ಬೆಂಗಳೂರು,ಅ.10- ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ್ಕುಲಕರ್ಣಿ ವಿರುದ್ಧ ಹಾವೇರಿ ಮೂಲದ ಮಹಿಳೆ ಸಂಜಯನಗರ ಪೊಲೀಸ್ ಠಾಣೆಗೆ ನೀಡಿರುವ ದೂರು ಹಾಗೂ ಶಾಸಕರು ನೀಡಿರುವ ಪ್ರತಿದೂರುಗಳ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ.
ಶಾಸಕ ವಿನಯ್ಕುಲಕರ್ಣಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ ಮಹಿಳೆ ದೂರು ನೀಡಿದ್ದರೆ, ಇದಕ್ಕೆ ಪ್ರತಿಯಾಗಿ ದೂರುದಾರೆ ಮಹಿಳೆ ಹಾಗೂ ಖಾಸಗಿ ಸುದ್ದಿವಾಹಿನಿಯೊಂದರ ಮುಖ್ಯಸ್ತರ ವಿರುದ್ಧ 2 ಕೋಟಿ ರೂ. ಬ್ಲ್ಯಾಕ್ಮೇಲ್ ಮಾಡಿದ್ದಾರೆಂದು ವಿನಯ್ಕುಲಕರ್ಣಿ ಅವರು ದೂರು ನೀಡಿದ್ದಾರೆ.ಈ ಎರಡೂ ದೂರುಗಳ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಇದೀಗ ಸಿಐಡಿ ಪೊಲೀಸರು ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ದೂರಿನ ಸಾರಾಂಶ :
ಹಾವೇರಿಯಲ್ಲಿ ರೈತಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ವೇಳೆ ವಿನಯ್ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಸಭ್ಯತೆಯಿಂದ ಮಾತನಾಡುತ್ತಿದ್ದರು. ನಂತರದ ದಿನಗಳಲ್ಲಿ ಅಸಭ್ಯವಾಗಿ, ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಿದ್ದರು.
2022 ರಲ್ಲಿ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದಾಗ ಹೆಬ್ಬಾಳದ ತಮ ಮನೆಗೆ ಕರೆಸಿಕೊಂಡಿದ್ದಲ್ಲದೆ, ದೇವನಹಳ್ಳಿ ಸಮೀಪ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ನಡೆಸಿದರೆಂದು ಮಹಿಳೆ ದೂರು ನೀಡಿದ್ದಾರೆ.
2 ಕೋಟಿ ಬ್ಲ್ಯಾಕ್ಮೇಲ್ – ಪ್ರತಿದೂರು :
ವಿನಾಕಾರಣ ದೂರುದಾರೆ ಮಹಿಳೆ ಹಾಗೂ ಸುದ್ದಿವಾಹಿನಿಯೊಂದರ ಮುಖ್ಯಸ್ಥರೊಬ್ಬರು ನನಗೆ ಕರೆ ಮಾಡಿ, ತಮಗೆ ಸೇರಿದ ಅಶ್ಲೀಲ ವಿಡಿಯೋಗಳಿಎ ಎಂದು ಹೆದರಿಸಿ 2 ಕೋಟಿ ರೂ.ಗೆ ಬ್ಲ್ಯಾಕ್ ಮಾಡಿದ್ದಾರೆಂದು ಶಾಸಕ ವಿನಯ್ಕುಲಕರ್ಣಿ ಅವರು ಪ್ರತಿದೂರು ನೀಡಿದ್ದಾರೆ.
ಈ ಎರಡೂ ದೂರುಗಳನ್ನು ಸ್ವೀಕರಿಸಿರುವ ಸಂಜಯನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದರು. ಈ ನಡುವೆ ಸರ್ಕಾರ ಈ ಎರಡೂ ಪ್ರಕರಣಗಳ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಿದ್ದು, ಸಿಐಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.