ಕೊಪ್ಪಳ,ಅ.6- ಮುಖ್ಯಮಂತ್ರಿಯವರ ಕಾನ್ವೆಗೆ ಎದುರಾಗಿ ಏಕಮುಖ ಸಂಚಾರ ಮಾರ್ಗದಲ್ಲಿ ಕಾರು ಚಲಾಯಿಸಿ ದರ್ಪ ಪ್ರದರ್ಶಿಸಿದ ಶಾಸಕ ಜನಾರ್ಧನ ರೆಡ್ಡಿ ಅವರ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಯಚೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಏರ್‌ಪೋರ್ಟ್‌ನತ್ತ ಪ್ರಯಾಣಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಹನ ಹಾಗೂ ಬೆಂಗಾವಲು ಪಡೆಗಾಗಿ ಗಂಗಾವತಿಯಲ್ಲಿ ಪೊಲೀಸರು ಇತರ ವಾಹನಗಳನ್ನು ತಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ವಾಹನಗಳನ್ನು ತಡೆದು ಸುಮಾರು 20 ನಿಮಿಷಗಳ ಕಾಲ ನಿಲ್ಲಿಸಿದರು ಎಂಬ ಅಸಹನೆಗೆ ಈಡಾದ ಶಾಸಕ ಜನಾರ್ಧನ ರೆಡ್ಡಿಯವರು ತಾವೇ ರೇಂಜ್‌ರೋವರ್ ಕಾರನ್ನು ಚಲಾಯಿಸಿಕೊಂಡು ಡಿವೈಡರ್ ಅನ್ನು ಹತ್ತಿಸಿ ಏಕಮುಖ ಸಂಚಾರ ಮಾರ್ಗದಲ್ಲಿ ಮುಖ್ಯಮಂತ್ರಿಯವರ ಕಾನ್ವೆಗೆ ಎದುರಾಗಿ ಹೋಗಿದ್ದಾರೆ.
ಇದರಿಂದ ತಬ್ಬಿಬ್ಬಾದ ಬೆಂಗಾವಲು ಪಡೆ ಕೆಲಕ್ಷಣ ತಮ ವಾಹನಗಳನ್ನೇ ಸ್ಥಗಿತಗೊಳಿಸಿದೆ. ಜನಾರ್ಧನ ರೆಡ್ಡಿಯವರ ಕಾರು ಮುಂದಕ್ಕೆ ಹೋದ ಬಳಿಕ ಮುಖ್ಯಮಂತ್ರಯವರು ಪ್ರಯಾಣ ಮುಂದುವರೆಸಿದ್ದಾರೆ.
ಜನಾರ್ಧನ ರೆಡ್ಡಿಯವರು ತಾವು ಶಾಸಕರಾಗಿದ್ದು, ಮುಖ್ಯಮಂತ್ರಿಯವರು ಬಂದಾಕ್ಷಣ 20 ನಿಮಿಷಗಳ ಕಾಲ ಕಾದು ನಿಲ್ಲುವ ಅಗತ್ಯವೇನಿದೆ ಎಂದು ಸಿಟ್ಟಿಗೆದ್ದು ಪೊಲೀಸರ ಜೊತೆ ವಾಗ್ವಾದ ನಡೆಸಿದರು ಎನ್ನಲಾಗಿದೆ. ಈ ಹಂತದಲ್ಲಿ ಅಲ್ಲೇ ಇದ್ದ ಜನಾರ್ಧನ ರೆಡ್ಡಿಯವರ ಕೆಲ ಬೆಂಬಲಿಗರೂ ಕೂಡ ಏಕಮುಖ ಸಂಚಾರದಲ್ಲಿ ಕಾರು ಚಲಾಯಿಸುವಂತೆ ಜನಾರ್ಧನ ರೆಡ್ಡಿಯವರನ್ನು ಪ್ರೋತ್ಸಾಹಿಸಿದರು ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಯವರ ಬೆಂಗಾವಲು ಪಡೆಗಳ ವಾಹನಗಳಿಂದಾಗಿ ಸಂಚಾರ ಅಸ್ತವ್ಯಸ್ಥಗೊಳ್ಳುವುದು, ಸಾರ್ವಜನಿಕರು ಇಕ್ಕಟ್ಟಿಗೆ ಸಿಲುಕುವುದು ಮತ್ತೊಮೆ ಚರ್ಚೆಗೆ ಗ್ರಾಸವಾಗಿದ್ದರೆ, ಇತ್ತ ಶಾಸಕರೊಬ್ಬರು ನಿಯಮಗಳನ್ನು ಉಲ್ಲಂಘಿಸಿ ಭದ್ರತೆಯ ವೈಫಲ್ಯಕ್ಕೆ ಕಾರಣವಾಗುವಂತೆ ವಾಹನ ಚಲಾಯಿಸುವುದು, ಅದರಲ್ಲೂ ಏಕಮುಖ ಸಂಚಾರ ಮಾರ್ಗದ ನಿಯಮಗಳನ್ನು ಉಲ್ಲಂಘಿಸುವುದು ಪ್ರಶ್ನಾರ್ಹವಾಗಿದೆ.