ಮುಂಬೈ, ಅ. 10 (ಪಿಟಿಐ) – ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಗುರುವಾರ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಟಾಟಾ ಗ್ರೂಪ್ ಅನ್ನು ಜಾಗತಿಕವಾಗಿ ಹೆಸರಾಂತ ಸಂಘಟಿತ ಸಂಸ್ಥೆಯಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾದ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು.
ಅವರ ಪಾರ್ಥಿವ ಶರೀರವನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಇಂದು ಬೆಳಗಿನ ಜಾವ 2 ಗಂಟೆಯ ನಂತರ ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಆಂಬುಲೆನ್‌್ಸನಲ್ಲಿ ಹೊರತರಲಾಯಿತು ಮತ್ತು ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು.
ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅವರ ಉಪ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಮತ್ತು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಟಾಟಾ ಅವರ ಸಾವಿನ ಸುದ್ದಿ ಕೇಳಿ ಆಸ್ಪತ್ರೆಗೆ ಧಾವಿಸಿದವರಲ್ಲಿ ಸೇರಿದ್ದರು. ಶೋಕಾಚರಣೆಯ ಸಂಕೇತವಾಗಿ ಇಂದು ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದು ಎಂದು ಸಿಎಂ ಶಿಂಧೆ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಗುರುವಾರ ಯಾವುದೇ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಟಾಟಾ ಅವರ ಪಾರ್ಥೀವ ಶರೀರವನ್ನು ದಕ್ಷಿಣ ಮುಂಬೈನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ (ಎನ್‌ಸಿಪಿಎ) ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ರವರೆಗೆ ಜನರು ಗೌರವ ಸಲ್ಲಿಸಲು ಇಡಲಾಗಿದೆ.
ದಕ್ಷಿಣ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಭಿನವ್ ದೇಶಮುಖ್ ಮಾತನಾಡಿ, ಸ್ಥಳದಲ್ಲಿ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವಿಲ್ಲ ಮತ್ತು ಜನರು ತಮ ವಾಹನಗಳನ್ನು ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ಮಾಡಿಕೊಳ್ಳಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.