ಬೆಂಗಳೂರು,ಅ.3– ಒಂದು ವೇಳೆ ನಾನು ನಿಯಮಬಾಹಿರವಾಗಿ ಬಿಡಿಎಗೆ ಸೇರಿದ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದರೆ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ. ನಿಮಗೆ ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯನವರಿಂದ ರಾಜೀನಾಮೆಯನ್ನು 24 ಗಂಟೆಗಳ ಒಳಗೆ ಕೊಡಿಸುತ್ತೀರಾ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್‌ಗೆ ಬಹಿರಂಗ ಸವಾಲು ಹಾಕಿದ್ದಾರೆ.
ತಮ ವಿರುದ್ಧ ಸಚಿವರಾದ ಡಾ.ಜಿ.ಪರಮೇಶ್ವರ್, ಕೃಷ್ಣಭೈರೇಗೌಡ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಅವರುಗಳು ಮಾಡಿದ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು ನನ್ನ ಪ್ರಕರಣವೇ ಬೇರೆ, ಸಿಎಂ ಸಿದ್ದರಾಮಯ್ಯನವರ
ಪ್ರಕರಣವೇ ಬೇರೆ ಎಂದು ಸಮರ್ಥಿಸಿಕೊಂಡರು.
ಹಾಗೊಂದು ವೇಳೆ ಭೂ ಕಬಳಕೆ ಮಾಡಿರುವುದು ರುಜುವಾತಾದರೆ ಒಂದೇ ಒಂದು ಕ್ಷಣವೂ ಕೂಡ ವಿರೋಧ ಪಕ್ಷದಲ್ಲಿ ಕೂರದೆ ರಾಜೀನಾಮೆ ನೀಡುತ್ತೇನೆ. ನಾನು 24 ಗಂಟೆ ಗಡುವು ಕೊಡುತ್ತೇನೆ. ಮುಡಾ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರಿಂದ ರಾಜೀನಾಮೆ ಕೊಡಿಸುತ್ತೀರಾ ಎಂದು ಪ್ರಶ್ನಿಸಿದರು.
ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದರೆ ಕಡೆಪಕ್ಷ ನೀವಾದರೂ ರಾಜೀನಾಮೆ ಕೊಡಲು ಸಿದ್ದರಿದ್ದೀರಾ? ನಾವು ರಾಮನ ಭಂಟ ಹನುಮಂತನಂತೆ ಸಿಎಂ ಬೆಂಬಲಕ್ಕೆ ಇದ್ದೇವೆ ಎಂದು ಹೇಳಿಕೊಳ್ಳುತ್ತೀರಿ. ಈ ಮೂಲಕವಾದರೂ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನವರು ನಾವು ಒಂದು ವರ್ಷ ಅಧಿಕಾರದಲ್ಲಿರುತ್ತೇವೆ ಎಂದು ಭಾವಿಸಿದ್ದಾರೆ. ಕಾಲಚಕ್ರ ಉರುಳತ್ತದೆ ಎಂಬುದನ್ನು ಮರೆಯಬೇಡಿ. ಕರ್ನಾಟಕದಲ್ಲಿ 30 ವರ್ಷಗಳಿಂದ ಯಾವುದೇ ಒಂದು ಪಕ್ಷ ಸತತವಾಗಿ ಅಧಿಕಾರಕ್ಕೆ ಬಂದಿಲ್ಲ. ಇದು ನಿಮ ಗಮನದಲ್ಲಿ ಇರಲಿ ಎಂದು ಎಚ್ಚರಿಕೆ ಕೊಟ್ಟರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಹಂತಕ್ಕೆ ಬಂದಿರುವುದರಿಂದ ಇದನ್ನು ಮರೆಮಾಚಲು ನನ್ನ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಪ್ರಕರಣದಲ್ಲಿ ನನ್ನನ್ನು ಯಾಕೆ ಹೋಲಿಕೆ ಮಾಡ್ತೀರಾ..? ಇದು ಅರಿಶಿನ ಕುಂಕುಮ ಕೊಟ್ಟು ತೆಗೆದುಕೊಂಡ ಜಮೀನು ಅಲ್ಲ. ಹಣ ಕೊಟ್ಟು ಜಮೀನು ತೆಗೆದುಕೊಂಡಿದ್ದೇನೆ. ಯಾರೋ ದಾಖಲೆ ಕೊಟ್ಟರು ಎಂದು ನನ್ನ ಮೇಲೆ ಆರೋಪ ಮಾಡುತ್ತೀರಾ ಎಂದು ಕಾಂಗ್ರೆಸ್ ನೈತಿಕತೆ ಪ್ರಶ್ನೆ ಮಾಡಿದರು.
