ಚಂಡಿಗಢ, ಅ.9– ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಮತ್ತೊಂದು ಅವಧಿಗೆ ಸಿಎಂ ಆಗಿ ಮುಂದುವರೆಯುವುದು ಖಚಿತಪಟ್ಟಿದ್ದು ಅ.12 ರಂದು ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಮೋಹನ್ ಲಾಲ್ ಬಧೋಲಿ ಮತ್ತು ನಾಯಬ್ ಸೈನಿ ಇಂದು ದೆಹಲಿಗೆ ತೆರಳಿದ್ದು ವರಿಷ್ಠರೊಂದಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಗ್ಗೆ ಮಾತುಕತೆ ನಡೆಸಿ ವಾಪಸ್ಸಾಗಲಿದ್ದಾರೆ ಎಂದು ತಿಳಿದುಬಂದಿದೆ.
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಇದೀಗ ಎಲ್ಲರ ಕಣ್ಣು ಮುಂದಿನ ಸರ್ಕಾರ ರಚನೆಯತ್ತ ನೆಟ್ಟಿದೆ. ಮುಖ್ಯಮಂತ್ರಿ ನಯಾಬ್ ಸೈನಿ ಜೊತೆಗೆ ಒಬ್ಬ ಅಥವಾ ಇಬ್ಬರು ಉಪಮುಖ್ಯಮಂತ್ರಿಗಳೂ ಇರಬಹುದು ಎಂದು ಹೇಳಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು, ಬಿಜೆಪಿಯ ಕೇಂದ್ರ ನಾಯಕತ್ವವು ಶಾಸಕರೊಂದಿಗೆ ಸಭೆ ನಡೆಸಲು ಹರಿಯಾಣಕ್ಕೆ ವೀಕ್ಷಕರನ್ನು ಕಳುಹಿಸುತ್ತದೆ, ಇದರಿಂದಾಗಿ ಪಕ್ಷವು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹುದ್ದೆಗೆ ಸರಿಯಾದ ಅಭ್ಯರ್ಥಿಯನ್ನು ಅಧಿಕೃತವಾಗಿ ಆಯ್ಕೆ ಮಾಡುತ್ತದೆ.