ಬೆಂಗಳೂರು,ಜ.14- ಅಮೂಲ್ಯ ಲೋಹವೆಂದೇ ಪರಿಗಣಿಸುವ ಚಿನ್ನ-ಬೆಳ್ಳಿ ಬೆಲೆಗಳು ಕಳೆದೊಂದು ವಾರದಿಂದ ನಿರಂತರ ಏರಿಕೆಯಾಗುತ್ತಿದ್ದು, ಹೊಸ ದಾಖಲೆ ನಿರ್ಮಿಸಿವೆ. ಡಿಸೆಂಬರ್‌ನಲ್ಲಿ ಏರಿಳಿತವಾ ಗುತ್ತಿದ್ದ ದರಗಳು ಜನವರಿಯ ಮೊದಲ ವಾರದಲ್ಲಿ ಮುಂದುವರೆದಿತ್ತು. ಆದರೆ ಎರಡನೇ ವಾರದಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ನಾಗಾಲೋಟದಲ್ಲಿ ಏರಿಕೆಯಾಗುತ್ತಿವೆ. ಗಗನಮುಖಿಯಾಗಿರುವ ಬೆಲೆಯಿಂದಾಗಿ ಆಭರಣ ಪ್ರಿಯರಿಗೆ ಭಾರೀ ನಿರಾಸೆ ಉಂಟಾಗಿದೆ.
ಇಂದು ಶುದ್ದ ಚಿನ್ನ ಪ್ರತಿ ಗ್ರಾಂಗೆ 109 ರೂ. ಏರಿಕೆಯಾಗಿ ಒಟ್ಟು 14,362 ರೂ.ಗೆ ತಲುಪಿದೆ. ಬೆಳ್ಳಿ ಪ್ರತಿ ಕೆ.ಜಿಗೆ 15 ಸಾವಿರ ರೂ. ಹೆಚ್ಚಳವಾಗಿದ್ದು, 2,90,000 ರೂ.ಗೆ ತಲುಪಿದೆ. ಇದು ಚಿನ್ನ-ಬೆಳ್ಳಿ ದರಗಳಲ್ಲಿ ಇದುವರೆಗಿನ ಅತಿಹೆಚ್ಚು ಧಾರಣೆ ಇದಾಗಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಿಸಿದಂತಾಗಿದೆ.
24 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂಗೆ 109 ರೂ. ಏರಿಕೆಯಾಗಿದ್ದು, 14,362 ರೂ.ಗೆ ತಲುಪಿದೆ. 22 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನಕ್ಕೆ 100 ರೂ. ಏರಿಕೆಯಾಗಿದ್ದು, 13,185 ರೂ.ಗೆ ತಲುಪಿದೆ. ಅದೇ ರೀತಿ 18 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂಗೆ 82 ರೂ. ಏರಿಕೆಯಾಗಿದ್ದು, 10,722 ರೂ.ಗೆ ತಲುಪಿದೆ.
ಅಪರಂಜಿ ಚಿನ್ನ 14 ಸಾವಿರ ರೂ. ಗಡಿ ದಾಟಿದ್ದರೆ ಆಭರಣ ಚಿನ್ನ 13,000 ರೂ. ಗಡಿ ದಾಟಿದೆ. 18 ಕ್ಯಾರೆಟ್‌ನ ಚಿನ್ನವು 10 ಸಾವಿರ ರೂ. ದಾಟಿದ್ದು, ಹುಬ್ಬೇರಿಸುವಂತೆ ಮಾಡಿದೆ.ಜ.9ರಂದು 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 13,931 ರೂ. ಇತ್ತು. ಈಗ 14362 ರೂ.ಗೆ ಏರಿಕೆಯಾಗಿದ್ದು, ಒಂದು ವಾರದಲ್ಲಿ ಸುಮಾರು 500 ರೂ.ಗೂ ಹೆಚ್ಚು ಹೆಚ್ಚಳ ಕಂಡಿದೆ.ಚಿನ್ನದಂತೆಯೇ ಬೆಳ್ಳಿಯೂ ನಿರಂತರವಾಗಿ ಏರಿಕೆಯಾಗುತ್ತಿದೆ. ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿಯ ದರವು ನಾಗಾಲೋಟದಲ್ಲಿ ಸಾಗುತ್ತಿರುವುದು ಕಂಡುಬಂದಿದೆ.
