Friday, October 18, 2024
Homeರಾಜಕೀಯ | Politicsಕಾಂಗ್ರೆಸ್‌ನ ಜಾತಿಗಣತಿ ಅಸ್ತ್ರದ ವಿರುದ್ಧ ಬಿಜೆಪಿಯಿಂದ ಒಳ ಮೀಸಲಾತಿ "ಬ್ರಹ್ಮಾಸ್ತ್ರ" ಪ್ರಯೋಗ

ಕಾಂಗ್ರೆಸ್‌ನ ಜಾತಿಗಣತಿ ಅಸ್ತ್ರದ ವಿರುದ್ಧ ಬಿಜೆಪಿಯಿಂದ ಒಳ ಮೀಸಲಾತಿ “ಬ್ರಹ್ಮಾಸ್ತ್ರ” ಪ್ರಯೋಗ

Internal Reservation by BJP Caste Weapon

ಬೆಂಗಳೂರು,ಅ.9– ಕಾಂಗ್ರೆಸ್‌ನ ಬಹು ಉದ್ದೇಶಿತ ಜಾತಿ ಜನಗಣತಿ ವರದಿ ಅಸ್ತ್ರಕ್ಕೆ ಪ್ರತ್ಯಸ್ತ್ರ ಬಳಸಲು ಮುಂದಾಗಿರುವ ಪ್ರತಿಪಕ್ಷ ಬಿಜೆಪಿ ಒಳಮೀಸಲಾತಿ ಅನುಷ್ಠಾನ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲು ತೀರ್ಮಾನಿಸಿದೆ. ಶೀಘ್ರದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒಳಮೀಸಲಾತಿ ಅನುಷ್ಠಾನ ಮಾಡಲು ಮನವಿ ಪತ್ರ ನೀಡಲಿದೆ ಅಕ್ಟೋಬರ್ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ನೇತೃತ್ವದ ಸಮಿತಿ ನೀಡಿದ್ದ ವರದಿಯ ಕುರಿತು ಸಾಧಕಬಾಧಕಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಇದಕ್ಕೆ ಪ್ರತಿತಂತ್ರ ಹೆಣೆದಿರುವ ಬಿಜೆಪಿ ಇತ್ತೀಚೆಗೆ ಸುಪ್ರೀಂಕೋರ್ಟ್ ಸಮಾಜದಲ್ಲಿರುವ ಅತಿ ಚಿಕ್ಕ ಸಮುದಾಯಗಳಿಗೆ ಒಳಮೀಸಲಾತಿ ನೀಡುವ ಅಗತ್ಯವಿದ್ದು, ಆಯಾ ರಾಜ್ಯ ಸರ್ಕಾರಗಳೇ ನಿರ್ಧಾರ ತೆಗೆದುಕೊಳ್ಳಬೇಕೆಂಬ ತೀರ್ಪು ನೀಡಿತ್ತು. ಇದೀಗ ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಒಳಮೀಸಲಾತಿ ವರದಿಯನ್ನು ಸಂಪುಟದಲ್ಲಿ ಮಂಡಿಸಿ ಅನುಷ್ಠಾನ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಿದೆ ಎಂದು ಗೊತ್ತಾಗಿದೆ. ಈ ಸಂಭಂದ ಮಂಗಳವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ವ್ಯಾಪಕವಾಗಿ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬೇಡಿಕೆ ಇಡಬೇಕೆಂಬ ಒಂದೇ ಸಾಲಿನ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಬಿಜೆಪಿಗೆ ಮೀಸಲಾತಿ ವಿಚಾರ ಸಮಸ್ಯೆಯಾಗಿ ಕಾಡತೊಡಗಿತ್ತು. ಪಂಚಮಸಾಲಿ ಸಮಾಜ, ಒಕ್ಕಲಿಗರ ಸಹಿತ ವಿವಿಧ ಸಮಾಜಗಳು ಮೀಸಲಾತಿ ಪ್ರವರ್ಗದಲ್ಲಿ ಸೇರ್ಪಡೆಗಾಗಿ ಹೋರಾಟದ ಹಾದಿ ಹಿಡಿದಿದ್ದರೆ, ಪರಿಶಿಷ್ಟ ಪಂಗಡದವರು ಇನ್ನಿತರರು ಮೀಸಲು ಹೆಚ್ಚಳ, ದಲಿತರು ಒಳಮೀಸಲಾತಿಗೆ ಒತ್ತಡದ ಹೋರಾಟ ನಡೆಸಿದ್ದರು. ಬಿಜೆಪಿಗೆ ಇದು ಮುಳುವಾಗಲಿದೆ ಎಂದೇ ರಾಜಕೀಯವಾಗಿ ವ್ಯಾಖ್ಯಾನಿಸಲಾಗಿತ್ತು ಆದರೆ ಪಕ್ಷ ತನ್ನದೇ ಧೈರ್ಯ ತೋರುವ ಮೂಲಕ ಮೀಸಲಾತಿ ಹೆಚ್ಚಳದ ಜತೆಗೆ ಒಳಮೀಸಲು ನೀಡಿಕೆ ಘೋಷಣೆ ಮಾಡಿ ರಾಜಕೀಯ ವಿರೋಧಿಗಳನ್ನು ಚಿಂತೆಗೀಡು ಮಾಡುವಂತೆ ಮಾಡಿತ್ತು. ಮೀಸಲು ವಿಚಾರದಲ್ಲಿ ಸಂವಿಧಾನಿಕ ಅಂಶಗಳು ತೊಡಕಾಗಲಿವೆ. ಕೇಂದ್ರದ ಒಪ್ಪಿಗೆ ಸುಲಭವಲ್ಲ ಎಂಬ ಅನಿಸಿಕೆಗಳ ನಡುವೆಯೂ ಬಿಜೆಪಿ ಮಹತ್ವದ ಹೆಜ್ಜೆಯನ್ನಂತ ಇರಿಸಿದೆ. ಈ ಕ್ರಮಕ್ಕೆ ಬಂಜಾರ ಸಹಿತ ಕೆಲವು ಸಮಾಜಗಳಿಂದ ವಿರೋಧವೂ ವ್ಯಕ್ತವಾಗಿತ್ತು.
ಆಂಧ್ರಪ್ರದೇಶ, ತೆಲಂಗಾಣದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ್ದ ಒಳಮೀಸಲಾತಿ ಬೇಡಿಕೆಯ ಮಾದಿಗ ದಂಡೋರ ಹೋರಾಟ ಒಂದು ರೀತಿಯಲ್ಲಿ ದೇಶದ ಗಮನವನ್ನೇ ಸೆಳೆದಿತ್ತು. ನೆರೆಯ ಅವಿಭಜಿತ ಆಂಧ್ರದಲ್ಲಿ ಹೊತ್ತಿಕೊಂಡಿದ್ದ ಒಳಮೀಸಲಾತಿ ಬೇಡಿಕೆ ಕಿಚ್ಚು ಕರ್ನಾಟಕಕ್ಕೂ ಹಬ್ಬಿತ್ತಲ್ಲದೆ, ರಾಜ್ಯದಲ್ಲೂ ಹೋರಾಟ ತನ್ನದೇ ರೂಪ ಪಡೆದಿತ್ತು.

