ಬೆಂಗಳೂರು, ಅ.8-ಲಾಭದ ಹಳಿಗೆ ಮರಳಿರುವ ಮೆಟ್ರೋ ಸಂಸ್ಥೆಯವರು ಇದೀಗ ಜಾಹೀರಾತು ಮೂಲಕ ಆದಾಯ ಕ್ರೋಢಿಕರಣಕ್ಕೆ ಮುಂದಾಗಿದೆ. ಆದಾಯವ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮೆಟ್ರೋ ರೈಲುಗಳ ಹೊರಭಾಗದಲ್ಲಿ ಜಾಹೀರಾತು ಪ್ರಸಾರಕ್ಕೆ ಬಿಎಂಆರ್ ಸಿಎಲ್ ಪ್ಲಾನ್ ರೂಪಿಸಿ ಮೆಟ್ರೋ ರೈಲುಗಳ ಮೇಲೆ ಜಾಹಿರಾತು ಪ್ರದರ್ಶಿಸಲು ಟೆಂಡರ್ ಕರೆದಿದೆ.
ಮೆಟ್ರೋದ ಹಸಿರು ಹಾಗೂ ನೇರಳೆ ಮಾರ್ಗದ ರೈಲುಗಳ ಹೊರಭಾಗದಲ್ಲಿ ಜಾಹೀರಾತಿಗಾಗಿ ಬಿಎಂ ಆರ್ಸಿಎಲ್ ಪ್ರತ್ಯೇಕ ಟೆಂಡರ್ ಕರೆದಿದೆ.ನಿಲ್ದಾಣ ಹಾಗೂ ರೈಲುಗಳ ಒಳಭಾಗದಲ್ಲಿ ಡಿಜಿಟಲ್ ಹಾಗೂ ಸ್ಥಿರ – ಫಲಕದ ಮಾದರಿಯಲ್ಲಿ ಜಾಹೀರಾತುಗಳಿಗೆ ಬಿಎಂಆರ್ ಸಿಎಲ್ ಟೆಂಡರ್ ಆಹ್ವಾನಿಸಿದೆ. ರೈಲಿನ ಹೊರಭಾಗಕ್ಕೂ ಜಾಹೀರಾತು ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.
ಮುಂಬೈ ಸೇರಿ ದೇಶದ ಇತರೆಡೆಯ ಮೆಟ್ರೋ ರೈಲುಗಳ ಮೇಲೆ ಜಾಹೀರಾತು ಅಳವಡಿಸಿಕೊಂಡಿರುವ ಮಾದರಿಯಲ್ಲೇ ಇನ್ನು ಮುಂದೆ ನಮ್ಮ ಮೆಟ್ರೋ ರೈಲುಗಳ ಮೇಲೂ ಜಾಹೀರಾತು ಪ್ರದರ್ಶನಗೊಳ್ಳುವುದು ಗ್ಯಾರಂಟಿಯಾಗಿದೆ.
ನಮ್ಮ ಮೆಟ್ರೋದಲ್ಲಿ 57 ರೈಲು ಸೆಟ್ಗಳಿದ್ದು, ಇವುಗಳಲ್ಲಿ ಇನ್ನುಮುಂದೆ ನಮ್ಮ ಮೆಟ್ರೋ ಲಾಂಛನ, ಹೆಸರಿನ ಜೊತೆಗೆ ವಿವಿಧ ಕಂಪನಿಗಳ ಜಾಹೀರಾತುಗಳು ಬಿತ್ತರಗೊಳ್ಳಲಿವೆ. ಮೆಟ್ರೋ ರೈಲಿನ ಹೊರಭಾಗದಲ್ಲೂ ಜಾಹೀರಾತು ಕಾಣಿಸಿಕೊಳ್ಳಲಿವೆ.
ಕಳೆದ 2022ರಲ್ಲಿ ಸ್ವಾತಂತ್ರ್ಯದ 75 ವರ್ಷಾಚರಣೆ ಪ್ರಯುಕ್ತ ಒಂದು ರೈಲಿಗೆ ಜಾಹೀರಾತು ಅಳವಡಿಸಿದ್ದ ನಮ್ಮ ಮೆಟ್ರೋ ಪಿಲ್ಲರ್, ವಯಡಕ್ಟ್ ಜಾಹೀರಾತು ಗಳಿಂದ ನಮ್ಮ ಮೆಟ್ರೋಗೆ ವಾರ್ಷಿಕ ಸರಾಸರಿ ?10 ಕೋಟಿ ಆದಾಯ ಗಳಿಸಿತ್ತು.
ಉಚ್ಚ ನ್ಯಾಯಾಲಯದ ಆದೇಶದಂತೆ ಬಿಬಿಎಂಪಿ ಹೊರಭಾಗದಲ್ಲಿ ಜಾಹೀರಾತು ನಿಷೇಧಿಸಿದ ಬಳಿಕ ಈ ಆದಾಯಕ್ಕೆ ಕತ್ತರಿ ಬಿದ್ದಿತ್ತು. ಇದೀಗ ನಿಲ್ದಾಣದ ಒಳಗೆ ಹಾಗೂ ರೈಲಿನ ಒಳಗೆ ಜಾಹೀರಾತು ಅಳವಡಿಸುವ ಮೂಲಕ ಆದಾಯ ಗಳಿಸಲು ಬಿಎಂಆರ್ಸಿಎಲ್ ಮುಂದಾಗಿದೆ.
ಬಯೋಕಾನ್, ಇನೋಸಿಸ್ ಸಂಸ್ಥೆಗಳ ಹೆಸರನ್ನು 30ವರ್ಷಗಳವರೆ ಮೆಟ್ರೋ ನಿಲ್ದಾಣಗಳಿಗೆ ಇಡುವುದಕ್ಕಾಗಿ ಬರೋಬ್ಬರಿ ?100 ಕೋಟಿ ವರೆಗೆ ಒಪ್ಪಂದವಾಗಿದೆ ಎಂದು ತಿಳಿದುಬಂದಿದೆ. ಮಾತ್ರವಲ್ಲ, ಮೆಟ್ರೋ ರೈಲಿನಲ್ಲಿ ಸಿನಿಮಾ, ಕಿರುಚಿತ್ರಗಳ ಚಿತ್ರೀಕರಣಕ್ಕಾಗಿ ಅನುಮತಿ ನೀಡಿ ಹಣ ಗಳಿಕೆ ಮಾಡುವುದರತ್ತಲೂ ಗಮನ ಹರಿಸಲಾಗಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಎಟಿಎಂ, ಮಳಿಗೆಗಳು, ಇವಿ ಚಾರ್ಜಿಂಗ್ ಕೇಂದ್ರ, ನೆಟ್ವರ್ಕ್ ಟವರ್ ಬಾಡಿಗೆ ಮೂಲಕ ಆದಾಯಗಳಿಸಲಾಗುತ್ತಿದೆ.