ಮೈಸೂರು,ಅ.10- ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನ ಹಾಗೂ ದೇವರಾಜು ಅವರನ್ನು ಇಂದು ವಿಚಾರಣೆಗೆ ಒಳಪಡಿಸಿದ್ದಾರೆ.
ರಾಜ್ಯಾದ್ಯಂತ ಸಂಚಲನ ಉಂಟು ಮಾಡಿರುವ ಮುಡಾ ಪ್ರಕರಣದ ವಿಚಾರಣೆ ತೀವ್ರಗೊಂಡಿದ್ದು, ಲೋಕಾಯುಕ್ತ ಅಧಿಕಾರಿಗಳು ಮುಡಾ ಪ್ರಕರಣದ ಎ 3 ಆರೋಪಿ ಮಲ್ಲಿಕಾರ್ಜುನ ಹಾಗೂ ಎ 4 ಆರೋಪಿ ದೇವರಾಜು ಅವರಿಗೆ ನೋಟಿಸ್ ನೀಡಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಇಬ್ಬರೂ ಹಾಜರಾಗಿದ್ದಾರೆ. ಇಬ್ಬರನ್ನೂ ಪ್ರತ್ಯೇಕವಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದರು.
ದೇವರಾಜು ಅವರನ್ನು ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಿಮಗೆ ಜಮೀನು ಹೇಗೆ ಬಂತು?, ನಿಮಗೆ ಸಹೋದರರು ಇದ್ದಾರೆಯೇ?, ಈ ಆಸ್ತಿಯನ್ನು ಎಷ್ಟು ಹಣಕ್ಕೆ ಮಾರಿದ್ದೀರಿ?, ಯಾರಿಗೆ ಮಾರಾಟ ಮಾಡಿದ್ದೀರಿ? ಎಂಬಿತ್ಯಾದಿ ವಿವರಗಳನ್ನು ಪಡೆದಿದ್ದಾರೆ.
ಮಲ್ಲಿಕಾರ್ಜುನ ಅವರನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಯಾವಾಗ, ಯಾರಿಂದ ಜಮೀನನ್ನು ಖರೀದಿಸಿದ್ದು?, ಎಷ್ಟು ಹಣ ನೀಡಿದಿರಿ? ಮತ್ತು ನೀವು ನಿಮ ಸಹೋದರಿಗೆ ಯಾವಾಗ ಅದನ್ನು ಬಳುವಳಿಯಾಗಿ ನೀಡಿದ್ದು? ಎಂಬ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಈಗಾಗಲೇ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದೂರುದಾರ ಸ್ನೇಹಮಯಿ ಕೃಷ್ಣ ಅವರ ವಿಚಾರಣೆಗೊಳಪಡಿಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಮೈಸೂರಿನ ಕೆಸರೇ ಗ್ರಾಮಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ನಗರದ ವಿಜಯನಗರದಲ್ಲಿ ನೀಡಲಾಗಿದ್ದ 14 ಸೈಟ್ ಇರುವ ಸ್ಥಳಕ್ಕೂ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಮುಡಾ ಪ್ರಕರಣದ ತನಿಖೆಯನ್ನು ನಡೆಸಿ ಡಿಸೆಂಬರ್ ಒಳಗೆ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎ1 ಆರೋಪಿ ಮತ್ತು ಅವರ ಪತ್ನಿ ಪಾರ್ವತಿ ಎ 2 ಆರೋಪಿ ಆಗಿದ್ದಾರೆ. ಇವರಿಬ್ಬರಿಗೂ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿ ಯಾವ ರೀತಿ ವಿಚಾರಣೆ ನಡೆಸಲಿದ್ದಾರೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.