Sunday, October 6, 2024
Homeರಾಜಕೀಯ | Politicsಸಮಿಶ್ರ ಸರ್ಕಾರದ ಕೀರ್ತಿಗೆ ನಾವೂ ಪಾಲುದಾರರು : ಗೃಹಸಚಿವ ಪರಮೇಶ್ವರ್‌

ಸಮಿಶ್ರ ಸರ್ಕಾರದ ಕೀರ್ತಿಗೆ ನಾವೂ ಪಾಲುದಾರರು : ಗೃಹಸಚಿವ ಪರಮೇಶ್ವರ್‌

Home Minister Parameshwar coalition government

ಬೆಂಗಳೂರು,ಅ.6- ಸಮಿಶ್ರ ಸರ್ಕಾರದ ಕೀರ್ತಿ ಮತ್ತು ಅಪಕೀರ್ತಿಗಳ ಬಗ್ಗೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯೊಬ್ಬರೇ ಲಾಭ ಪಡೆಯಲು ಸಾಧ್ಯವಿಲ್ಲ, ನಾವೂ ಕೂಡ ಪಾಲುದಾರರು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

14 ತಿಂಗಳ ತಮ ಆಡಳಿತದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಕುಮಾರಸ್ವಾಮಿ ಯವರ ಸವಾಲಿಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌ ಅವರು, ಈ ಕುರಿತು ಒಂದು ಹೋಲಿಕೆ ನಡೆಯಲಿ. 14 ತಿಂಗಳು ನಾನು ಉಪಮುಖ್ಯಮಂತ್ರಿಯಾಗಿ ಅವರ ಜೊತೆಗಿದ್ದೆ. ಒಳ್ಳೆಯದು ಹಾಗೂ ಕೆಟ್ಟದ್ದು ಎರಡರಲ್ಲೂ ನಮ ಪಾಲಿದೆ ಎಂದು ಹೇಳಿದರು.

ಹರಿಯಾಣದಲ್ಲಿ ಕಾಂಗ್ರೆಸ್‌‍ಗೆ ಸ್ಪಷ್ಟ ಬಹುಮತ ಬರಲಿದೆ ಎಂದು ನಮ ವರದಿ ತಿಳಿಸಿತ್ತು. ಮಾಧ್ಯಮಗಳು ಅದನ್ನೇ ಪುನರುಚ್ಚರಿಸಿವೆೆ. ಜಮು-ಕಾಶೀರದಲ್ಲಿ ಸಮಿಶ್ರ ಸರ್ಕಾರ ರಚಿಸುವ ಸಾಧ್ಯತೆಯಿದೆ. ಇದರ ಪರಿಣಾಮ ಮಹಾರಾಷ್ಟ್ರದ ಚುನಾವಣೆಯ ಮೇಲಾಗಲಿದೆ ಎಂದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಒಂದು ವೇಳೆ ಯಾವುದಾದರೂ ಸಮುದಾಯಕ್ಕೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ಗಣತಿ ಮಾನ್ಯತೆ ಹೊಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುತ್ತದೆ. ರಾಜ್ಯ ಸರ್ಕಾರ ಈಗಾಗಲೇ ನಡೆಸಿರುವ ಸಮೀಕ್ಷೆಯನ್ನು ಬಿಡುಗಡೆ ಮಾಡದೇ ಇದ್ದರೆ ಆಗ ಪ್ರಶ್ನೆ ಮಾಡಬೇಕು. ನಾವು ಅದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಾಗ ವಿವಾದಗಳು ಸೃಷ್ಟಿಯಾಗುತ್ತವೆ. ಇದು ಸರಿಯಲ್ಲ.

ಸಚಿವ ಸಂಪುಟ ಸಭೆಯಲ್ಲಂತೂ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಅದನ್ನು ಬಹಿರಂಗಪಡಿಸುವ ಮುನ್ನ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಬೇಕೇ? ಅಥವಾ ನೇರವಾಗಿ ಬಹಿರಂಗಪಡಿಸಬಹುದೇ ಎಂಬ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.
ಈವರೆಗಿನ ವಿಳಂಬಕ್ಕೂ ಕೆಲವು ಕಾರಣಗಳಿವೆ. ಈಗ ಆ ಬಗ್ಗೆ ಚರ್ಚೆ ಬೇಡ. ಸಚಿವ ಸಂಪುಟವೇ ನೇರವಾಗಿ ನಿರ್ಧಾರ ತೆಗೆದುಕೊಂಡು ವರದಿಯನ್ನು ಬಹಿರಂಗಪಡಿಸಲು ಅವಕಾಶವಿದೆ ಎಂದು ಹೇಳಿದರು.