ಕಳೆದ ಮೊರ್ನಾಲ್ಕು ದಶಕಗಳಿಂದ ಒಳಮೀಸಲು ಬೇಡಿಕೆಯ ಪರ-ವಿರೋಧ ಅನಿಸಿಕೆ, ಚರ್ಚೆ, ಹೋರಾಟಗಳು ನಡೆದಿತ್ತು. ಒಳಮೀಸಲು ಬೇಡಿಕೆ ತೀವ್ರ ಒತ್ತಡ ಹಿನ್ನೆಲೆಯಲ್ಲಿ ಈ ಹಿಂದೆ ರಾಜ್ಯ ಸರಕಾರ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿ ವರದಿ ಪಡೆದಿತ್ತು. ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳದ ವರದಿಯನ್ನೂ ನೀಡಿತ್ತು. ಮೀಸಲು ಹೆಚ್ಚಳ ಹಾಗೂ ಒಳಮೀಸಲಾತಿ ಜಾರಿ ಕುರಿತು ಬೇಡಿಕೆ-ಹೋರಾಟ ನಡೆದರೂ ರಾಜ್ಯದಲ್ಲಿ ಆಡಳಿತ ನಡೆಸಿದ ಸರಕಾರಗಳು ಪರಿಶೀಲನೆ ಹಾಗೂ ಜಾರಿ ಕ್ರಮದ ಭರವಸೆ ನೀಡುತ್ತಾ ಯಾವುದೇ ಕ್ರಮಕ್ಕೆ ಮುಂದಾಗದೆ ಯಥಾಸ್ಥಿತಿ ಕಾಯ್ದುಕೊಂಡಿದ್ದವು. ಬಿಜೆಪಿ ಸರಕಾರ ಮೀಸಲು ಹೆಚ್ಚಳ, ಒಳಮೀಸಲು ಜಾರಿ ಕ್ರಮದೊಂದಿಗೆ ಮೀಸಲಾತಿ ವಿಚಾರ ಮತ್ತೂಂದು ಮಗ್ಗಲು ತೆಗೆದುಕೊಂಡಂತಾಗಿದೆ

