Monday, October 7, 2024
Homeರಾಜ್ಯಜಾತಿ ಗಣತಿ ಕಿಚ್ಚು : ಎದುರಾಳಿಗಳಿಗೆ ಠಕ್ಕರ್‌ ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ

ಜಾತಿ ಗಣತಿ ಕಿಚ್ಚು : ಎದುರಾಳಿಗಳಿಗೆ ಠಕ್ಕರ್‌ ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅ.7- ಪ್ರಬಲ ವಿರೋಧದ ನಡುವೆಯೂ ಜಾತಿ ಜನಗಣತಿಯ ವರದಿ ಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಮೂಲಕ ರಾಜಕೀಯ ಎದುರಾಳಿಗಳಿಗೆ ಠಕ್ಕರ್‌ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಸಚಿವರು, ಶಾಸಕರೊಂದಿಗೆ ಮಹತ್ವದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, 2015 ರಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ ಕುರಿತು ಅಭಿಪ್ರಾಯ ಸಂಗ್ರಹಿಸಿದರು.

ಸಚಿವ ಎನ್‌.ಎಸ್‌‍.ಬೋಸರಾಜ್‌, ಭೈರತಿ ಸುರೇಶ್‌, ಬಿಜೆಪಿಯ ವಿಧಾನಪರಿಷತ್‌ ಸದಸ್ಯ ರವಿಕುಮಾರ್‌, ಕಾಂಗ್ರೆಸ್‌‍ನ ಶಾಸಕರಾದ ಬಿ.ಕೆ.ಹರಿಪ್ರಸಾದ್‌, ಅಜಯ್‌ಸಿಂಗ್‌, ಎಂ.ಆರ್‌.ಸೀತಾರಾಮ್‌, ಬಿ.ಜಿ.ಗೋವಿಂದಪ್ಪ, ಶ್ರೀನಿವಾಸ್‌‍, ಬೇಳೂರು ಗೋಪಾಲ್‌ಕೃಷ್ಣ, ಗವಿಯಪ್ಪ, ನಾಗರಾಜ್‌ ಯಾದವ್‌, ರಾಘವೇಂದ್ರ ಹಿಟ್ನಾಳ್‌ ಸೇರಿದಂತೆ ಹಲವಾರು ಶಾಸಕರು, ವಿಧಾನಪರಿಷತ್‌ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಮುಖ್ಯಮಂತ್ರಿಯವರು ಹಿಂದುಳಿದ ವರ್ಗಗಳ ಮುಖಂಡರ ಜೊತೆಗೂ ಚರ್ಚೆ ನಡೆಸಿದ್ದಾರೆ. ಈ ಹಿಂದೆ ಸಮೀಕ್ಷೆ ನಡೆಸಿದ್ದ ಕಾಂತರಾಜು ನೇತೃತ್ವದ ಆಯೋಗ ಹಾಗೂ ಇತ್ತೀಚೆಗೆ ವರದಿಯನ್ನು ಕ್ರೂಢೀಕರಿಸಿ ಸರ್ಕಾರಕ್ಕೆ ಅಧಿಕೃತವಾಗಿ ವರದಿ ಸಲ್ಲಿಸಿದ್ದ ಜಯಪ್ರಕಾಶ್‌ ಹೆಗ್ಡೆ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್‌‍.ದ್ವಾರಕಾನಾಥ್‌, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್‌‍.ಪೊನ್ನಣ್ಣ, ವಿಧಾನಪರಿಷತ್‌ನ ಮಾಜಿ ಸದಸ್ಯರಾದ ಎಚ್‌.ಎಂ.ರೇವಣ್ಣ, ವಿ.ಆರ್‌.ಸುದರ್ಶನ್‌ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಸಚಿವರು ಮತ್ತು ಶಾಸಕರು ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯವಾಗಿ ಎಷ್ಟೇ ಪ್ರಬಲ ವಿರೋಧಗಳು ಬಂದರೂ ಅದಕ್ಕೆ ಮಣೆ ಹಾಕಬೇಡಿ. ಮೊದಲು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಲಿ. ಒಂದು ವೇಳೆ ಅಲ್ಲಿ ಪ್ರಬಲ ವಿರೋಧ ವ್ಯಕ್ತವಾದರೆ ವಿಧಾನಮಂಡಲದಲ್ಲಿ ಮಂಡನೆ ಮಾಡಿ ಪಕ್ಷಾತೀತವಾಗಿ ಬೆಂಬಲ ಕೇಳುವಂತೆ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲಾಗಿದೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಈ ವರದಿಗೆ ಬಹಳಷ್ಟು ಮಂದಿ ವಿರೋಧ ವ್ಯಕ್ತಪಡಿಸುವಂತೆ ಕೆಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಜಕೀಯ ಚರ್ಚೆಗಳು ಮುಖಾಮುಖಿಯಾಗಬೇಕಾದರೆ ವರದಿ ವಿಧಾನಮಂಡಲದಲ್ಲಿ ಮಂಡನೆಯಾಗಬೇಕು ಎಂಬ ಅಭಿಪ್ರಾಯವನ್ನು ಸಚಿವರು, ಶಾಸಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೆಲವು ಸಮುದಾಯಗಳ ಜನಸಂಖ್ಯೆ ಏರಿಳಿತಗಳಾಗಿರುವ ಬಗ್ಗೆ ವದಂತಿಗಳಿವೆ. ವರದಿ ಬಹಿರಂಗಗೊಂಡು ಸಾರ್ವಜನಿಕವಾಗಿ ಚರ್ಚೆಯಾದರೆ ಮಾತ್ರ ವಾಸ್ತವಾಂಶ ಏನು ಎಂದು ತಿಳಿಯಲು ಸಾಧ್ಯ. ಹೀಗಾಗಿ ವರದಿಯನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಎಂದು ಸಲಹೆ ನೀಡಿರುವುದಲ್ಲದೆ, ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳ ಸಭೆ ನಡೆಸಿದಂತೆ ವರದಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಒಕ್ಕಲಿಗ, ಲಿಂಗಾಯತ ಸಮುದಾಯದ ಮುಖಂಡರ ಜೊತೆಗೂ ಚರ್ಚೆ ಮಾಡುವಂತೆ ಮನವಿ ಮಾಡುವುದಾಗಿ ತಿಳಿದುಬಂದಿದೆ.

