ಬೆಂಗಳೂರು,ಜ.15- ರಾಜ್ಯ ರಾಜಕಾರಣದಿಂದ ದೂರ ಸರಿಯುವುದಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಂದರ್ಭದಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಬೇಕೆಂಬುದನ್ನು ತೀರ್ಮಾನ ಮಾಡುತ್ತೇನೆ ಎಂದರು.
ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿಯಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಿಲ್ಲದಂತೆ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ತರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.
ನಾನು ರಾಜಕಾರಣದಲ್ಲಿದ್ದೇನೆ. ನಾನು ಎಲ್ಲಿರಬೇಕು ಎಂಬುದನ್ನು ನಾಡಿನ ಜನತೆ ತೀರ್ಮಾನ ಮಾಡುತ್ತಾರೆ. ನಾಡಿನ ಜನರು ನೆಮದಿಯಿಂದಿರಬೇಕು ಎಂಬಂತಹ ಒಳ್ಳೆಯ ಸರ್ಕಾರ ರಾಜ್ಯದಲ್ಲಿ ಬರಬೇಕಿದೆ. ಇದರ ಬಗ್ಗೆ ನಾಡಿನ ಜನತೆ ತೀರ್ಮಾನ ಮಾಡಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವನಾಗಿ ಎರಡು ಪ್ರಮುಖ ಇಲಾಖೆಗಳ ಜವಾಬ್ದಾರಿ ಹೊತ್ತಿದ್ದೇನೆ. ಆ ಎರಡೂ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಲು ಬುನಾದಿ ಹಾಕಿದ್ದೇನೆ. ಆ ಕೆಲಸ ಮಾಡುವುದರಲ್ಲಿ ಯಶಸ್ಸು ಗಳಿಸಬೇಕಿದೆ ಎಂದು ಅವರು ತಿಳಿಸಿದರು.
ಪ್ರತಿಕ್ರಿಯೆ ಇಲ್ಲ :
ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತರಿಗೆ ಕಾಂಗ್ರೆಸ್ ಮುಖಂಡ ಧಮ್ಕಿ ಹಾಕಿರುವ ಆರೋಪ ಪ್ರಕರಣದ ಬಗ್ಗೆ ನಿನ್ನೆ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ರೊಂದಿಗೆ ಮಾತನಾಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಆದರೆ ಇದುವರೆಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.ಇಂದು ಮಕರ ಸಂಕ್ರಾಂತಿ ಹಬ್ಬವಾಗಿದೆ. ಮತ್ತೆ ಈ ವಿಚಾರವಾಗಿ ನಾಳೆ ಅವರೊಂದಿಗೆ ಮಾತನಾಡುವೆ ಎಂದು ಅವರು ಹೇಳಿದರು.
ಯಾವುದೇ ಪಕ್ಷದವರಿರಲಿ, ಯಾರೇ ಆಗಿರಲಿ, ಇಂತಹ ವಿಚಾರಗಳಲ್ಲಿ ಸರ್ಕಾರ ಕಠಿಣ ತೀರ್ಮಾನ ಕೈಗೊಂಡರೆ ಪದೇಪದೇ ಇಂತಹ ಘಟನೆಗಳು ನಡೆಯುವುದಿಲ್ಲ. ಅಧಿಕಾರಿಗಳೊಂದಿಗೆ ಯಾವ ರೀತಿ ನಡವಳಿಕೆ ಇರಬೇಕು ಎಂಬುದನ್ನು ಅರಿಯಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿ ಇರುವುದನ್ನು ಗಮನಿಸಿದ್ದೇನೆ. ಆಡಳಿತದಲ್ಲಿರುವವರ ಒತ್ತಡಕ್ಕೆ ಒಳಗಾಗಿ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಲು ಆಗುವುದಿಲ್ಲ ಎಂದು ಅವರು ಹೇಳಿದರು.
ಇತ್ತೀಚೆಗೆ ಅಧಿಕಾರದಲ್ಲಿರುವವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾನೂನು ಬಾಹಿರವಾಗಿ ಕೆಲಸ ಮಾಡಿಸಲು ಮುಂದಾಗುತ್ತಾರೆ. ಕಾರ್ಯಕರ್ತರ ದಬ್ಬಾಳಿಕೆ ಒಂದು ಭಾಗ, ಜನಸಾಮಾನ್ಯರ ಒತ್ತಡ ಮತ್ತೊಂದು ಭಾಗ. ಉದಾಹರಣೆಗೆ ಎಂಟು-ಹತ್ತು ವರ್ಷದ ಹಿಂದಿನ ಘಟನೆಯನ್ನು ಉಲ್ಲೇಖಿಸುತ್ತೇನೆ ಎಂದ ಅವರು, ವಿಕಾಸಸೌಧ ನಿರ್ಮಾಣ ಮಾಡುವಾಗ ಮೂರು ಬದಿಯಲ್ಲಿ ಕೆತ್ತನೆ ಮಾಡದಿದ್ದರೂ ಗುತ್ತಿಗೆದಾರರಿಗೆ ಹಣ ನೀಡಲಾಗಿದೆ.
ಆ ಅಧಿಕಾರಿ ನಿವೃತ್ತಿ ಸೌಲಭ್ಯ ನಿಲ್ಲಿಸಿ ಕ್ರಮ ಕೈಗೊಳ್ಳಲು ಲೋಕಾಯುಕ್ತರು ಶಿಫಾರಸ್ಸು ಮಾಡಿದ್ದಾರೆ. ಇದರಿಂದ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಆತಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲೇ ಸ್ಥಳ ನಿಯುಕ್ತಿ ಮಾಡಿದರೂ ಅದಕ್ಕೆ ಅಂಜದೇ ಕೆಲಸ ಮಾಡಬೇಕು. ಬೇಕಾದ ಸ್ಥಳಕ್ಕಾಗಿ ಆಡಳಿತ ನಡೆಸುವವರ ಒತ್ತಡಕ್ಕೆ ಒಳಗಾಗುವುದು ಬೇಡ ಎಂಬ ಸಲಹೆಯನ್ನು ಕುಮಾರಸ್ವಾಮಿ ನೀಡಿದರು.
