ಬೆಂಗಳೂರು. ಜ.15- ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಸ್ವಾಮೀಜಿ (49) ಅವರು ಇಂದು ಬೆಳಗಿನಜಾವ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ ಸ್ವಾಮೀಜಿ ಅವರಿಗೆ ರಕ್ತದೊತ್ತಡ ಕಡಿಮೆ(ಬಿಪಿ ಲೋ) ಆಗಿದ್ದು, ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಎದೆ ನೋವು ಉಂಟಾಗಿ ಬೆಳಗಿನಜಾವ 3-40 ಗಂಟೆಗೆ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.
ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಹೃದಯಾಘಾತದಿಂದ ಸ್ವಾಮೀಜಿ ಅವರು ಬ್ರಹಲೀನವಾಗಿದ್ದಾರೆ. ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯ ಮಹದೇವಯ್ಯ ಮತ್ತು ಜಯಮ ದಂಪತಿಯ 2ನೇ ಪುತ್ರರಾಗಿ ಜನಿಸಿದ್ದ ಶ್ರೀಗಳ ಮೊದಲ ಹೆಸರು ಮೋಹನ್ ಪ್ರದಾನ.
ಆಧ್ಯಾತಿಕದ ಕಡೆ ಹೆಚ್ಚಿನ ಒಲುಮೆಯುಳ್ಳವರಾಗಿ ಸದಾ ಕ್ರೀಯಾಶೀಲ ಮನೋಭಾವ ಹೊಂದಿದ್ದ ಶ್ರೀಗಳು 18ನೇ ವಯಸ್ಸಿಗೆ ಮನೆ ಬಿಟ್ಟು ಸಂಚಾರ ಆರಂಭಿಸಿದ್ದರು. ಮೊದಲು ಜೈನ, ಕ್ರೈಸ್ತ, ಬ್ರಹಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದರು. ಚಿತ್ರದುರ್ಗದ ಶ್ರೀಮುರುಘಾ ಮಠದಲ್ಲಿ ಅಧ್ಯಯನ ಮಾಡಿ ಸೇವೆ ಸಲ್ಲಿಸಿದ್ದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಚಳ್ಳಕೆರೆ ತಾಲ್ಲೂಕಿನಲ್ಲಿ ಪಡೆದು ನಂತರ ಹಿಮಾಲಯದಲ್ಲಿ ಪಾಂಡಿತ್ಯ ಅಧ್ಯಯನ ಮಾಡಿದ್ದರು. ಶರಣ ಸಾಹಿತ್ಯದ ಜೊತೆಗೆ ಎಲ್ಲಾ ಧರ್ಮಗಳ ಅಧ್ಯಯನವನ್ನು ಶ್ರೀಗಳು ಮಾಡಿದ್ದರು. ಮೊದಲ ಬಾರಿಗೆ ಸಿಂಧನೂರಿನಲ್ಲಿ ಕನಕಪೀಠ ಆರಂಭಿಸಿ ನಾಲ್ಕು ವರ್ಷಗಳ ನಂತರ ಅಂದರೆ 2011ರಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್‌ದಲ್ಲಿ ಕನಕಗುರು ಪೀಠಕ್ಕೆ ಆಗಮಿಸಿ ದಟ್ಟ ಬೆಟ್ಟದಲ್ಲಿ ಇಚ್ಚೆಯಂತೆ ಪೀಠ ಸ್ಥಾಪನೆ ಮಾಡಿದವರು ಶ್ರೀ ಸಿದ್ದರಾಮನಂದ ಸ್ವಾಮೀಜಿಗಳು.
ಕನಕ ಪೀಠದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುವರೆಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿ ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ ಮಾಡಿದ್ದಾರೆ. ತಮ ಆರೋಗ್ಯದ ಕಾಳಜಿಗಿಂತ ಸದಾ ಭಕ್ತರ ಕಾಳಜಿ ವಹಿಸುತ್ತಿದ್ದ ಶ್ರೀಗಳು ನಿನ್ನೆ ಸಂಜೆಯವರೆಗೂ ಶ್ರೀಮಠದ ಭಕ್ತರ ಸೇವೆಯಲ್ಲಿ ತೊಡಗಿದ್ದರು.
ಬಾಗಲಕೋಟೆ ಜಿಲ್ಲೆಯ ಗುಡೂರು ಮತ್ತು ಮುದ್ದೇಬಿಹಾಳದಲ್ಲಿ ಪದವಿ ಕಾಲೇಜು ಸ್ಥಾಪನೆ, ಕೊಪ್ಪಳ ಜಿಲ್ಲೆಯ ಹಾಲವರ್ತಿ ಹಾಗೂ ಕುಷ್ಟಗಿ ತಾಲ್ಲೂಕಿನ ಬಾದಿಮನಾಳದಲ್ಲಿ ಶಾಖಾ ಮಠ ಸ್ಥಾಪನೆ ಮಾಡಿದ್ದಾರೆ. ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದಲ್ಲದೆ, ಪ್ರತಿ ವರ್ಷ ಸಾಹಿತ್ಯ, ಸಮಾಜಸೇವೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ, ಸಿದ್ಧ ಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು.
ಜನವರಿ 12,13 ಹಾಗೂ 14ರಂದು ಮೂರು ದಿನಗಳಕಾಲ ಹಾಲುಮತದ ಸಾಹಿತ್ಯ ಸಮೇಳನದ ಹೆಸರಿನಲ್ಲಿ ವಿಭಿನ್ನ ಹಾಗೂ ವಿಶಿಷ್ಠ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಶೋಷಿತ ವರ್ಗದ ದಿವ್ಯಶಕ್ತಿಯಾಗಿದ್ದ ಶ್ರೀಗಳು ಈ ಕಾರ್ಯಕ್ರಮದಲ್ಲಿ ಕುರುಬ ಸಮುದಾಯ ವಿಭಿನ್ನ ಸಂಪ್ರದಾಯಗಳನ್ನು ಮತ್ತು ಅನೇಕ ಸಾಧಕರನ್ನು ನಾಡಿಗೆ ಪರಿಚಯಸಿ, ಆಶೀರ್ವಾದ ನೀಡುವುದರೊಂದಿಗೆ ವಿಶಿಷ್ಟ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಸಾರ್ಥಕತೆಯ ನುಡಿಗಳನ್ನಾಡಿ ಲಕ್ಷಾಂತರ ಭಕ್ತರ ಹೃದಯ ಗೆದ್ದಿದ್ದರು. ಆದರೆ ವಿಧಿಯ ಕ್ರೂರತೆಗೆ ಸೋಲನ್ನೊಪ್ಪಿಕೊಂಡು ಚಿರನಿದ್ರೆಗೆ ಜಾರಿದ ದಿವ್ಯಚೇತನವನ್ನು ಕಳೆದುಕೊಂಡ ನಾಡಿನ ಕೋಟ್ಯಾಂತರ ಹಾಲುಮತದವರು ಅನಾಥ ಭಾವನೆಗೆ ಒಳಗಾಗುವಂತಾಗಿದೆ.
ತಿಂಥಣಿಯಲ್ಲಿ ಕನಕ ಗುರು ಪೀಠದಲ್ಲಿ ಸ್ವಾಮೀಜಿ ಅವರ ಅಂತ್ಯಕ್ರಿಯೆಯನ್ನು ಹಾಲುಮತದ ಪದ್ಧತಿಯಂತೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