ಜೇನು -ಆಸಲು ಕೊಯ್ಲು : ಬಿಜೆಪಿ ಎಂದರೆ ಮೇಲ್ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಪಕ್ಷ, ದಲಿತರ ಬಗ್ಗೆ ಹೆಚ್ಚು ಕಾಳಜಿ ತೋರದು ಎಂಬ ಅನಿಸಿಕೆ ಹಲವು ಕಡೆಗಳಲ್ಲಿ ಸುಳಿದಾಡುತ್ತಿತ್ತು. ರಾಜ್ಯದಲ್ಲಿ ಹಲವು ದಶಕಗಳಿಂದ ಬಿಜೆಪಿಗೂ ದಲಿತರಿಗೂ ಒಂದಿಷ್ಟು ಕಂದಕವಿದೆ ಎಂಬ ಸ್ಥಿತಿ ಇತ್ತು. ದಲಿತರು ಕಾಂಗ್ರೆಸ್‌ನ್ನು ಹೆಚ್ಚಿನ ರೀತಿಯಲ್ಲಿ ಬೆಂಬಲಿಸುತ್ತಾರೆಂಬ ಅಭಿಪ್ರಾಯವೂ ಬಿಜೆಪಿ ವಲಯದಲ್ಲಿತ್ತು. ಆದರೆ ಸ್ಥಿತಿ ಬದಲಾಗಿದ್ದು, ದಲಿತರು-ಬಿಜೆಪಿ ನಡುವಿನ ಕಂದಕ ಕುಂದಿದ್ದು, ಪಕ್ಷ ದಲಿತರಿಗೆ ಹಲವು ಅವಕಾಶಗಳನ್ನು ನೀಡಿದೆ. ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿಯಷ್ಟು ದಲಿತ ಸಮುದಾಯದವರಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್‌ನಿಂದ ದಲಿತ ಮತಬ್ಯಾಂಕ್ ಕಿತ್ತುಕೊಳ್ಳಲು ಬಿಜೆಪಿ ಹಲವು ವರ್ಷಗಳಿಂದ ಯತ್ನಿಸುತ್ತಿದ್ದರೂ ನಿರೀಕ್ಷಿತ -ಫಲ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲವಾಗಿತ್ತು. ಪರಿಶಿಷ್ಟ ಜಾತಿಗಳಿಗಿದ್ದ ಶೇ.15 ಮೀಸಲಾತಿ ಪ್ರಮಾಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಶೇ.17ಕ್ಕೆ ಹೆಚ್ಚಿಸಿತ್ತು. ಅದೇ ರೀತಿ ಪರಿಶಿಷ್ಟ ಪಂಗಡಕ್ಕಿದ್ದ ಶೇ.3 ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದೆ. ಇದು ಪರಿಶಿಷ್ಟ ಜಾತಿ-ಪಂಗಡಗಳ ಮನಕ್ಕೆ ತಲುಪುವ ನಿಟ್ಟಿನಲ್ಲಿ ಬಿಜೆಪಿಯ ಮಹತ್ವದ ಹೆಜ್ಜೆ ಎಂದೇ ಭಾವಿಸಲಾಗಿತ್ತು.

RELATED ARTICLES

Latest News