ನಿವೇಶನ ಏಕೆ ವಾಪಸ್ ಕೊಟ್ಟರು ಎಂದು ನಾಲ್ಕು ಜನ ಮಂತ್ರಿಗಳು ಮಾತನಾಡಿದ್ದಾರೆ. ಸಿದ್ದರಾಮಯ್ಯ ಮೇಲೆ ಹೈಕೋರ್ಟ್ ಈಗಾಗಲೇ ಆಪಾದಿತ ಮಾಡಿದೆ. ಮೇಲ್ನೋಟಕ್ಕೆ ಅರೋಪ ಕಂಡುಬಂದಿದೆ. ಹೈಕೋರ್ಟ್, ಜನಪ್ರತಿನಿಧಿ ನ್ಯಾಯಾಲಯ ಸಹ ತನಿಖೆಗೆ ಆದೇಶ ಕೊಟ್ಟಿದೆ. ಸಿದ್ದರಾಮಯ್ಯ ಈಗ ನ್ಯಾಯಾಲಯದ ಆದೇಶ ಬಂದ ಮೇಲೆ ನಿವೇಶನ ವಾಪಸ್ ಮಾಡಿದ್ದಾರೆ ಎಂದು ಟೀಕಿಸಿದರು.
ನ್ಯಾಯಾಲಯದ ಆದೇಶ ಬರುವ ಮೊದಲೇ ನಾನು ಸೈಟ್ ವಾಪಸ್ ಮಾಡಿದ್ದೇನೆ. ಆದರೆ ಸಿದ್ದರಾಮಯ್ಯ ಆದೇಶ ಬಂದ ಮೇಲೆ ವಾಪಸ್ ಮಾಡಿದ್ದಾರೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನನ್ನನ್ನು ಆರೋಪ ಮುಕ್ತ ಮಾಡಿದೆ. ಹೈಕೋರ್ಟ್ ಸಹ ರಿಲೀಫ್ ಕೊಟ್ಟಿದೆ. ಪ್ರಕರಣ ದಾಖಲು ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ನ್ಯಾಯಾಲಯ ದೊಡ್ಡದೋ..? ಕಾಂಗ್ರೆಸ್ ದೊಡ್ಡದೋ..? ಎಂದು ತರಾಟೆಗೆ ತೆಗೆದುಕೊಂಡರು.
ರಾಮಸ್ವಾಮಿ ಯಾರು..? ಬೇನಾಮಿ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಮಿಸ್ಟರ್ ಕೃಷ್ಣ ಬೈರೇಗೌಡ್ರೆ ಕೋಲಾರದಲ್ಲಿ ಇರುವ ನಿಮ ತಂದೆ ಆಸ್ತಿ ಯಾರಿಗೆ ಬಂದಿದೆ? ನಿಮಗೆ ಆಸ್ತಿ ಬರುತ್ತದೆಯೇ ಇಲ್ಲವೇ? ಎಂದು ಪ್ರಶ್ನಿಸಿದರು. ಮುನಿ ವೆಂಕಟಪ್ಪ ವಿಲ್ ಮಾಡಿ ಅವರ ಮಕ್ಕಳಿಗೆ ಕೊಟ್ಟಿದ್ದಾರೆ. ನಿವೇಶನ ನನಗೆ ಕೊಡುವಾಗ ಮುನಿ ವೆಂಕಟಪ್ಪ ಮಕ್ಕಳು 20 ಜನ ಸಹಿ ಮಾಡಿದ್ದಾರೆ. ಹೀಗಿದ್ದ ಮೇಲೆ ಬೇನಾಮಿ ಹೇಗೆ ಆಗುತ್ತದೆ ಎಂದು ಆಕ್ರೊಶಗೊಂಡರು.
