್ಯಾತಿಗಣ್ಯರು ಸಮಾರಂಭವನ್ನು ಸಾಕ್ಷೀಕರಿಸಿದರು.

ದಸರಾ ಉದ್ಘಾಟನೆಗೂ ಮುನ್ನ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ವಾಲಂಕೃತಳಾದ ಲೋಕಮಾತೆ ಚಾಮುಂಡಿ ದೇವಿಗೆ ಸರ್ವರೂ ನಮಿಸಿ ದಸರೆಯ ಯಶಸ್ಸಿಗೆ ಪ್ರಾರ್ಥಿಸಿದರು.ಇದಕ್ಕೂ ಮುನ್ನ ಗಣ್ಯರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಗಣ್ಯರೆಲ್ಲರೂ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ದೇವಿಯ ದರ್ಶನ ಪಡೆದು ಪುನೀತರಾದರು. ನಂತರ ವೇದಿಕೆಗೆ ಆಗಮಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ದಸರಾ ಚಲನಚಿತೋತ್ಸವ ಉದ್ಘಾಟನೆ: ದಸರಾ ನಿಮಿತ್ತ ಇಂದು ಬೆಳಗ್ಗೆ 11.30ಕ್ಕೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿನ ಘಟಿಕೋತ್ಸವ ಭವನದಲ್ಲಿ ದಸರಾ ಚಲನಚಿತೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ದಸರಾ ಆಹಾರ ಮೇಳವನ್ನು ಬೆಳಗ್ಗೆ 11.30ಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್‌. ಮುನಿಯಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಮತ್ತು ಸರ್ಕಾರದ ವಿವಿಧ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಪಾಲ್ಗೊಂಡರು.


ಫಲಪುಷ್ಪ ಪ್ರದರ್ಶನ : ಮಧ್ಯಾಹ್ನ 12.30 ಕ್ಕೆ ನಗರದ ಕುಪ್ಪಣ್ಣ ಪಾರ್ಕ್‌ (ನಿಶಾದ್‌ ಬಾಗ್‌)ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಸಂಜೆ 4 ಗಂಟೆಗೆ ಸಿದ್ಧಾರ್ಥ ನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ರಾಜ್ಯಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರದಲ್ಲಿ ರಚಿಸಲಾದ ಕಲಾಕೃತಿಗಳ ಪ್ರದರ್ಶನ, ಲಲಿತ ಕಲೆ, ಕರಕುಶಲ ಕಲೆಗಳ ಕಲಾಕೃತಿ ಪ್ರದರ್ಶನ ಮತ್ತು ರಾಷ್ಟ್ರಮಟ್ಟದ ಕರಕುಶಲ ಕಲೆಗಳ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅವರು ಉದ್ಘಾಟಿಸಿದರು.

ಸಂಜೆ 5 ಗಂಟೆಗೆ ನಗರದ ಭಾರತ್‌ ಸ್ಕೌಟ್ಸ್‌‍ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅವರು ಉದ್ಘಾಟಿಸಿದರು.
ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ ಸಿಎಂ ಸಿದ್ದರಾಮಯ್ಯನವರು ಸಂಜೆ 4.30 ಕ್ಕೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.

ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿನ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಚಾಲನೆ ನೀಡಿದರು.

ದಸರಾ ನವರಾತ್ರಿ ಜಾನಪದ ರಂಗ ಉತ್ಸವ ಉದ್ಘಾಟನೆ:
ಸಂಜೆ 5.30 ಗಂಟೆಗೆ ನಗರದ ಕಲಾಮಂದಿರದಲ್ಲಿನ ರಂಗಾಯಣದ ಭೂಮಿಗೀತದ ರಂಗ ಮಂದಿರದಲ್ಲಿ ನವರಾತ್ರಿ ಜಾನಪದ ರಂಗ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಸಹ ಸಚಿವ ಶಿವರಾಜ್‌ ತಂಗಡಗಿ ಉದ್ಘಾಟಿಸಿದರು.

ದಸರಾ ದೀಪಾಲಂಕಾರಕ್ಕೆ ಚಾಲನೆ:
ಸಂಜೆ 6.30ಕ್ಕೆ ನಗರದ ನ್ಯೂ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಹಸಿರು ಮಂಟಪದ ಬಳಿ ವಿದ್ಯುತ್‌ ದೀಪಾಲಂಕಾರ ಹಾಗೂ ದೀಪಾಲಂಕಾರಗೊಂಡಿರುವ ವಿದ್ಯುತ್‌ ರಥದ ಚಾಲನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್‌ ಉದ್ಘಾಟಿಸಲಿದ್ದಾರೆ.

ರಾತ್ರಿ 7.30ಕ್ಕೆ ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಲಾಗಿರುವ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಲಿದ್ದಾರೆ.

RELATED ARTICLES

Latest News