Sunday, October 6, 2024
Homeರಾಜ್ಯಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ

ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ

Snehamai Krishna filed another complaint against CM Siddaramaiah

ಬೆಂಗಳೂರು,ಅ.6- ರಾಜ್ಯದ ಜನರಿಗೆ ಪ್ರಚೋದನೆ ನೀಡಿ ತಮಗೆ ಹಾಗೂ ತಮ ಕುಟುಂಬಕ್ಕೆ ಹಾನಿ ಮಾಡುವ ಪ್ರಯತ್ನ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧಿಸುವಂತೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಈಗ ಮತ್ತೊಂದು ದೂರನ್ನುಪೊಲೀಸ್‌‍ ಮಹಾ ನಿರ್ದೇಶಕರಿಗೆ ನೀಡಿ ಸಚಿವ ಭೈರತಿ ಸುರೇಶ್‌ ಮತ್ತು ಹಿಂದಿನ ಲೋಕಾಯುಕ್ತ ಎಸ್ಪಿ ವಿರುದ್ಧ
ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಿನ್ನೆ ರಾಯಚೂರಿನಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್‌‍ನ ಸುಳ್ಳು ಮತ್ತು ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ಧರಾಗಿ ಎಂದು ಕರೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತ ಎಸ್ಪಿ ಉದೇಶ್‌ ಅವರಿಗೆ ವಾಟ್‌್ಸಆ್ಯಪ್‌ ಮೂಲಕ ದೂರು ನೀಡಿದ ಸ್ನೇಹಮಯಿ ಕೃಷ್ಣ, ಲೋಕಾಯುಕ್ತದ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಬಹಿರಂಗವಾಗಿ ಪ್ರಚೋದನೆ ನೀಡುತ್ತಿದ್ದಾರೆ.

ಇಂತಹ ಪ್ರಚೋದನೆಯಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ತೊಂದರೆಯಾಗುವ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಿದ್ದರಾಮಯ್ಯ ಅವರನ್ನು ಬಂಧಿಸಬೇಕು ಎಂದು ಮನವಿ ಸಲ್ಲಿಸಿದ್ದರು.

ಮುಂದುವರೆದು ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕರಿಗೆ ದೂರು ನೀಡಿರುವ ಸ್ನೇಹಮಯಿ ಕೃಷ್ಣ, ತಮಗೆ ದೊರೆತಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಪ್ರಭಾವಿ ವ್ಯಕ್ತಿಗಳು ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮೈಸೂರು ಲೋಕಾಯುಕ್ತದ ಅಧಿಕಾರಿಗಳು ಕರ್ನಾಟಕ ಲೋಕಾಯುಕ್ತರಿಗೆ ದಾಖಲೆಗಳೊಂದಿಗೆ ಸಮಗ್ರ ವರದಿ ನೀಡಿ ಸರ್ಚ್‌ ವಾರೆಂಟ್‌ ಪಡೆದುಕೊಂಡು ಜು.26 ರಂದು ಶೋಧ ಕಾರ್ಯಾಚರಣೆ ಮೂಲಕ ದಾಖಲೆಗಳನ್ನು ವಶಪಡಿಸಿಕೊಳ್ಳಲು ತಯಾರಾಗಿದ್ದರು. ಆ ಸಮಯದಲ್ಲಿ ಲೋಕಾಯುಕ್ತ ಪೊಲೀಸ್‌‍ ಇನ್‌ಸ್ಪೆಕ್ಟರ್‌ ಆಗಿದ್ದ ಸುಜಿತ್‌ ಅವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಭೈರತಿ ಸುರೇಶ್‌ ಹೆಲಿಕಾಫ್ಟರ್‌ನಲ್ಲಿ ಬಂದು ಕೆಲವು ಪ್ರಮುಖ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅವುಗಳನ್ನು ಆಧರಿಸಿಯೇ ಸಿದ್ದರಾಮಯ್ಯನವರು ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದರು. ನಂತರ ಸುಜಿತ್‌ ಅವರನ್ನು ಬೆಂಗಳೂರಿನ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಲಾಯಿತು ಎಂದು ದೂರಿದ್ದಾರೆ.

ಒಟ್ಟು 9 ಪ್ರಶ್ನೆಗಳನ್ನು ಕೇಳಿರುವ ಸ್ನೇಹಮಯಿ ಕೃಷ್ಣ ಅಕ್ರಮ ನಿವೇಶನಗಳ ಬಗ್ಗೆ ಮೈಸೂರು ಲೋಕಾಯುಕ್ತ ಪೊಲೀಸರು ದಾಖಲೆಗಳೊಂದಿಗೆ ಸಮಗ್ರ ವರದಿಯನ್ನು ಯಾವ ದಿನ ನೀಡಿದ್ದರು. ಇದನ್ನು ಆಧರಿಸಿ ಶೋಧ ಕಾರ್ಯಾಚರಣೆಗೆ ನಿರ್ಧರಿಸಲಾಗಿತ್ತೇ?, ಸರ್ಚ್‌ ವಾರೆಂಟ್‌ ಪಡೆಯಲಾಗಿತ್ತೇ?, ಯಾವ ದಿನ ನಿಗದಿಯಾಗಿತ್ತು?, ಒಂದು ವೇಳೆ ದಾಳಿ ನಡೆಸಿದ್ದರೆ, ಯಾವೆಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ?, ಜು 1ರಿಂದ ಆ.30 ರ ನಡುವೆ ಸುಜಿತ್‌ ಮತ್ತು ಭೈರತಿ ಸುರೇಶ್‌ರವರ ಮೊಬೈಲ್‌ಗಳ ಕರೆ ಮಾಹಿತಿ ಮತ್ತು ಸ್ಥಳ ವಿವರಗಳನ್ನು ಪಡೆದುಕೊಳ್ಳಬೇಕು. ಒಂದು ವೇಳೆ ನೇರವಾಗಿ ಭೇಟಿಯಾಗಿದ್ದರೆ ಯಾವ ಕಾರಣಕ್ಕೆ ಅವರಿಬ್ಬರ ನಡುವೆ ಪರಸ್ಪರ ಸಂಪರ್ಕವೇರ್ಪಟ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಚಿವ ಭೈರತಿ ಸುರೇಶ್‌ ಮೈಸೂರಿಗೆ ಯಾವ ಕಾರಣಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದರು?, ಎಷ್ಟು ಕಡತಗಳನ್ನು ತೆಗೆದುಕೊಂಡು ಹೋದರು?, ಇದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದಾದರೂ ಪತ್ರಗಳನ್ನು ನೀಡಿದ್ದಾರೆಯೇ?, ಸುಜಿತ್‌ ಅವರನ್ನು ಯಾವ ಕಾರಣಕ್ಕಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ? ಎಂಬ ಅಂಶಗಳು ತನಿಖಾ ಯೋಗ್ಯವಾಗಿವೆ ಎಂದು ಹೇಳಿರುವ ಸ್ನೇಹಮಯಿ ಕೃಷ್ಣ, ಇ-ಮೇಲ್‌ ಮೂಲಕ ದೂರನ್ನು ಪೊಲೀಸ್‌‍ ಮಹಾ ನಿರ್ದೇಶಕರಿಗೆ ರವಾನಿಸಿದ್ದಾರೆ.

RELATED ARTICLES

Latest News