ಬೆಂಗಳೂರು, ಅ.6- ರಾಜಧಾನಿ ಬೆಂಗಳೂರು ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಯಿಂದ ನಗರದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತ ವಾಗಿವೆ. ಹಲವಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.
ವಾಣಿಜ್ಯ ಮಳಿಗೆಗಳಿಗೂ ನೀರು ನುಗ್ಗಿದ್ದು, ವಸತಿ ಸಮುಚ್ಚಯದ ನೆಲಮಾಳಿಗೆಯಲ್ಲಿ ನೀರು ನಿಂತು ವಾಹನಗಳು ಹಾನಿಗೊಂಡಿವೆ. ಹವಾಮಾನ ಇಲಾಖೆ ಪ್ರಕಾರ, ಕಳೆದ ರಾತ್ರಿ 37 ಮಿಲಿ ಮೀಟರ್ ಮಳೆ ದಾಖಲಾಗಿದ್ದು, ನಗರದ ಕೆಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಬಿನ್ನಿಪೇಟೆಯಲ್ಲಿ ಕಾಂಪೌಂಡ್ ಕುಸಿದು ವಾಹನಗಳ ಮೇಲೆ ಬಿದ್ದ ಪರಿಣಾಮ ಜಖಂಗೊಂಡಿವೆ. ಹಲವು ಪ್ರದೇಶಗಳಿಗೆ ಜಲದಿಗ್ಭಂಧನ ಉಂಟಾಗಿದೆ. ಪ್ರಮುಖ ರಸ್ತೆಗಳಲ್ಲಿ ನದಿಯಂತೆ ನೀರು ಹರಿದು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಸಂಜೆ 7 ಗಂಟೆಗೆ ಆರಂಭಗೊಂಡ ಮಳೆ ತಡರಾತ್ರಿವರೆಗೂ ಸುರಿದಿದ್ದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು. ವರುಣನ ಅಬ್ಬರಕ್ಕೆ ಸಿಲಿಕಾನ್ ಸಿಟಿ ತತ್ತರಿಸಿದೆ.
ಕೆ.ಆರ್. ಮಾರುಕಟ್ಟೆ, ಗೋವಿಂದರಾಜನಗರ, ರಾಜಾಜಿನಗರ, ವಿಜಯನಗರ, ಯಲಹಂಕ, ಬನಶಂಕರಿ, ಮೆಜೆಸ್ಟಿಕ್, ಮಲ್ಲೇಶ್ವರಂ, ವೈಟ್ ಫೀಲ್‌್ಡ, ಹೆಬ್ಬಾಳ, ಕಾರ್ಪೊರೇಷನ್, ಕೋರಮಂಗಲ ಸೇರಿ ಹಲವೆಡೆ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಮಡಿವಾಳ ಕೆಳಸೇತುವೆ ಜಲಾವೃತವಾಗಿದ್ದರಿಂದ ಜನರು ಅಕ್ಷರಶಃ ಸಂಕಷ್ಟ ಅನುಭವಿಸಿದರು.
ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಜಲಾವೃತವಾಗಿದ್ದು, 603 ಫ್ಲಾಟ್‌ಗಳಿದ್ದು, ಎರಡು ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ ಹಾಕಲಾಗಿದ್ದು, ಟ್ರ್ಯಾಕ್ಟರ್ ಮೂಲಕ ನಿವಾಸಿಗನ್ನು ಶಿಫ್‌್ಟ ಮಾಡಲಾಗಿದೆ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ 80ಕ್ಕೂ ಹೆಚ್ಚು ಕಾರು, ನೂರಕ್ಕೂ ಹೆಚ್ಚು ಬೈಕ್‌ಗಳು ನೀರಿನಲ್ಲಿ ಮುಳುಗಿವೆ. ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ, ನೀರನ್ನ ಪೂರೈಸಲಾಗಿದೆ.ಹನ್ನೆರಡು ಮಂದಿಯ ಎಸ್‌ಡಿಆರ್‌ಎಫ್ ತಂಡ ಅಲ್ಲಿಗೆ ತೆರಳಿ ಮುಂದಿನ ಕ್ರಮ ಕೈಗೊಂಡಿದೆ.
ಮಹಾಮಳೆಯಿಂದ ಬಸವೇಶ್ವರನಗರದಲ್ಲಿರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿತ್ತು. ಇದರಿಂದ 15ಕ್ಕೂ ಅಧಿಕ ವೃದ್ಧರು ಪರದಾಡಿದ್ದಾರೆ. ಬಸವೇಶ್ವರ ನಗರದ 8ಬಿ ಮುಖ್ಯರಸ್ತೆ ಹೊಳೆಯಂತಾಗಿತ್ತು. ಹಾಗಾಗಿ ಫ್ಲೆ ೖವುಡ್ ಹಾಗೂ ಗ್ಲಾಸ್ ಅಂಗಡಿ ಸಂಪೂರ್ಣ ಜಲಾವೃತವಾಗಿತ್ತು. ಕಲ್ಯಾಣ ಮಂಟಪ, ದೇವಾಲಯದಲ್ಲಿ ನೀರು ನುಗ್ಗಿ ಅಲ್ಲಿದ್ದವರು ಆತಂಕಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ನಗರದ ಹಲವೆಡೆ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ನೀರನ್ನು ಹೊರಹಾಕಿದ್ದಾರೆ.
ಬೆಳಿಗ್ಗೆ ಪುಲಕೇಶಿನಗರದಲ್ಲಿ ಮನೆ ಮೇಲೆ ಉರುಳಿದ್ದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಕಳೆದ ರಾತ್ರಿ ಬಸವೇಶ್ವರನಗರ, ಮಲ್ಲೇಶ್ವರಂ, ಆರ್‌ಆರ್ ನಗರ, ಮಾರತ್ತಹಳ್ಳಿ, ಅನ್ನಪೂರ್ಣೇಶ್ವರಿ ನಗರ ಮುಂತಾದ ಕಡೆ ರಸ್ತೆಗಳಲ್ಲಿ ಮರಗಳು ಬಿದ್ದಿದ್ದು, ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಮರಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ.
ಬಿಬಿಎಂಪಿ ದಕ್ಷಿಣ ವಲಯ ವಿಜಯನಗರದ ಮನುವನ ಬಳಿ ರಾಜಕಾಲುವೆಯ ಸ್ಯಾನಿಟರಿ ಲೈನ್‌ನಲ್ಲಿ ನೀರು ಹರಿದಿದ್ದು, ಸುಮಾರು ಹತ್ತು ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು. ಪಾಲಿಕೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನೀರು ತೆರವು ಕಾರ್ಯಾಚರಣೆ ಕೈಗೊಂಡಿದ್ದರು.