ಬೆಂಗಳೂರು : ಪ್ರಸಕ್ತ ಸಾಲಿನ ವರ್ಷದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನ ಇದೇ ತಿಂಗಳ 22 ರಿಂದ 31 ರವರೆಗೆ ನಡೆಸಲು ರಾಜ್ಯಸರ್ಕಾರ ತೀರ್ಮಾನಿಸಿದೆ. ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಇದೇ ತಿಂಗಳ 22 ರಿಂದ 31 ರವರೆಗೆ ವರ್ಷದ ಮೊದಲ ಜಂಟಿ ಅಧಿವೇಶನವನ್ನು ನಡೆಸಲು ಉದ್ದೇಶಿಸಲಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 22 ರಂದು ವಿಧಾನಮಂಡಲದ ಎರಡು ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.ಮೊದಲು ಕೇಂದ್ರ ಸರ್ಕಾರದ ಉದ್ದೇಶಿತ ವಿಕಸಿತ ಭಾರತ – ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತರಿ ಕಾಯ್ದೆ- 2025 ತಿದ್ದುಪಡಿ ಕುರಿತು ಚರ್ಚಿಸಲು ಕೇವಲ ಮೂರು ದಿನ ಮಾತ್ರ ಅಧಿವೇಶನ ನಡೆಸಲು ಉದ್ದೇಶಿಸಲಾಗಿತ್ತು.
ಆದರೆ ಸಚಿವ ಸಂಪುಟ ಸಭೆಯಲ್ಲಿ ಕೆಲವು ಶಾಸಕರು ಅಧಿವೇಶನವನ್ನು ಹೆಚ್ಚು ದಿನಗಳ ಕಾಲ ನಡೆಸಬೇಕು. ಚರ್ಚೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ಅವಕಾಶವಾಗುತ್ತದೆ. ಮೂರು ದಿನದ ಬದಲಿಗೆ ಏಳು ದಿನ ನಡೆಸಲು ತೀರ್ಮಾನಿಸಲಾಯಿತು.
ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮನ್ರೇಗಾ ಯೋಜನೆ ಹೆಸರನ್ನು ತಿದ್ದುಪಡಿ ಮಾಡಿ ವಿಕಸಿತ ಭಾರತ- ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತರಿ ಕಾಯ್ದೆ- 2025 ಎಂದು ಮರು ನಾಮಕರಣ ಮಾಡಿರುವ ಬಗ್ಗೆ ಸದನದಲ್ಲಿ ಖಂಡನಾ ನಿರ್ಣಯ ಮಂಡಿಸುವ ಬಗ್ಗೆಯೂ ತೀರ್ಮಾನಿಸಲಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೊದಲ ದಿನ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ನಂತರ ಮಾರನೇಯ ದಿನ ಮನ್ರೆಗಾ ಕಾಯ್ದೆ ಬದಲಾವಣೆಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಮನ್ರೆಗಾ ಚರ್ಚೆಗಾಗಿಯೇ ವಿಶೇಷ ಅಧಿವೇಶನ ನಡೆಯಲಿದ್ದು, ನಂತರ ಬಜೆಟ್ ಅಧಿವೇಶನ ಫೆಬ್ರವರಿ ಕೊನೆಯ ವಾರದಲ್ಲಿ ಸಮಾವೇಶಗೊಳ್ಳಲಿದೆ.
ನಮ್ಮ ರಾಜ್ಯದ ಜನರ ಹಕ್ಕುಗಳನ್ನ ಕೇಂದ್ರ ಸರ್ಕಾರ ಕಿತ್ತುಕೊಂಡರೆ ಸುಮ್ಮನೆ ಇರಲು ಆಗಲ್ಲ.ಒತ್ತಡ ತಂದು ಮನರೇಗಾ ಯೋಜನೆಯನ್ನ ಪುನಃಸ್ಥಾಪನೆಗೆ ಒತ್ತಡ ಹಾಕಲಾಗುವುದು. ಪಂಜಾಬ್ ಹಾಗೂ ತಮಿಳುನಾಡು ಸಹ ವಿಬಿಜೀ ರಾಮ್ ಜೀ ಕಾಯ್ದೆ ವಿರುದ್ದ ಧ್ವನಿ ಎತ್ತಿವೆ ಎಂದು ಹೇಳಿದರು.