ಕೆಲ ಸಮುದಾಯಗಳ ಜನಸಂಖ್ಯೆ ಕಡಿಮೆ ಇದೆ, ಇನ್ನೂ ಕೆಲವು ಸಮುದಾಯದಲ್ಲಿ ಹೆಚ್ಚಿದೆ ಎಂಬ ಗೊಂದಲವಿದೆ. ಕೇಂದ್ರ ಸರ್ಕಾರ ನಡೆಸುವ ಗಣತಿ ವರದಿ ಮತ್ತು ರಾಜ್ಯಸರ್ಕಾರದ ನಡುವೆ ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಳ್ಳಲಾಗುವುದು ಎಂದರು.

160 ಕೋಟಿ ರೂ. ಖರ್ಚು ಮಾಡಿ ಸಮೀಕ್ಷೆ ನಡೆಸಲಾಗಿದೆ. ಇದನ್ನು ಬಹಿರಂಗಪಡಿಸದೇ ಇದ್ದರೆ ಸಿಎಜಿಯವರು ಪ್ರಶ್ನೆ ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷರು ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ನೇರವಾದ ಸಂಬಂಧ ಇರುತ್ತದೆ. ಯಾವುದೇ ರಾಜ್ಯದಲ್ಲಿ ಸರ್ಕಾರ ಇದ್ದಾಗ ಹೈಕಮಾಂಡ್‌ ಅಲ್ಲಿನ ಆಡಳಿತ ವ್ಯವಸ್ಥೆ ಮೇಲೆ ನಿಗಾ ಇಟ್ಟಿರುತ್ತದೆ. ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡಬಹುದು. ಈ ಹಿಂದೆ ನಾನು ಅಧ್ಯಕ್ಷನಾಗಿ ಕೆಲಸ ಮಾಡಿದ್ದಾಗಲೂ ಈ ರೀತಿಯ ಮಾಹಿತಿಗಳ ಸಂಗ್ರಹ ನಡೆಯುತ್ತಿತ್ತು ಎಂದರು.

ರಾಜಕೀಯವಾಗಿ ಸಭೆ ನಡೆಸಿ, ರಹಸ್ಯವಾಗಿ ಚರ್ಚೆ ನಡೆಸಿಲ್ಲ. ನಾನು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಹೋಗುವ ಸಂದರ್ಭದಲ್ಲಿ ಸಚಿವ ಮಹದೇವಪ್ಪ ಅವರ ಮನೆಗೆ ಭೇಟಿ ನೀಡಿದ್ದೆ. ಅದನ್ನೇ ರಹಸ್ಯ ಸಭೆ ಎಂದು ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ. ನಮಲ್ಲಿ ಯಾವುದೇ ಗುಂಪುಗಾರಿಕೆ ಅಥವಾ ರಹಸ್ಯ ಸಭೆಗಳು ನಡೆಯುತ್ತಿಲ್ಲ. ಅನಗತ್ಯವಾಗಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಜೆಪಿ ಮತ್ತು ಜೆಡಿಎಸ್‌‍ನವರು ಹಿಂದುಳಿದ ವರ್ಗಗಳ ನಾಯಕ ಎಂಬ ಕಾರಣಕ್ಕಾಗಿಯೂ ಮುಡಾ ಪ್ರಕರಣದಲ್ಲಿ ಗುರಿಯಾಗಿಸಿ ಆರೋಪ ಮಾಡುತ್ತಿರಬಹುದು. ಸಿದ್ದರಾಮಯ್ಯ ಮಾಹಿತಿ ಇಲ್ಲದೆ ಹೇಳಿಕೆ ನೀಡಿಲ್ಲ. ಜಾತಿ ಆಧಾರಿತವಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಭಾವನೆಯೂ ಇರಬಹುದು ಎಂದರು.

ಮಂಗಳೂರಿನಲ್ಲಿ ಮಾಜಿ ಶಾಸಕ ಮೊಯಿದ್ದೀನ್‌ ಅವರ ಸಹೋದರರ ಕಾರು ಅಪಘಾತಕ್ಕೊಳಗಾಗಿದೆ, ಅವರು ನಾಪತ್ತೆಯಾಗಿದ್ದಾರೆ. ಪೊಲೀಸರು ಎರಡು, ಮೂರು ತಂಡಗಳನ್ನು ಮಾಡಿ ಹುಡುಕಾಟ ನಡೆಸಿದ್ದಾರೆ ಎಂದು ಪರಮೇಶ್ವರ್‌ ತಿಳಿಸಿದರು.

RELATED ARTICLES

Latest News