ಈ ನಡುವೆ ಪರಿಶಿಷ್ಟ ಹಾಗೂ ಅಲ್ಪಸಂಖ್ಯಾತ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುವ ಕುರಿತೂ ಚರ್ಚೆಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಜಾತಿ ಜನಗಣತಿಯ ವರದಿ ಹಳೆಯದಾಗಿದ್ದು, ಪ್ರಸ್ತುತ ದತ್ತಾಂಶಗಳು ಸಾಕಷ್ಟು ವ್ಯತ್ಯಾಸಗಳಾಗಿವೆ. 9 ವರ್ಷಗಳ ಹಿಂದೆ ಸಂಗ್ರಹಿಸಲಾದ ಅಂಕಿ ಅಂಶಗಳನ್ನು ಪ್ರಸ್ತುತ ಕಾಲಮಾನದಲ್ಲಿ ಅಂಗೀಕರಿಸುವುದು ಸರಿಯಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ.
ಆಡಳಿತ ಪಕ್ಷದ ವತಿಯಿಂದ ಮಾಜಿ ಸಂಸದ ಡಿ.ಕೆ.ಸುರೇಶ್‌, ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಕೆಲವರು ತಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌‍ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರೂ ಕೂಡ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿರೋಧಪಕ್ಷಗಳಿಗಿಂತಲೂ ಕಾಂಗ್ರೆಸ್‌‍ನ ಒಳವಲಯದಲ್ಲೇ ತೀವ್ರ ವಿರೋಧಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕಗ್ಗಂಟು ಜಠಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಷಯಾಂತರಿಸಲು ಜಾತಿ ಜನಗಣತಿಯ ವರದಿಯನ್ನು ಮುನ್ನೆಲೆಗೆ ತರಲಾಗಿದೆ ಎಂಬ ಟೀಕೆಯನ್ನು ವಿರೋಧಪಕ್ಷಗಳು ಮಾಡುತ್ತಿವೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ದಿನ ಸುಮನಿದ್ದು ಮುಡಾ ವಿವಾದ ತೀವ್ರಗೊಂಡ ಸಮಯದಲ್ಲಿ ವರದಿ ಅಂಗೀಕಾರಕ್ಕೆ ಮುಂದಾಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ವರದಿಗೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News