ಬೆಂಗಳೂರು. ಅ.4- ರಾಜ್ಯದಲ್ಲಿ ನಿನ್ನೆ ಸಾಧಾರಣ ಮಳೆಯಾಗಿದ್ದು, ಇನ್ನೂ ಎರಡು ದಿನ ಹೆಚ್ಚಿನ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ. ಹವಾಮಾನ ಇಲಾಖೆ ರಾಜ್ಯದ ಒಳನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.ಕೆಲವೆಡೆ ವ್ಯಾಪಕ ಪ್ರಮಾಣದ ಮಳೆಯಾದರೆ, ಕೆಲವೆಡೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚದುರಿದಂತೆ ಕೆಲವೆಡೆ ಮಳೆಯಾಗುತ್ತಿದೆ.ನಿನ್ನೆ ಕೂಡ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಬಿದ್ದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಮುಷ್ಠಿಗೇರಿಯಲ್ಲಿ 85.5ಮಿ.ಮೀ.ನಷ್ಟು ಅತಿ ಹೆಚ್ಚು ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಹಗುರದಿಂದ ಸಾಧಾರಣ ಮಳೆಯಾಗಿದ್ದು, ದಾಸರಹಳ್ಳಿ ವಲಯದ ಬಾಗಲಗುಂಟೆಯಲ್ಲಿ 15 ಮಿ.ಮೀ.ನಷ್ಟು ಮಳೆಯಾಗಿದೆ.
ರಾಜ್ಯದಲ್ಲಿ ಮಳೆ ಚೇತರಿಕೆಯಾಗಿದ್ದರೂ ಮಳೆ ಕೊರತೆ ಮಾತ್ರ ನೀಗಿಲ್ಲ. ಸೆಪ್ಟೆಂಬರ್ನಂತೆ ಅಕ್ಟೋಬರ್ನಲ್ಲೂ ಮಳೆ ಅಭಾವ ಕಂಡುಬಂದಿದೆ. ಕಳೆದ ಒಂದು ವಾರದಿಂದ ವಾಡಿಕೆ ಮಳೆಯಾಗಿಲ್ಲ. ಹಾಗೆಯೇ ಕಳೆದ ನಾಲ್ಕು ದಿನಗಳಿಂದಲೂ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ.
ಸೆಪ್ಟೆಂಬರ್ನಲ್ಲೂ ವಾಡಿಕೆಗಿಂತ ಮಳೆ ಕಡಿಮೆಯಾಗಿ ಹಲವು ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ.ಇತ್ತೀಚೆಗೆ ಮಳೆ ಚೇತರಿಕೆಯಾಗಿ ರೈತರಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ.
ಸ್ಥಳೀಯ ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೆಡೆ ಮಿಂಚು, ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿವೆ.