Saturday, October 19, 2024
Homeರಾಜಕೀಯ | Politicsತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಬಾಯ್ಬಿಡದ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಬಾಯ್ಬಿಡದ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

Devolution of funds: Siddaramaiah asks Kannadigas to raise their voice against ‘injustice’

ಬೆಂಗಳೂರು,ಅ.13- ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ಪಾಲಿನಲ್ಲಿ ರಾಜ್ಯಕ್ಕೆ ಭಾರಿ ಅನ್ಯಾಯವಾಗಿದ್ದು, ಬಿಜೆಪಿಯವರು ಈ ಬಗ್ಗೆ ಧ್ವನಿಯೆತ್ತದೇ ಇರುವುದು ರಾಜ್ಯದ ಜನರಿಗೆ ಮಾಡಿದ ದ್ರೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ತೆರಿಗೆ ಪಾಲನ್ನು ಹಂಚಿಕೆ ಮಾಡಿದೆ. ಅದರಲ್ಲಿ 6,498 ಕೋಟಿ ರೂ. ರಾಜ್ಯಕ್ಕೆ ದೊರೆತರೆ, ಉತ್ತರ ಪ್ರದೇಶಕ್ಕೆ 31,000 ಕೋಟಿ ರೂ. ನೀಡಲಾಗಿದೆ. ನಮಗಿಂತಲೂ ಬೇರೆ ರಾಜ್ಯಗಳಿಗೆ ಸಾಕಷ್ಟು ಹೆಚ್ಚಿನ ಹಣ ನೀಡಲಾಗಿದೆ. ನಮಗೆ ತೀವ್ರ ಅನ್ಯಾಯವಾಗಿದೆ ಎಂದರು.

ರಾಜ್ಯದ ಜನರು ತೆರಿಗೆ ಅನ್ಯಾಯದ ವಿರುದ್ಧ ದನಿ ಎತ್ತಬೇಕು. ಬಿಜೆಪಿಯವರು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡು ಮಾತನಾಡುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ದ್ರೋಹ. ಪ್ರಹ್ಲಾದ್ ಜೋಶಿ ಸೇರಿದಂತೆ ಯಾರೇ ಆದರೂ ತೆರಿಗೆ ಅನ್ಯಾಯದ ಬಗ್ಗೆ ದನಿಯೆತ್ತದೇ ಇರುವುದು ಸರಿಯಲ್ಲ. ಹೆಚ್ಚು ಜನ ಸಂಸದರು ರಾಜ್ಯ ಬಿಜೆಪಿಯಿಂದ ಗೆದ್ದಿದ್ದಾರೆ. ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ 60 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಇದರ ವಿರುದ್ಧ ಹೋರಾಟ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ ಗಲಭೆಯಲ್ಲಿನ ಭಾಗಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಅಭಿಯೋಜನೆಯನ್ನು ಹಿಂಪಡೆದಿರುವುದಕ್ಕೆ ಬಿಜೆಪಿಯವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಈ ಹಿಂದೆ ಅವರು ಆಡಳಿತದಲ್ಲಿದ್ದಾಗ ಆರ್‌ಎಸ್‌ಎಸ್‌ನವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದಿದ್ದರು. ಅದರ ಬಗ್ಗೆ ಏಕೆ ಚರ್ಚೆ ಮಾಡುವುದಿಲ್ಲ? ಎಂದರು.

ಕ್ರಿಮಿನಲ್ ಪ್ರಕರಣಗಳ ಅಭಿಯೋಜನೆಯನ್ನು ಹಿಂಪಡೆಯಲು ಗೃಹಸಚಿವರ ಅಧ್ಯಕ್ಷತೆಯಲ್ಲಿ ಉಪಸಮಿತಿ ಇದೆ. ಅಲ್ಲಿ ನಿರ್ಣಯ ಕೈಗೊಂಡು ಸಂಪುಟದಲ್ಲಿ ಮಂಡಿಸಲಾಯಿತು. ಅದಕ್ಕೆ ಸಂಪುಟ ಅನುಮೋದನೆ ನೀಡಿದೆ. ಅಂತಿಮವಾಗಿ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ನ್ಯಾಯಾಲಯದಲ್ಲಿ ನ್ಯಾಯ ದೊರೆಯಬೇಕು. ಆಗ ಮಾತ್ರ ಊರ್ಜಿತವಾಗಲಿದೆ ಎಂದು ಹೇಳಿದರು.

ಮೈಸೂರು ದಸರಾ ಈ ಬಾರಿ ಯಶಸ್ವಿಯಾಗಿದೆ. ಅತಿ ಹೆಚ್ಚು ಜನ ಬಂದಿದ್ದರು. ಜಿಲ್ಲಾ ಸಚಿವರು, ಜಿಲ್ಲಾಡಳಿತ ಅಧಿಕಾರಿಗಳು ಹೆಚ್ಚು ಶ್ರಮ ವಹಿಸಿ ವ್ಯವಸ್ಥೆ ಮಾಡಿದ್ದರು. ಮಧ್ಯದಲ್ಲಿ ಒಂದಿಷ್ಟು ಮಳೆ ಬಂದಿತು. ಅದನ್ನು ಬಿಟ್ಟರೆ ಪಂಜಿನ ಕಸರತ್ತು ಸೇರಿದಂತೆ ಎಲ್ಲವೂ ಚೆನ್ನಾಗಿ ನಡೆಯಿತು.

ಮಳೆ- ಬೆಳೆ ಚೆನ್ನಾಗಿ ಆಗಿದ್ದರಿಂದ ದಸರಾವನ್ನು ಅದ್ಧೂರಿಯಾಗಿ ನಡೆಸಲಾಗಿದೆ ಎಂದರು. ಜನ ಖುಷಿಯಾಗಿದ್ದರೆ ಸರ್ಕಾರಕ್ಕೂ ಖುಷಿಯಾಗುತ್ತದೆ. ಸರ್ಕಾರವೇ ನಾಡಹಬ್ಬವನ್ನು ಆಚರಿಸುತ್ತಿದೆ. ಜನರ ಹಬ್ಬವಾಗಿ ಪರಿವರ್ತನೆಯಾಗಿದೆ. ಈ ಹಿನ್ನೆಲೆಯಲ್ಲಿ ತಾವು ನಿನ್ನೆ ಇಡೀ ದಿನ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು.

RELATED ARTICLES

Latest News