Sunday, October 6, 2024
Homeರಾಜ್ಯಜಾತಿ ಗಣತಿ ವರದಿ ವಿಚಾರದಲ್ಲಿ ಆತುರದ ನಿರ್ಧಾರ ಬೇಡ : ಡಿ.ಕೆ.ಸುರೇಶ್‌

ಜಾತಿ ಗಣತಿ ವರದಿ ವಿಚಾರದಲ್ಲಿ ಆತುರದ ನಿರ್ಧಾರ ಬೇಡ : ಡಿ.ಕೆ.ಸುರೇಶ್‌

DK Suresh

ಬೆಂಗಳೂರು, ಅ.4- ರಾಜ್ಯ ಸರ್ಕಾರದಿಂದ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆಯ ಹೆಜ್ಜೆ ಇಡಬೇಕು.

ರಾಷ್ಟ್ರ ಮಟ್ಟದ ಜನಗಣತಿಯವರೆಗೂ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಸಮೀಕ್ಷಾ ವರದಿಯನ್ನು ಬಹಿರಂಗಗೊಳಿಸಬೇಕು ಮತ್ತು ಅಂಗೀಕರಿಸಬೇಕು ಎಂಬ ಒತ್ತಡಗಳು ಹೆಚ್ಚಿವೆ. ಮುಂದಿನ ಸಚಿವ ಸಂಪುಟದಲ್ಲಿ ಜಾತಿ ಜನಗಣತಿ ಎಂದೇ ಹೇಳಲಾದ ಸಮೀಕ್ಷಾ ವರದಿ ಕುರಿತು ಚರ್ಚಿಸುವ ಸನ್ನಿವೇಶಗಳು ಸೃಷ್ಟಿಯಾಗಿರುವ ಹಂತದಲ್ಲಿ ಡಿ.ಕೆ.ಸುರೇಶ್‌ ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರ ಸರ್ಕಾರ ಈಗಾಗಲೇ ಜನಗಣತಿಯನ್ನು ಘೋಷಣೆ ಮಾಡಿದೆ. ಅದಕ್ಕೆ ಯಾವ ರೀತಿಯ ಮಾನದಂಡಗಳನ್ನು ಅಳವಡಿಸಲಾಗುತ್ತಿದೆ ಎಂದು ಕಾದು ನೋಡುತ್ತಿದ್ದೇವೆ. ಬಹುತೇಕ ಜಾತಿ ಗಣತಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಅಲ್ಲಿ ಜಾತಿ ಗಣತಿ ನಡೆದರೆ ರಾಷ್ಟ್ರಮಟ್ಟದಲ್ಲೇ ದತ್ತಾಂಶಗಳು ಸಂಗ್ರಹವಾಗುತ್ತವೆ. ಎಲ್ಲಾ ಗೊಂದಲಗಳು ಬಗೆ ಹರಿಯುತ್ತವೆ.

ಜೊತೆಗೆ ರಾಷ್ಟ್ರ ಮಟ್ಟದ ಸಮೀಕ್ಷಾ ವರದಿಗೆ ಅಧಿಕೃತ ಮಾನ್ಯತೆಯೂ ದೊರೆಯಲಿದೆ. ರಾಜ್ಯ ಮಟ್ಟದಲ್ಲಿ ನಡೆದಿರುವ ಸಮೀಕ್ಷೆಗೆ ಮಾನ್ಯತೆ ಪಡೆಯಲು ಹೋರಾಟ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ರಾಷ್ಟ್ರ ಮಟ್ಟದ ಗಣತಿ ಒಂದು ವರ್ಷದಲ್ಲಿ ಮುಗಿಯುವ ಸಾಧ್ಯತೆ ಇದ್ದು ಅಲ್ಲಿಯವರೆಗೂ ಕಾದು ನೋಡುವಂತೆ ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ ನಾಯಕರು. ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬುದು ನಮ ಆಸೆಯಾಗಿದೆ. ಆದಷ್ಟು ಶೀಘ್ರದಲ್ಲಿ ಅವರ ಮೇಲಿರುವ ಆರೋಪಗಳಿಂದ ಮುಕ್ತರಾಗಿ ಅವರು ಹೊರಬರಲಿ ಎಂದು ಹೇಳಿದರು.

ನಿನ್ನೆ ಮೈಸೂರಿನಲ್ಲಿ ಜೆಡಿಎಸ್‌‍ ನ ಶಾಸಕ ಜಿ.ಟಿ.ದೇವೇಗೌಡರು ನೀಡಿರುವ ಹೇಳಿಕೆ ಸರಿಯಿದೆ. ಮುಡಾದಿಂದ ನಿವೇಶನ ನೀಡಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಅದರಲ್ಲಿ ಎಲ್ಲಾ ಪಕ್ಷಗಳ ನಾಯಕರು ಫಲಾನುಭವಿಗಳಿದ್ದಾರೆ. ಅನಗತ್ಯವಾಗಿ ಈ ಕುರಿತು ಹೆಚ್ಚು ಚರ್ಚೆ ಮಾಡುವ ಅಗತ್ಯ ಇಲ್ಲ . ಜೆಡಿಎಸ್‌‍ ನಾಯಕರು ಮಾಡಿರುವುದನ್ನು ಜಿ.ಟಿ.ದೇವೇಗೌಡರು ಜನರ ಮುಂದೆ ಮಂಡಿಸಿದ್ದಾರೆ. ಪಕ್ಷದಲ್ಲಿದ್ದೇವೆ ಎಲ್ಲವನ್ನೂ ಸಹಿಸಿಕೊಂಡಿರಬೇಕು ಎಂದೇನು ಇಲ್ಲ ಎಂದರು.

ಶಾಸಕ ಮುನಿರತ್ನ ಅವರ ಪ್ರಕರಣದಿಂದ ಕರ್ನಾಟಕ ದೇಶದ ಎದರು ತಲೆ ತಗ್ಗಿಸುವಂತಾಗಿದೆ. ಇಂತಹ ಚರ್ಚೆಗಳು ಒಳ್ಳೆಯದಲ್ಲ. ಅನಗತ್ಯ ವಿವಾದಗಳಿಂದ ರಾಜ್ಯದ ಘನತೆಗೆ ಕುಂದುಡಾಗುತ್ತಿದೆ. ಎಲ್ಲರೂ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಚರ್ಚೆಗಳು ಹೆಚ್ಚಾಗುತ್ತಿವೆ. ರಾಜ್ಯದ ಹಿತದೃಷ್ಟಿಯಿಂದ ಸಕಾರಾತಕ ಚರ್ಚೆಗಳು ಹೆಚ್ಚಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಜನ ನನ್ನನ್ನು ಸೋಲಿಸಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಅದರಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗುವ ಆಕಾಂಕ್ಷಿಯಲ್ಲ. ಉಪಚುನಾವಣೆ ಘೋಷಣೆಯಾದ ಬಳಿಕ ನಮ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಬೇರೆಯವರ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ನನ್ನ ಕೆಲಸವಲ್ಲ. ನನಗೆ ನನ್ನದೆ ಆದ ಕೆಲಸಗಳಿವೆ. ಅದರಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.

RELATED ARTICLES

Latest News