ಬೆಂಗಳೂರು,ಜ.14-ನಗರದಲ್ಲಿ ನಡೆದಿದ್ದ ಮಹಿಳಾ ಟೆಕ್ಕಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು,ಶರ್ಮಿಳಾ ಅವರು ಆತನನ್ನು ನೋಡಿ ಸಣ್ಣ ನಗೆ ಬೀರಿದ್ದಕ್ಕೆ ಆತ ಇಲ್ಲಸಲ್ಲದ ಆಸೆ ಹುಟ್ಟಿಸಿಕೊಂಡು ಕೊನೆಗೆ ಕೊಲೆ ಮಾಡುವ ಹಂತಕ್ಕೆ ಹೋಗಿದ್ದು ದುರ್ದೈವ
ಕೇರಳ ಮೂಲದ ಆರೋಪಿ ಕರ್ನಲ್ ಕುರಯ್ (18) ಪ್ರತಿಭಾವಂತ ವಿದ್ಯಾರ್ಥಿ. ಎಸ್‌ಎಸ್‌ಎಲ್‌ಸಿಯಲ್ಲಿ ಈತ ಟಾಪರ್. ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ.
ಸಾಫ್ಟ್ ವೇರ್ ಎಂಜಿನಿಯರ್ ಶರ್ಮಿಳಾ ಅವರು ವಾಸವಾಗಿದ್ದ ಫ್ಲಾಟ್‌ಗೆ ಹೊಂದಿಕೊಂಡಿರುವ ಮನೆಯಲ್ಲಿ ಆರೋಪಿ ವಾಸವಾಗಿದ್ದನು. ಶರ್ಮಿಳಾ ಅವರು ಬಟ್ಟೆ ಒಣಹಾಕಲು, ಬಟ್ಟೆ ತೆಗೆದುಕೊಳ್ಳಲು ಟೆರೆಸ್‌ಗೆ ಹೋಗುವುದನ್ನೇ ಗಮನಿಸಿ ಆತ ಸಹ ಓದಿಕೊಳ್ಳುವ ನೆಪದಲ್ಲಿ ಟೆರೆಸ್‌ಗೆ ಹೋದಾಗ ಈಕೆ ಆತನನ್ನು ನೋಡಿ ನೆರೆಮನೆಯ ಸಲುಗೆಯಿಂದ ಸಣ್ಣ ನಗೆ ಬೀರಿದ್ದಾರೆ.
ಒಂದೊಂದು ಸಮಯದಲ್ಲಿ ಗಿಡಗಳಿಗೆ ನೀರು ಹಾಕಲು ಹೊರಗೆ ಬರುತ್ತಿದ್ದ ಶರ್ಮಿಳಾ ಅವರು ಶಾಟ್‌್ಸನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆತ ಎದುರಿಗೆ ಕಂಡಾಗ ಸಹಜವಾಗಿಯೇ ಮುಗುಳ್‌ನಗೆ ಬೀರುತ್ತಿದ್ದರು.
ಅದನ್ನೇ ಆತ ತಪ್ಪಾಗಿ ಅರ್ಥೈಸಿಕೊಂಡು ಆಕೆ ಮೇಲೆ ವ್ಯಾಮೋಹ ಬೆಳೆಸಿಕೊಂಡಿದ್ದಾನೆ.ಆದರೆ ಇದ್ಯಾವುದೂ ಆಕೆಯ ಗಮನಕ್ಕೆ ಬಂದಿಲ್ಲ. ತದ ನಂತರದಲ್ಲಿ ಪ್ರತಿನಿತ್ಯ ಶರ್ಮಿಳಾ ಅವರನ್ನು ನೋಡುವ ಸಲುವಾಗಿಯೇ ಟೆರೆಸ್ ಮೇಲೆ ಹೋಗುತ್ತಿದ್ದ. ಹಾಗೆಯೇ ಎರಡು ತಿಂಗಳೊಳಗೆ ಅವರ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿದ್ದಾನೆ.
