Saturday, November 23, 2024
Homeರಾಜ್ಯಕುತೂಹಲ ಕೆರಳಿಸಿದ ಬಿವೈವಿ-ಸತೀಶ್‌ ಭೇಟಿ

ಕುತೂಹಲ ಕೆರಳಿಸಿದ ಬಿವೈವಿ-ಸತೀಶ್‌ ಭೇಟಿ

ಬೆಂಗಳೂರು,ಅ.7- ಆಡಳಿತಾರೂಢ ಕಾಂಗ್ರೆಸ್‌‍ನಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದಿಢೀರನೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ರಾಜಕಾರಣದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬಂತೆ ವಿಜಯೇಂದ್ರ ಮತ್ತು ಸತೀಶ್‌ ಜಾರಕಿಹೊಳಿ ಭೇಟಿ ನಾನಾ ಅರ್ಥಗಳನ್ನು ಹುಟ್ಟು ಹಾಕಿದೆ. ಮೇಲ್ನೋಟಕ್ಕೆ ತಮ ಸ್ವಕ್ಷೇತ್ರ ಶಿಕಾರಿಪುರದ ಸ್ಥಳೀಯ ಸಮಸ್ಯೆಗಳ ಕುರಿತು ವಿಜಯೇಂದ್ರ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಎಂದರೂ ಏಕಾಏಕಿ ಇಬ್ಬರು ಪ್ರಭಾವಿ ನಾಯಕರ ಗುಪ್ತ ಭೇಟಿ ಸಹಜವಾಗಿ ಕುತೂಹಲ ಕೆರಳಿಸುವಂತೆ ಮಾಡಿದೆ.

ಭಾನುವಾರವಷ್ಟೇ ತುಮಕೂರಿನಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಸತೀಶ್‌ ಜಾರಕಿಹೊಳಿ ಭೇಟಿ ಮಾಡಿದ್ದರು.
ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವೆ ಗೌಪ್ಯ ಮಾತುಕತೆ ನಡೆದಿರುವಾಗಲೇ ವಿಜಯೇಂದ್ರರ ಭೇಟಿ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಭಾನುವಾರವಷ್ಟೇ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದ ಬಿಜೆಪಿ ಅಧ್ಯಕ್ಷರು ದಸರಾ ಹಬ್ಬದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬಹುದೆಂದು ಸ್ಪೋಟಕ ಹೇಳೀಕೆ ನೀಡಿದ್ದರು.

ಸಾಮಾನ್ಯವಾಗಿ ಎಂದಿಗೂ ರಾಜಕಾರಣದ ಗುಟ್ಟು ಬಿಡದೆ ಸದಾ ಗೌಪ್ಯತೆ ಕಾಪಾಡಿಕೊಳ್ಳುವ ಸತೀಶ್‌ ಜಾರಕಿಹೊಳಿ ಮತ್ತು ವಿಜಯೇಂದ್ರ ಭೇಟಿ ಸ್ವತಃ ಬಿಜೆಪಿಗೂ ಆಶ್ಚರ್ಯ ಉಂಟು ಮಾಡಿದೆ. ಮುಡಾ ಪ್ರಕರಣದ ನಂತರ ಆಡಳತಾರೂಢ ಕಾಂಗ್ರೆಸ್‌‍ನಲ್ಲಿ ಕೆಲವು ಮಿಂಚಿನ ಬೆಳವಣಿಗೆಗಳು ನಡೆಯುತ್ತಿದ್ದು, ಒಂದು ವೇಳೆ ಸರ್ಕಾರ ಅಸ್ಥಿರಗೊಂಡರೆ ಸತೀಶ್‌ ಜಾರಕಿಹೊಳಿ ಮೂಲಕ ಪರ್ಯಾಯ ಸರ್ಕಾರ ರಚನೆಗೆ ತೆರೆಮರೆಯಲ್ಲಿ ವೇದಿಕೆ ಸಿದ್ದಪಡಿಸಲಾಗುತ್ತದೆ ಎಂಬ ವದಂತಿಗಳು ಕೂಡ ಕೇಳಿಬರುತ್ತಿದೆ.

ದಕ್ಷಿಣ ಭಾರತದ ಸಣ್ಣ ರಾಜ್ಯವೊಂದರ ಮುಖ್ಯಮಂತ್ರಿಯನ್ನು ಸತೀಶ್‌ ಜಾರಕಿಹೊಳಿ ಭೇಟಿ ಮಾಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಕಳೆದ ಒಂದು ತಿಂಗಳಿನಿಂದ ರಾಜ್ಯ ರಾಜಕಾರಣದ ಆಕರ್ಷಣೀಯ ಕೇಂದ್ರಬಿಂದುವಾಗಿ ಹೊರಹೊಮಿರುವ ಸತೀಶ್‌ ಜಾರಕಿಹೊಳಿ ಕೆಲದಿನಗಳ ಹಿಂದೆ ದೆಹಲಿಗೆ ತೆರಳಿದ್ದರು. ಈಗ ಬಿ.ವೈ ಭೇಟಿ ಮಾಡಿರುವ ಮಾತುಕತೆ ನಡೆಸಿರುವುದು ಹೊಸ ಬೆಳವಣಿಗೆಯಾಗಿದೆ.

ರಾಜಕಾರಣದಲ್ಲಿ ಯಾವುದನ್ನೂ ಅಸಾಧ್ಯ ಎಂದು ಭಾವಿಸುತ್ತೇವೋ ಕೆಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗಿರುವ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ವಿಜಯೇಂದ್ರ ಮತ್ತು ಸತೀಶ್‌ ಜಾರಕಿಹೊಳಿ ಭೇಟಿ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ.

RELATED ARTICLES

Latest News