ಬೆಂಗಳೂರು, ಅ.9- ಇತ್ತೀಚೆಗೆ ಆನೇಕಲ್‌ನ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳನ್ನು ಬಂಧಿಸಿದ ಬೆನ್ನಲ್ಲೇ ಇದೀಗ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ 12 ಮಂದಿ ಪಾಕಿಸ್ತಾನೀಯರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಪಾಕ್ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿಸಲಾಗಿತ್ತು. ಈ ತಂಡಗಳು ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಹೈದ್ರಾಬಾದ್, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನೀಯರನ್ನು ಪತ್ತೆ ಹಚ್ಚಿ ಬಂಧಿಸಿವೆ. ದೆಹಲಿಯಲ್ಲಿ 5 ಮಂದಿ,ಹೈದ್ರಾಬಾದ್ – ಇಬ್ಬರು, ಉತ್ತರ ಪ್ರದೇಶ – ಇಬ್ಬರು, ರಾಜಸ್ಥಾನದಲ್ಲಿ ಮೂವರು ಪಾಕಿಸ್ತಾನೀಯರನ್ನು ಬಂಧಿಸಿ ನಗರಕ್ಕೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ತನಿಖಾ ತಂಡಗಳು ಕಲೆ ಹಾಕುತ್ತಿವೆ
ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಹಿಂದೂ ಹೆಸರಿಟ್ಟುಕೊಂಡು ನೆಲೆಸಿದ್ದ ಪಾಕ್ ಪ್ರಜೆಗಳ ಬಂಧನದ ನಂತರ ವಿಚಾರಣೆ ಸಂದರ್ಭದಲ್ಲಿ ಅವರು ನೀಡಿದ ಮಾಹಿತಿಗಳನ್ನು ಆಧರಿಸಿ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ದೇಶಾದ್ಯಂತ ಸಕ್ರಿಯರಾಗಿದ್ದ ಪಾಕಿಸ್ತಾನಿಯರನ್ನು ಬಂಧಿಸಿದ್ದಾರೆ. 12 ಮಂದಿ ಪಾಕಿಸ್ತಾನಿಯರಲ್ಲದೆ ಇನ್ನಷ್ಟು ಪಾಕ್ ಪ್ರಜೆಗಳ ಜಾಲವೇ ದೇಶದಲ್ಲಿ ವಿಸ್ತರಿಸಿರುವ ಆತಂಕ ಎದುರಾಗಿದ್ದು, ಬಂಧಿತರ ವಿಚಾರಣೆಯಿಂದ ಒಂದೊಂದಾಗಿ ಇನ್ನಷ್ಟು ಮಾಹಿತಿ ಹೊರಬರಲಿದೆ.
ಪಾಕ್ ಪ್ರಜೆಗಳ ಸಂಖ್ಯೆ 19 ಕ್ಕೆ ಏರಿಕೆ :
ಇದೀಗ ಬಂಧಿತರಾಗಿರುವ 12 ಮಂದಿ ಸೇರಿದಂತೆ ಬಂಧಿತರಾಗಿರುವ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ. ಇವರೆಲ್ಲರೂ ದೇಶದ ನಾನಾ ಭಾಗಗಳಲ್ಲಿ ಅಕ್ರಮವಾಗಿ ನೆಲೆಸಿದ್ದುದು ಇದೀಗ ಬಯಲಾಗಿದೆ. ಇವರು ಯಾವ ಉದ್ದೇಶದಿಂದ ಭಾರತಕ್ಕೆ ಬಂದು ನೆಲೆಸಿದ್ದಾರೆ ಎಂಬುದು ಇನ್ನೂ ತಿಳಿದುಬರಬೇಕಿದೆ.
ಒಂದು ಮೂಲದ ಪ್ರಕಾರ ಧರ್ಮಪ್ರಚಾರಕ್ಕಾಗಿ ದೇಶದ ವಿವಿಧೆಡೆಗಳಲ್ಲಿ ಪಾಕ್ ಪ್ರಜೆಗಳು ಬೀಡುಬಿಟ್ಟಿರುವುದು ಗೊತ್ತಾಗಿದೆ. ಕಿಂಗ್‌ಪಿನ್ ನನ್ನು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪಾಕಿಸ್ತಾನಿಯರು ಭಾರತದಲ್ಲಿ ನೆಲೆಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳನ್ನು ಈತನೇ ಮಾಡಿಸಿಕೊಟ್ಟಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಹಿಂದೂ ಹೆಸರಿಟ್ಟುಕೊಂಡು ಪಾಕ್ ಪ್ರಜೆಗಳು ಅಲ್ಲಲ್ಲಿ ನೆಲೆಸಿ ಧರ್ಮಪ್ರಚಾರದಲ್ಲಿ ತೊಡಗಿದ್ದುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಒಟ್ಟಾರೆ 20 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂದುವರೆದ ತನಿಖೆ :
ಪೀಣ್ಯದಲ್ಲಿ ವಾಸವಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ ನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಬಂಧಿತ ಪಾಕ್ ದಂಪತಿಯ ಸಂಪೂರ್ಣ ಮಾಹಿತಿ ಕಲೆ ಹಾಕಿದಾಗ ಕಳೆದ ಮೂರು ವರ್ಷಗಳಿಂದ ಪೀಣ್ಯದ ಅಂದ್ರಳ್ಳಿ ಮುಖ್ಯರಸ್ತೆಯ ಮನೆಯಲ್ಲಿ ನೆಲೆಸಿದ್ದರು ಎಂಬುದು ಗೊತ್ತಾಗಿದೆ. ಪಾಕ್ ಮೂಲದ ಸಯ್ಯದ್ ಪತ್ನಿ ಹಾಗೂ ಮಗಳೊಂದಿಗೆ ಇಲ್ಲಿ ನೆಲೆಸಿದ್ದು, ಹಿಂದೂ ಹೆಸರಿಟ್ಟುಕೊಂಡು ಹೊರ ಜಗತ್ತಿಗೆ ಸಂಪರ್ಕವಿಲ್ಲದೆ, ಮನೆಯಿಂದ ಹೊರಬಾರದೆ ಗೌಪ್ಯವಾಗಿ ನೆಲೆಸಿದ್ದ ಮಾಹಿತಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಯೂ ಟ್ಯೂಬ್‌ನಲ್ಲಿ ಧರ್ಮ ಪ್ರಚಾರ :
ಈ ದಂಪತಿ 2014 ರಲ್ಲೇ ಭಾರತಕ್ಕೆ ಬಂದಿದ್ದಾರೆ. 2019 ರಲ್ಲಿ ಬೆಂಗಳೂರಿಗೆ ಬಂದಿದ್ದ ಈ ಕುಟುಂಬ ಧರ್ಮಪ್ರಚಾರಕರಾಗಿ ಕೆಲಸ ಮಾಡುತ್ತಿದ್ದರು. ನಕಲಿ ಹೆಸರಿನಲ್ಲಿ ಆಧಾರ್ ಮಾಡಿಸಿಕೊಂಡು ನೆಲೆಸಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾಮಾಜಿಕ ಜಾಲತಾಣವಾದ ಯೂ ಟ್ಯೂಬ್‌ನಲ್ಲೂ ಧರ್ಮಪ್ರಚಾರದಲ್ಲಿ ತೊಡಗಿದ್ದುದು ಗೊತ್ತಾಗಿದೆ.