ಫ್ಲಾಟ್‌ನಲ್ಲಿ ಸ್ನೇಹಿತೆ ಜೊತೆ ಶರ್ಮಿಳಾ ನೆಲೆಸಿದ್ದರು. ಜ.3 ರಂದು ಸ್ನೇಹಿತೆ ಊರಿಗೆ ಹೋಗಿದ್ದಾರೆ.ಈ ವಿಷಯ ತಿಳಿದಿದ್ದ ಆರೋಪಿ ಅಂದು ರಾತ್ರಿ ತನ್ನ ಮನೆಯ ಟೆರೆಸ್‌ನಿಂದ ಫ್ಲಾಟ್‌ನ ಟೆರೆಸ್‌ಗೆ ಬಂದು ಲಾಕ್ ಆಗಿದ್ದ ಸ್ಲೈಡ್ ವಿಂಡೋ ತೆಗೆಯುವಷ್ಟು ಚಾಲಾಕಿಯಾಗಿ ಮನೆಯೊಳಗೆ ಹೋಗಿ ಘೋರ ಕೃತ್ಯವೆಸಗಿದ್ದಾನೆ.
ತಾನು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿ ಸ್ಲೈಡ್ ವಿಂಡೋ ಇದ್ದು ಆರೋಪಿ ಕರ್ನಲ್ ಕುರಯ್ ಒಮೆ ಅದನ್ನು ತೆಗೆಯುವಾಗ ಪುಸ್ತಕ ಸಿಕ್ಕಿಹಾಕಿಕೊಂಡಿತ್ತು. ಆ ಸಂದರ್ಭದಲ್ಲಿ ಆತ ಸ್ಲೈಡ್ ವಿಂಡೋ ತೆರೆಯುವುದನ್ನು ತಿಳಿದುಕೊಂಡಿದ್ದ.ಅದೇ ತಂತ್ರ ಬಳಸಿ ಫ್ಲಾಟ್‌ನ ಕಿಟಕಿ ತೆಗೆದು ಶರ್ಮಿಳಾ ಅವರ ಬೆಡ್ ರೂಂ ಪ್ರವೇಶಿಸಿದ್ದ ಎಂಬುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.
ಅಂದು ಆತ ಮನೆಯೊಳಗೆ ನುಗ್ಗಿದಾಗ ಶರ್ಮಿಳಾ ಅವರು ಅಡುಗೆ ಮನೆಯಲ್ಲಿದ್ದರು. ಆತನನ್ನು ನೋಡಿ ಒಂದು ಕ್ಷಣ ಗಾಬರಿಯಾದ ಅವರು ಆತನೊಂದಿಗೆ ಜಗಳವಾಡಿದ್ದಾರೆ. ಆ ಸಂದರ್ಭದಲ್ಲಿ ಸ್ಟವ್ ಮೇಲೆ ಇಟ್ಟಿದ್ದ ಹಾಲು ಉಕ್ಕಿ ಸ್ಟವ್ ಆಫ್ ಆಗಿದೆ.
ಗಲಾಟೆ ಸಂದರ್ಭದಲ್ಲಿ ಆತ ಆಕೆಯನ್ನು ಹಿಡಿದುಕೊಂಡು ಎಳೆದಾಡಿದಾಗ ಶರ್ಮಿಳಾ ಅವರ ತಲೆ ಹಾಗೂ ಹಣೆ ಭಾಗಕ್ಕೆ ಗಾಯವಾಗಿ ಪ್ರಜ್ಞಾಹೀನವಾಗಿ ಬಿದ್ದಿದ್ದಾರೆ.
ಬಳಿಕ ಆರೋಪಿಯು ಅಡಿಗೆ ಕೋಣೆಯಲ್ಲೇ ಯುವತಿಯನ್ನು ಮಲಗಿಸಿ ತಲೆ ದಿಂಬಿನಿಂದ ಉಸಿರುಗಟ್ಟಿಸಿದ್ದಾನೆ. ನಂತರ ಆಕೆ ಸತ್ತಿದ್ದಾಳೆಂದು ಭಾವಿಸಿ ರಕ್ತದ ಕಲೆಯಾಗಿದ್ದ ದಿಂಬಿಗೆ ಬೆಂಕಿ ಹಚ್ಚಿ ಆಕೆಯ ಮೊಬೈಲ್‌ನನ್ನು ತೆಗೆದುಕೊಂಡು ಟೆರೆಸ್ ಮೂಲಕವೇ ತನ್ನ ಮನೆಗೆ ಹೋಗಿ ಏನೂ ನಡೆದಿಲ್ಲವೆಂಬಂತೆ ತನ್ನ ಪಾಡಿಗೆ ಇದ್ದನು.
