Sunday, October 6, 2024
Homeರಾಜ್ಯಸಚಿವ ಮಹದೇವಪ್ಪ ಸೇರಿ ಹಲವು ಕಾಂಗ್ರೆಸ್ಸಿಗರಿಗೂ ಮುಡಾ ಉರುಳು

ಸಚಿವ ಮಹದೇವಪ್ಪ ಸೇರಿ ಹಲವು ಕಾಂಗ್ರೆಸ್ಸಿಗರಿಗೂ ಮುಡಾ ಉರುಳು

HC Mahadevappa in Muda Scam

ಮೈಸೂರು, ಅ.4- ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದೊಡ್ಡಿರುವ ಸ್ನೇಹಮಯಿ ಕೃಷ್ಣ, ಈಗ ಜಾರಿ ನಿರ್ದೇಶನಾಲಯಕ್ಕೆ ಮಹತ್ವದ ದಾಖಲೆಗಳನ್ನು ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ ಹಾಗೂ ಇತರ ಕಾಂಗ್ರೆಸ್‌‍ ನಾಯಕರು ನಿದ್ದೆಗೆಡುವಂತೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಡಾ ಪ್ರಕರಣದಲ್ಲಿ ಹಣ ಅಕ್ರಮ ವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಪ್ರಬಲ ಸಾಕ್ಷ್ಯವನ್ನೂ ನೀಡಿದ್ದೇನೆ ಎಂದರು.

ಕೋಟ್ಯಂತರ ರೂಪಾಯಿಗಳ ಲಂಚದ ಹಣವನ್ನು ಬಳಕೆ ಮಾಡಿ ಸೆಟ್‌್ಲಮೆಂಟ್‌ ಡಿಡ್‌ಗಳ ಮೂಲಕ ನಿವೇಶನ ಪಡೆದಿದ್ದಾರೆ. ಇದನ್ನೂ ಇಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ, ಅವರ ಸಹೋದರರ ಪುತ್ರ ನವೀನ್‌ ಬೋಸ್‌‍ ಹೆಸರಿಗೆ ಇರುವ ಸೆಟ್ಲ್ ಮೆಂಟ್ ಡೀಡ್‌ ಹಾಗೂ ಮುಡಾದ ಅಧ್ಯಕ್ಷರಾಗಿದ್ದ ಮರಿಗೌಡ ಮತ್ತು ಅವರ ಸಹೋದರ ಶಿವಣ್ಣ ಹೆಸರಿಗೆ ನೋಂದಣಿಯಾಗಿರುವ ದಾಖಲಾತಿಗಳನ್ನು ನೀಡಿದ್ದೇನೆ. ಇದರ ವಿರುದ್ಧವೂ ತನಿಖೆಯಾಗಬೇಕು ಎಂದು ಒತ್ತಾಯಿಸಿರುವುದಾಗಿ ಹೇಳಿದರು.

ಹೆಚ್‌.ಸಿ.ಮಹದೇವಪ್ಪ ಅವರ ಸಹೋದರನ ಮಗ ನವೀನ್‌ ಬೋಸ್‌‍ ಎಂಬುವವರು ಮಂಜುನಾಥ್‌ ಎಂಬುವವರಿಂದ ಹಾಗೂ ಇದೇ ಮಂಜುನಾಥ್‌ರಿಂದ ಮರಿಗೌಡರು ತಮ ಸಹೋದರ ಶಿವಣ್ಣನ ಹೆಸರಿಗೆ ಸೆಟ್ಲಮೆಂಟ್‌ ಡಿಡ್‌ ಮಾಡಿಕೊಂಡಿದ್ದಾರೆ ಎಂದರು.
ನಿನ್ನೆ ಜಾರಿ ನಿರ್ದೇಶನಾಲಯ ಕಚೇರಿಗೆ ಭೇಟಿ ನೀಡಿ 500 ಪುಟಗಳ ದಾಖಲೆಗಳನ್ನು ನೀಡಿದ್ದೇನೆ.

ಹೆಚ್ಚಿನ ದಾಖಲೆಗಳು ಕನ್ನಡದಲ್ಲಿ ಇರುವುದರಿಂದ ಅಧಿಕಾರಿಗಳು ಕೇಳಿ ಮಾಹಿತಿ ಪಡೆದು, ಬರೆದುಕೊಂಡಿದ್ದಾರೆ. ತಮ ಕುಟುಂಬದ ಕುರಿತು ವಿವರಣೆ ಪಡೆದುಕೊಂಡಿದ್ದಾರೆ. ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಸಿಐಆರ್‌ ಎಂದು ದಾಖಲು ಮಾಡಿಕೊಂಡಿದೆ. ತನಿಖೆಯ ಉದ್ದೇಶಕ್ಕಾಗಿ ಇಸಿಐಆರ್‌ ದಾಖಲಿಸಿದ್ದೇವೆ. ಅದನ್ನು ಯಾರಿಗೂ ನೀಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.

ಸುಮಾರು ಆರು ಗಂಟೆಗಳ ಕಾಲ ಇಡಿ ಅಧಿಕಾರಿಗಳು ತಮಿಂದ ವಿವರಣೆ ಹಾಗೂ ಹೇಳಿಕೆ ಪಡೆದುಕೊಂಡಿದ್ದಾರೆ. ಕೊನೆಯಲ್ಲಿ ನಿಮ ನಿರೀಕ್ಷೆಗೆ ತಕ್ಕ ಹಾಗೆ ನ್ಯಾಯ ದೊರಕಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದು ತಮಗೆ ತೃಪ್ತಿ ನೀಡಿದೆ ಎಂದು ಹೇಳಿದರು.

