ಬೆಂಗಳೂರು,ಅ.5- ಪಶು ಮತ್ತು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಕಾಯ್ದಿರಿಸಿದಷ್ಟು ಭೂಮಿ ಹೊರತುಪಡಿಸಿ ಹೆಚ್ಚುವರಿ ಗೋಮಾಳ ಇದ್ದರೆ ಅದನ್ನು ರೈತ ಫಲಾನುಭವಿಗಳಿಗೆ ಮಂಜೂರು ಮಾಡಬಹುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಕಂದಾಯ ಇಲಾಖೆಯ ತಹಸೀಲ್ದಾರ್, ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ಸಮೀಕ್ಷೆಯ ಪ್ರಕಾರ ಎಷ್ಟು ಜಾನುವಾರುಗಳಿವೆ, ಅವುಗಳಿಗೆ ಎಷ್ಟು ಜಮೀನು ಅಗತ್ಯವಿದೆ ಎಂದು ನಿಗದಿಯಾಗಿದ್ದು, ಅದಕ್ಕಿಂತಲೂ ಹೆಚ್ಚುವರಿ ಭೂಮಿ ಇದ್ದರೆ ಅದನ್ನು ಜಿಲ್ಲಾಧಿಕಾರಿಗಳಿಂದ ಗುರುತಿಸಿ ರೈತರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದರು.
ಗೋಮಾಳ ಎಂಬ ಕಾರಣಕ್ಕೆ ರೈತರ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ಈ ರೀತಿ ಮಾಡಿದರೆ ನ್ಯಾಯಾಲಯದಲ್ಲಿ ನಾವು ಕಷ್ಟ ಎದುರಿಸಬೇಕಾಗುತ್ತದೆ. ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ತಮಲ್ಲಿರುವ ಜಾನುವಾರುಗಳ ಸಂಖ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡು ಭೂಮಿ ಲಭ್ಯತೆಯನ್ನು ಗುರುತಿಸಬೇಕು ಎಂದು ಹೇಳಿದರು.
ಅರಣ್ಯ ಭೂಮಿ ಅಲ್ಲದೇ ಇರುವ ಜಾಗಗಳನ್ನು ಅರ್ಹ ಅರ್ಜಿದಾರರಿಗೆ ಮಂಜೂರು ಮಾಡಲು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೋಧನೆ ನಡೆಸಿ ಮರು ಪೋಡಿ ಮಾಡಲು ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ಸಮಿತಿಯ ಮುಂದೆ ಅರ್ಜಿ ಪರಿಶೀಲನೆಗೆ ಒಳಪಟ್ಟಾಗ ನಕ್ಷೆ, ಪೋಡಿ ಬೇಕು ಎಂದು ಪರದಾಡಬೇಡಿ. ಮುಂಚಿತವಾಗಿಯೇ ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದರು.
ಅರ್ಜಿಗಳನ್ನು ದೀರ್ಘ ಕಾಲದವರೆಗೂ ಬಾಕಿ ಇಡುವುದು ಸರಿಯಲ್ಲ. ಆನ್‌ಲೈನ್ ಸೇವೆಯಡಿ ಕಾಲಮಿತಿಯಲ್ಲೇ ಎಲ್ಲವೂ ಇತ್ಯರ್ಥಗೊಳ್ಳಬೇಕು. ಜನ ಬಂದು ಸಲಾಂ ಹೊಡಿಯಲಿ ಎಂದು ಕಾಯುತ್ತಾ ಕುಳಿತುಕೊಳ್ಳುವುದು ಒಳ್ಳೆಯದಲ್ಲ ಎಂದು ಖಾರವಾಗಿ ಹೇಳಿದರು.
ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿಗೆ ಸಮಿತಿಗಳ ಸಭೆ ನಡೆಸಬೇಕು. ಶಾಸಕರ ಜೊತೆ ಚರ್ಚಿಸಿ 15 ದಿನಗಳ ಒಳಗಾಗಿ ಸಮಿತಿಗಳಿಗೆ ಸಭೆ ನಡೆಸಿ ಜನರ ಬೇಡಿಕೆ ಹೆಚ್ಚಿರುವುದನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಿ ಎಂದು ಕೃಷ್ಣ ಭೈರೇಗೌಡ ಸಲಹೆ ನೀಡಿದರು.
ಕೂಡ್ಲಗಿ ತಾಲ್ಲೂಕಿನಲ್ಲಿ ಹೆಚ್ಚು ಬಡವರಿದ್ದಾರೆ. ಆದರೆ ಅಲ್ಲಿ ಅರ್ಜಿಗಳ ವಿಲೇವಾರಿ ತುಂಬಾ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.