ಘಟನೆ ನಡೆದು ಎರಡು ದಿನಗಳ ನಂತರ ಅಂದರೆ ಜ.5 ರಂದು ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮುಂಬಾಗಿಲಿನ ಚಿಲಕ ಹಾಕಿರುವುದು ಕಂಡು ಬಂದಿದೆ.ನಂತರ ಒಳಗೆ ಹೋಗಿ ನೋಡಿದಾಗ ಅಡುಗೆ ಮನೆಯಲ್ಲಿ ಯುವತಿ ದೇಹ ಪತ್ತೆಯಾಗಿದೆ. ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಈ ಘಟನೆ ನಡೆದಿರಬಹುದೆಂದು ಮೊದಲಿಗೆ ಅಂದಾಜಿಸಲಾಗಿತ್ತು. ನಂತರ ಯುವತಿಯ ಮೊಬೈಲ್ ಹುಡುಕಾಡಿದ್ದಾರೆ. ಅದು ಕಾಣದಿದ್ದಾಗ ಬೆಂಕಿಗೆ ಮೊಬೈಲ್ ಕರಗಿ ಹೋಗಿರಬಹುದೆಂದು ಅಂದುಕೊಂಡಿದ್ದಾರೆ.
ಆದರೆ ಶರ್ಮಿಳಾ ಅವರು ವಾಸವಾಗಿದ್ದ ಮನೆಯ ವಾತಾವರಣ, ಕೆಲವು ಸನ್ನಿವೇಶಗಳನ್ನು ಗಮನಿಸಿದಾಗ ಪೊಲೀಸರಿಗೆ ಅನುಮಾನ ಬಂದಿದೆ.ಹಾಗಾಗಿ ತನಿಖೆ ವೇಳೆ ಈ ಫ್ಟಾಟ್‌ನ ಸುತ್ತಮುತ್ತ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇವರ ಮನೆಗೆ ಯಾರೂ ಕೂಡ ಬಂದು ಹೋಗಿರುವ ಚಲನವಲನ ಕಂಡು ಬಂದಿಲ್ಲ.ಫ್ಲಾಟ್ ಬಳಿ ಕೆಲಸ ಮಾಡುವ ಕೆಲವು ಹುಡುಗರನ್ನೂ ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಈ ನಡುವೆ ಶರ್ಮಿಳಾ ಅವರ ಮೊಬೈಲ್‌ಎರಡು ದಿನಗಳ ಬಳಿಕ ಚಾಲನೆಯಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಪೊಲೀಸರು ಆ ಮೊಬೈಲ್‌ನ ಟವರ್ ಪರಿಶೀಲಿಸಿದಾಗ ಫ್ಲಾಟ್‌ನ ಪಕ್ಕದ ಮನೆ ತೋರಿಸಿದೆ.ಈ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ಆ ಮನೆ ಬಳಿ ಹೋಗಿ ವಿಚಾರಿಸಿದಾಗ ಆರೋಪಿ ಕರ್ನಲ್ ಕುರಯ್ ಬಳಿ ಇರುವುದು ಕಂಡು ಬಂದಿದೆ.
ತಕ್ಷಣ ಆತನನ್ನು ಪೊಲೀಸರು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ ಈ ಎಲ್ಲಾ ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.ಒಟ್ಟಾರೆ ವಿದ್ಯಾವಂತ ಈ ಯುವಕ ತನ್ನ ಭವಿಷ್ಯ ರೂಪಿಸಿಕೊಳ್ಳುವ ಸಮಯದಲ್ಲಿ ಯುವತಿಯ ಮೋಹಕ್ಕೆ ಮಾರು ಹೋಗಿ ಕೊಲೆಗಾರನಾಗಿ ಇದೀಗ ಜೈಲು ಸೇರಿರುವುದು ದುರಂತ.