ಶ್ರೀಮತಿ ಪಾರ್ವತಿಯವರು ಪಡೆದುಕೊಂಡಿರುವ 14 ನಿವೇಶನಗಳ ಮಹಜರು ಇಂದು ನಡೆದಿದೆ. ಅದರಲ್ಲಿ ತಾವು ಭಾಗವಹಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಪಂಚರ ಸಮುಖದಲ್ಲಿ ಪಂಚನಾಮೆ ನಡೆದಿದೆ. ಮೊದಲ ಹಂತದಲ್ಲಿ ಲೋಕಾಯುಕ್ತ ಪೊಲೀಸರು ಮುಡಾದಿಂದ ದಾಖಲಾತಿಗಳನ್ನು ಪಡೆದುಕೊಂಡಿದ್ದಾರೆ. ಮತ್ತಷ್ಟು ದಾಖಲಾತಿಗಳನ್ನು ಪಡೆಯಬೇಕಿದೆ. ಸ್ಥಳ ಮಹಜರು ನಡೆಯುತ್ತಿದೆ. ಅದರ ಬಳಿಕ ಆರೋಪಿಗಳಿಗೆ ನೋಟಿಸ್‌‍ ನೀಡಿ, ವಿಚಾರಣೆ ನಡೆಸಬಹುದು ಎಂದರು.

ಮುಡಾದಲ್ಲಿ 2015ರಿಂದ ಅವೈಜ್ಞಾನಿಕ ಅಧಿಸೂಚನೆ ನೆಪ ಮಾಡಿಕೊಂಡು ಅಕ್ರಮವಾಗಿ ನಿವೇಶನ ಪಡೆದಿರುವವರು, ಅದಕ್ಕೆ ಸಹಕರಿಸಿ ವಿವಿಧ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸುವುದು ತಮ ಉದ್ದೇಶವಾಗಿದೆ. ಕೆಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಕ್ರಮವಾಗಿ ನಿವೇಶನ ಹಂಚಿದ್ದಾರೆ ಮತ್ತು ತಮ ಕುಟುಂಬದ ಸದಸ್ಯರ ಹೆಸರಿಗೂ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪ್ರಕರಣ ಒಂದು ಉದಾಹರಣೆ ಮಾತ್ರ ಎಂದರು.

14 ನಿವೇಶನಗಳನ್ನು ವಾಪಸ್‌‍ ನೀಡಿರುವುದೇ ಪ್ರಕರಣಕ್ಕೆ ಪ್ರಬಲ ಸಾಕ್ಷಿಯಾಗಿದೆ. ಇದರಿಂದ ತನಿಖೆಗೆ ಯಾವುದೇ ರೀತಿಯ ಹಿನ್ನಡೆಯೂ ಆಗುವುದಿಲ್ಲ. ಮತ್ತಷ್ಟು ಪುರಾವೆಗಳು ಸಿಕ್ಕಂತೆ ಆಗಿದೆ ಎಂದರು.

ಕಳ್ಳರು ಕಳ್ಳರು ಒಂದಾಗಿದ್ದಾರೆ. 50:50ರ ಅನುಪಾತದಲ್ಲಿ ನಿವೇಶನ ಪಡೆದವರು ಒಂದಾಗಿ ಕೂಡ ರಚಿಸಿಕೊಂಡು ನನ್ನ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಮೂರು ತಿಂಗಳಿನಿಂದ ಸುಮನಿದ್ದ ಜಿ.ಟಿ.ದೇವೇಗೌಡರು ನಿನ್ನೆ ಅದರಲ್ಲೂ ದಸರಾದಂತಹ ಪವಿತ್ರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.

ಅಕ್ರಮವಾಗಿ ನಿವೇಶನ ಪಡೆದವು ತಮ ವಿರುದ್ಧ ಹಲವು ರೀತಿಯ ಸಂಚು ರೂಪಿಸುತ್ತಿದ್ದಾರೆ. ಜಿ.ಟಿ.ದೇವೇಗೌಡರಷ್ಟೇ ಅಲ್ಲ ಈ ಭಾಗದ ಅನೇಕ ಜನಪ್ರತಿನಿಧಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ. ನೇರವಾಗಿ ಯಾರೂ ನಿವೇಶನ ಪಡೆದಿಲ್ಲ. ಸಿದ್ದರಾಮಯ್ಯ ತಮ ಭಾವಮೈದುನನ ಹೆಸರಿನಲ್ಲಿ ನಿವೇಶನ ಪಡೆದಂತೆ ಎಲ್ಲಾ ಜನ ಪ್ರತಿನಿಧಿಗಳು ತಮ ಕುಟುಂಬದ ಸದಸ್ಯರು, ಸ್ನೇಹಿತರ ಹೆಸರಿನಲ್ಲಿ ನಿವೇಶನ ಪಡೆದಿದ್ದಾರೆ. ಈ ಅಕ್ರಮಗಳನ್ನು ಹಂತ ಹಂತವಾಗಿ ಬಯಲಿಗೆ ತರುತ್ತೇನೆ ಎಂದರು.

RELATED ARTICLES

Latest News