ಪ್ರತಿ ಗ್ರಾಂ ಬೆಳ್ಳಿಗೆ 15 ರೂ. ಏರಿಕೆಯಾಗಿ 290 ರೂ. ತಲುಪಿದೆ. ಅದೇ ರೀತಿ ಕೆಜಿಗೆ 15 ಸಾವಿರ ರೂ. ಹೆಚ್ಚಳವಾಗಿದ್ದು, 2,90,000 ತಲುಪಿದೆ. ಇದೇ ರೀತಿ ಬೆಲೆ ಏರಿಕೆ ಮುಂದುವರೆದರೆ ಜನಸಾಮಾನ್ಯರು ಚಿನ್ನ-ಬೆಳ್ಳಿ ಆಭರಣಗಳನ್ನು ಖರೀದಿಸುವುದು ಅಸಾಧ್ಯವಾಗುವ ಪರಿಸ್ಥಿತಿ ಉಂಟಾಗಲಿದೆ.
ಜ.9ರಂದು ಪ್ರತಿ ಕೆಜಿಗೆ 3 ಸಾವಿರ ರೂ.ನಷ್ಟು ಇಳಿಕೆಯಾಗಿದ್ದ ಬೆಳ್ಳಿ ಅಂದು 2,49,000 ರೂ.ನಷ್ಟು ಇತ್ತು. ಇಂದು 2,90,000 ರೂ.ಗೆ ತಲುಪಿದ್ದು, ಒಂದು ವಾರದಲ್ಲಿ ಪ್ರತಿ ಕೆಜಿಗೆ 41 ಸಾವಿರ ರೂ.ನಷ್ಟು ಹೆಚ್ಚಳವಾಗಿದೆ. ಇದು ಚಿನ್ನ-ಬೆಳ್ಳಿ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ.
ಜಾಗತಿಕವಾಗಿ ಉಂಟಾಗುತ್ತಿರುವ ರಾಜಕೀಯ ವಿದ್ಯಮಾನಗಳು, ವಿದೇಶಿ ವ್ಯವಹಾರದಲ್ಲಾಗುತ್ತಿರುವ ವ್ಯತ್ಯಾಸಗಳು, ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿಸುತ್ತಿರುವುದು , ಹೂಡಿಕೆದಾರರು ಚಿನ್ನಬೆಳ್ಳಿ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣಗಳೆಂದು ವ್ಯಾಖ್ಯಾನಿಸಲಾಗುತ್ತಿದೆ. ಅಲ್ಲದೆ ಷೇರುಪೇಟೆಯಲ್ಲಿ ಆಗುತ್ತಿರುವ ಏರಿಳಿತಗಳು ಕೂಡ ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಪರೋಕ್ಷ ಕಾರಣವಾಗಿದೆ ಎಂಬ ಅಭಿಪ್ರಾಯವೂ ಇದೆ.
ವಿದ್ಯುತ್‌ಚಾಲಿತ ವಾಹನಗಳಿಗೆ ಬೆಳ್ಳಿಯನ್ನು ಬಳಕೆ ಮಾಡುವುದು ಹಾಗೂ ಚಿನ್ನ ಲೇಪಿತ ಬೆಳ್ಳಿ ಆಭರಣಗಳ ಬೇಡಿಕೆ ಹೆಚ್ಚಾಗಿರುವುದು ಬೆಳ್ಳಿಯ ಬೆಲೆ ನಿರಂತರ ಏರಿಕೆಗೆ ಕಾರಣ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