ಮನ್ರೆಗಾ ಸವಾಲು :
ಕೇಂದ್ರ ಸರ್ಕಾರ ಮಹಾತ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ಮಾಡಿರುವುದರ ವಿರುದ್ಧ ವ್ಯಾಪಕ ಚರ್ಚೆಗಳಾಗುತ್ತಿವೆ. ಕೇಂದ್ರ ಸರ್ಕಾರ ಮಹಾತ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ಎಂದು ಬದಲಾವಣೆ ಮಾಡಿದೆ.
ಪರಿಷ್ಕೃತ ಯೋಜನೆಯ ಪ್ರಕಾರ ಯೋಜನಾ ವೆಚ್ಚದಲ್ಲಿ ರಾಜ್ಯ ಸರ್ಕಾರಗಳು ಶೇ.40ರಷ್ಟು ವೆಚ್ಚ ಭರಿಸಬೇಕು ಎಂಬ ನಿಯಮ ಇದೆ. ಇದಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕಾಮಗಾರಿಗಳ ಆಯ್ಕೆಗೆ ಕೇಂದ್ರ ಸರ್ಕಾರವೇ ಅಧಿಸೂಚಿತ ಪ್ರದೇಶಗಳನ್ನು ಗುರುತಿಸಬೇಕಿದೆ ಹಾಗೂ ಇತರ ವಿಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸುತ್ತಿದೆ. ರಾಜ್ಯ ಸರ್ಕಾರ ಮಸೂದೆಯಲ್ಲಿನ ನಕಾರಾತಕ ಅಂಶಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹ ಹಾಗೂ ಪಾದಯಾತ್ರೆ ಸೇರಿದಂತೆ ಇತರ ಪ್ರಕಾರಗಳಲ್ಲಿ ಹೋರಾಟ ರೂಪಿಸುತ್ತಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ಮನ್ರೆಗಾ ಯೋಜನೆಯಲ್ಲಿ ಕೇವಲ ನೂರು ದಿನ ಮಾತ್ರ ಮಾನವ ದಿನಗಳ ಉದ್ಯೋಗಕ್ಕೆ ಅವಕಾಶ ಇತ್ತು. ಪರಿಷ್ಕೃತ ಕಾಯ್ದೆಯಲ್ಲಿ 125 ದಿನಗಳ ಉದ್ಯೋಗಾವಕಾಶ ದೊರೆಯಲಿದೆ ಎಂದು ಪ್ರತಿಪಾದಿಸುತ್ತಿದೆ.
ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಕಾಯ್ದೆ ಜನಪರವಾಗಿದೆ ಎಂದು ಬಿಜೆಪಿ ವಾದಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷ ಕಾಯ್ದೆಯಿಂದ ಗ್ರಾಮೀಣ ಭಾಗದ ಜನರ ಉದ್ಯೋಗವಕಾಶಗಳು ಕಡಿತಗೊಳ್ಳಲಿವೆ ಎಂದು ಆತಂಕ ವ್ಯಕ್ತಪಡಿಸುತ್ತಿದೆ. ಮಹಾತ ಗಾಂಧೀಜಿ ಅವರ ಹೆಸರು ಬದಲಾವಣೆಯಷ್ಟೇ ಅಲ್ಲ ಕಾಯ್ದೆಯಿಂದ ಗ್ರಾಮೀಣ ಭಾಗದ ಉದ್ಯೋಗಗಳೇ ನಾಶವಾಗುತ್ತವೆ ಎಂದು ಕಾಂಗ್ರೆಸ್ಸಿನ ಆರೋಪ.ಈ ನೆಲೆಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಜೊತೆಗೂ ವಾದ ಪ್ರತಿವಾದಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಸದನದಲ್ಲಿ ಚರ್ಚೆ ನಡೆಯಲಿದೆ.
