ಬೆಂಗಳೂರು,ಅ.7- ಜಾತಿಗಣತಿ ವಿಚಾರದಲ್ಲಿ ಮರುಪರಿಶೀಲನೆ ಮಾಡಬೇಕೆಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಹೀಗಾಗಿ ಮತ್ತೊಮೆ ಮರುಸಮೀಕ್ಷೆ ನಡೆಸುವುದು ಸೂಕ್ತ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗಿರುವ ಸಮೀಕ್ಷೆ ಸರಿಯಿಲ್ಲ ಎಂದು ಕಾಂಗ್ರೆಸ್‌ನವರೇ ಹೇಳಿದ್ದಾರೆ. ಕಾಂಗ್ರೆಸ್‌ನ ಮುಖಂಡರಾದ ಶ್ಯಾಮನೂರು ಶಿವಶಂಕರಪ್ಪ, ಡಿ.ಕೆ.ಸುರೇಶ್ ಅವರು ಸಮೀಕ್ಷಾ ವರದಿ ಸರಿಯಿಲ್ಲ ಎಂದ ಮೇಲೆ ಏಕೆ ಮರುಪರಿಶೀಲನೆ ಮಾಡಬಾರದು ಎಂಬುದು ನನ್ನ ಭಾವನೆ ಎಂದರು.
ಜಾತಿಗಣತಿ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ರಾಷ್ಟ್ರೀಯ ಪಕ್ಷ ಹೇಳಿದೆ. ಎಲ್ಲಾ ಸಮಾಜಗಳಿಗೂ ಅಧಿಕಾರ ದೊರೆತಿದ್ದರೆ ಅದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಎಂದು ಸಮರ್ಥಿಸಿಕೊಂಡರು.
ಇಡೀ ರಾಷ್ಟ್ರದಲ್ಲಿ ಮುಸ್ಲಿಮರಿಗೆ ಶೇ.5 ರಷ್ಟು ಮೀಸಲಾತಿ ಕೊಟ್ಟರು. 20 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಕೊಟ್ಟಿದೆಯೇ? ಎಂದು ಪ್ರಶ್ನಿಸಿದರು. ಹಿಂದುಳಿದ ವರ್ಗದವರ ಮೀಸಲಾತಿ ಕೊಟ್ಟವರ್ಯಾರು?, ರಾಜ್ಯದಲ್ಲಿ ಮೀಸಲಾತಿ ಇಲ್ಲದ ಸಮಯದಲ್ಲೂ ಪರಿಶಿಷ್ಟರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನ ಕಲ್ಪಿಸಲಾಗಿತ್ತು ಎಂದು ಹೇಳಿದರು.