ವಿಯೆಂಟಿಯಾನ್,ಅ.11 (ಪಿಟಿಐ) ವಿಶ್ವದ ವಿವಿಧ ಭಾಗಗಳಲ್ಲಿನ ಘರ್ಷಣೆಗಳು ಜಾಗತಿಕ ದಕ್ಷಿಣದ ದೇಶಗಳ ಮೇಲೆ ಅತ್ಯಂತ ಋಣಾತ್ಮಕ ಪರಿಣಾಮ ಬೀರುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯುರೇಷಿಯಾದಲ್ಲಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನರ್ ಸ್ಥಾಪಿಸಲು ಶುಕ್ರವಾರ ಕರೆ ನೀಡಿದ್ದಾರೆ
.
19ನೇ ಪೂರ್ವ ಏಷ್ಯಾ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಮಸ್ಯೆಗಳಿಗೆ ಯುದ್ಧಭೂಮಿಯಿಂದ ಪರಿಹಾರ ಸಿಗುವುದಿಲ್ಲ ಎಂದು ಪ್ರತಿಪಾದಿಸಿದರು.ಇಡೀ ಪ್ರದೇಶದ ಶಾಂತಿ ಮತ್ತು ಪ್ರಗತಿಗೆ ಮುಕ್ತ, ಅಂತರ್ಗತ, ಸಮೃದ್ಧ ಮತ್ತು ನಿಯಮ ಆಧಾರಿತ ಇಂಡೋ- ಪೆಸಿಫಿಕ್ ಮುಖ್ಯವಾಗಿದೆ ಎಂದು ಅವರು ಹೇಳಿದರು.
ದಕ್ಷಿಣ ಚೀನಾ ಸಮುದ್ರದ ಶಾಂತಿ, ಭದ್ರತೆ ಮತ್ತು ಸ್ಥಿರತೆ ಇಡೀ ಇಂಡೋ-ಪೆಸಿಫಿಕ್ ಪ್ರದೇಶದ ಹಿತಾಸಕ್ತಿಯಾಗಿದೆ ಎಂದು ಅವರು ಹೇಳಿದರು. ಸಮುದ್ರಗಳ ಕಾನೂನಿನ ಮೇಲಿನ ಯುಎನ್ ಕನ್ವೆನ್ಷನ್ ಅಡಿಯಲ್ಲಿ ಕಡಲ ಚಟುವಟಿಕೆಗಳನ್ನು ನಡೆಸಬೇಕು ಎಂದು ನಾವು ನಂಬುತ್ತೇವೆ.
ನ್ಯಾವಿಗೇಷನ್ ಮತ್ತು ವಾಯು ಜಾಗದ ಸ್ವಾತಂತ್ಯವನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಬಲವಾದ ಮತ್ತು ಪರಿಣಾಮಕಾರಿ ನೀತಿ ಸಂಹಿತೆ ರಚಿಸಬೇಕು. ಮತ್ತು ಇದು ಪ್ರಾದೇಶಿಕ ರಾಷ್ಟ್ರಗಳ ವಿದೇಶಾಂಗ ನೀತಿಗೆ ಕಡಿವಾಣ ಹಾಕಬಾರದು ಎಂದು ಮೋದಿ ಹೇಳಿದರು.
ನಮ್ಮ ವಿಧಾನವು ಅಭಿವೃದ್ಧಿಶೀಲತೆಯಾದ್ದಗಿರಬೇಕು ಮತ್ತು ವಿಸ್ತರಣಾವಾದವಲ್ಲ ಎಂದು ಅವರು ಹೇಳಿದರು. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಘರ್ಷಣೆಗಳು ಜಾಗತಿಕ ದಕ್ಷಿಣದ ದೇಶಗಳ ಮೇಲೆ ಅತ್ಯಂತ ಋಣಾತ್ಮಕ ಪರಿಣಾಮ ಬೀರುತ್ತಿವೆ ಎಂದು ಹೇಳಿದ ಮೋದಿ, ಅದು ಯುರೇಷಿಯಾ ಅಥವಾ ಪಶ್ಚಿಮ ಏಷ್ಯಾ ಆಗಿರಲಿ, ಶಾಂತಿ ಮತ್ತು ಸ್ಥಿರತೆಯನ್ನು ಆದಷ್ಟು ಬೇಗ ಮರುಸ್ಥಾಪಿಸಬೇಕು ಎಂದು ಎಲ್ಲರೂ ಬಯಸುತ್ತಾರೆ ಎಂದು ಹೇಳಿದರು.
ನಾನು ಬುದ್ಧನ ಭೂಮಿಯಿಂದ ಬಂದಿದ್ದೇನೆ ಮತ್ತು ಇದು ಯುದ್ಧದ ಯುಗವಲ್ಲ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಯುದ್ಧಭೂಮಿಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದರು.
ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಅಂತರರಾಷ್ಟ್ರೀಯ ವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡಬೇಕಾಗುತ್ತದೆ, ಎಂದು ಪ್ರಧಾನಿ ಪ್ರತಿಪಾದಿಸಿದರು.