ಅಕ್ರಮವಾಗಿ ಯಡಿಯೂರಪ್ಪನವರ ಮೇಲೆ ಡಿನೋಟಿಫೈ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಚಿವರು ಆರೋಪಿಸಿದ್ದಾರೆ. ರಿಂಗ್‌ರೋಡ್ ಹತ್ತಿರ 1 ಎಕರೆ ಹತ್ತಿರ ಜಮೀನು ಖರೀದಿ ಮಾಡಿದ್ದೇನೆ ಎಂದು ಎಸ್. ಎಮ್.ಕೃಷ್ಣ ಅವರು, ನಮ ಸರ್ಕಾರ ಇದ್ದಾಗ ರಿಂಗ್ ರೋಡ್ ಗೆ ಹೊರತಾಗಿ ಉಳಿದ ಜಮೀನು ಬಿಡಬೇಕು ಎಂದಿದ್ದರು. ಆಗ ಅವರು ಕೇಂದ್ರ ಸಚಿರಾಗಿದ್ದಾರು ಎಂದು ಹೇಳಿದರು.
ಬಿಡಿಎ ಸ್ವತ್ತು ಜಮೀನು ಸ್ವಾಧೀನ ಹೇಗೆ ಮಾಡಿದ್ದೀರಿ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ. ಬಿಡಿಎ ಪತ್ರದ ಮೂಲಕ ನಮಗೆ ಬಿಟ್ಟು ಕೊಟ್ಟಿದೆ ಎಂದು ಸಮರ್ಥನೆ ಮಾಡಿಕೊಂಡರು.ಮುಡಾದಲ್ಲಿ ಸಿದ್ದರಾಮಯ್ಯ 60/40 ನಿವೇಶನ ಪಡೆದ್ದಿದ್ದಾರೆ. ಇಲ್ಲಿ ಶೇ.60ರಷ್ಟು ಸಿದ್ದರಾಮಯ್ಯಗೆ ಶೇ.40ರಷ್ಟು ಮಾತ್ರವೇ ಸರ್ಕಾರಕ್ಕೆ. ಆದರೆ ನಿವೇಶನದಲ್ಲಿ ಶೇ.70ಸರ್ಕಾರಕ್ಕೆ , ಶೇ.30 ನಮಗೆ ನೀಡಿದ್ದಾರೆ ಎಂದು ತಿಳಿಸಿದರು.
ರಿಂಗ್ ರೋಡ್‌ಗೆ ಬೇಕಾದ ಭೂಮಿ ಬಳಕೆ ಆಗಿದೆ. ಉಳಿದ ಭೂಮಿ ಮಾಲೀಕರಿಗೆ ನೀಡಲಾಗಿದೆ ಎಂದು ಬಿಡಿಎ ಪತ್ರ ಬರೆದಿದೆ. ಗೃಹಸಚಿವ ಪರಮೇಶ್ವರ್ ಅವರು ಈ ಭೂಮಿ ಬಿಡಿಎದ್ದು ಎಂದು ಹೇಳುತ್ತಾರೆ, ಯಾವುದಪ್ಪ ಬಿಡಿಎ ಸೈಟ್ ಎಂದು ಅಶೋಕ್ ವ್ಯಂಗ್ಯವಾಡಿದರು.
ಕೃಷ್ಣ ಬೈರೇಗೌಡರ ಹತ್ತಿರ ಹಣ ಅಂತಸ್ತು ಇದೆ. ಬಹಳ ಗೌರವಾನ್ವಿತ ಮನುಷ್ಯ, ಹೆಚ್.ಕೆ.ಪಾಟೀಲ್ ಬಹಳ ಹಿರಿಯರು. ಪರಮೇಶ್ವರ್ ಬಹಳ ಸಜ್ಜನ ರಾಜಕಾರಣಿ, ಸತೀಶ್ ಜಾರಕಿಹೊಳಿ ಒಬ್ಬರೇ ಸುಮನೇ ಕುಳಿತಿದ್ದರು. ಏಕೆಂದರೆ ಅವರಿಗೆ ಗೊತ್ತಿತ್ತು ಅನಿಸುತ್ತದೆ ಇದು ಬುರುಡೆ ಪ್ರಕರಣ ಎಂದು ಕುರುಹಕವಾಡಿದರು.