ಬೆಂಗಳೂರು : ನಾಡ ಹಬ್ಬ ದಸರಾ ಬಂತೆಂದರೆ ಪ್ರತಿವರ್ಷವು ಸ್ಯಾಂಡಲ್‌ವುಡ್ ಸ್ಟಾರ್‌ಗಳ ಚಿತ್ರಗಳು ಸಾಲು ಸಾಲಾಗಿ ಬಿಡುಗಡೆ ಆಗುವ ಮೂಲಕ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗುತ್ತಿತ್ತು. ಆದರೆ ಈ ಬಾರಿ ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ನಟನೆಯ `ಮಾರ್ಟಿನ್’ ಚಿತ್ರ ಬಿಟ್ಟರೆ ಉಳಿದ ಯಾವುದೇ ಸ್ಟಾರ್ ನಟರ ಚಿತ್ರಗಳು ತೆರೆಗೆ ಅಪ್ಪಳಿಸಲಿಲ್ಲ. ಆದರೆ ತಮ್ಮ ಚಿತ್ರಗಳ ಬಗ್ಗೆ ಹೊಸ ಅಪ್‌ಡೇಟ್ ನೀಡುವ ಮೂಲಕ ಮನ ರಂಜಿಸಿದರೆ, ಗಾಂಧಿ ನಗರದಲ್ಲಿ ಡಜನ್‌ಗೂ ಹೆಚ್ಚು ಚಿತ್ರಗಳ ಪೋಸ್ಟರ್‌ಗಳು ಕಲರವ ಮಾಡಿವೆ.
ಮಾರ್ಟಿನ್‌ಗೆ ಮಿಶ್ರಪ್ರತಿಕ್ರಿಯೆ:
ಎ.ಪಿ.ಅರ್ಜುನ್ ನಿರ್ದೇಶಿಸಿದ್ದ `ಅದ್ಧೂರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಭರ್ಜರಿಯಾಗಿ ಎಂಟ್ರಿ ನೀಡಿದ್ದ ಬಹದ್ದೂರ್ ಧ್ರುವಸರ್ಜಾ ಇದೇ ಮೊದಲ ಬಾರಿ ದ್ವಿಪಾತ್ರದಲ್ಲಿ ನಟಿಸಿದ್ದ ಮಾರ್ಟಿನ್ ಚಿತ್ರವು ದಸರಾ ಹಬ್ಬದ ವೇಳೆ ಬಿಡುಗಡೆಯಾಗಿದೆ. ಈ ಚಿತ್ರಕ್ಕೂ ಎ.ಪಿ.ಅರ್ಜುನ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧ್ರುವನ ಅಭಿಮಾನಿಗಳಿಗೆ ರಸದೌತಣ ನೀಡಿದ್ದೆ. ಆದರೆ ಗಾಂಧಿನಗರದಲ್ಲಿ ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ಬಂದಿವೆ. ಮಾರ್ಟಿನ್ ಇಡೀ ಚಿತ್ರವನ್ನೇ ಧ್ರುವಸರ್ಜಾ ಒಬ್ಬರೇ ಆಕ್ರಮಿಸಿದಂತಿತ್ತು. ಸಿನಿಮಾದ ಕಲೆಕ್ಷನ್ ಭಾನುವಾರದಿಂದ ಹೆಚ್ಚಾಗುವ ಭರವಸೆಯನ್ನು ನಿರ್ಮಾಪಕ ಉದಯ್ ಕೆ.ಮೆಹ್ತಾ ವ್ಯಕ್ತಪಡಿಸಿದ್ದಾರೆ.
ಯುವನ 2ನೇ ಸಿನಿಮಾ ಘೋಷಣೆ:
ಹೊಂಬಾಳೆ ಫಿಲಂ ಅಡಿ ವಿಜಯ್ ಕಿರಂಗದೂರು ನಿರ್ಮಿಸಿ , ಸಂತೋಷ್ ಆನಂದ್‌ರಾಮ್ ನಿರ್ದೇಶನದ `ಯುವ’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಪಡೆದಿದ್ದ ಯುವ ರಾಜ್‌ಕುಮಾರ್ ಅವರು ತಮ್ಮ ಮೊದಲ ಚಿತ್ರದಲ್ಲೇ ಭರ್ಜರಿ ಆ್ಯಕ್ಷನ್, ನೃತ್ಯ ಹಾಗೂ ಅಭಿನಯದ ಮೂಲಕ ಗಮನ ಸೆಳೆದಿದ್ದು, ಈಗ ಅಶ್ವಿನಿ ಪುನೀತ್‌ರಾಜ್‌ಕುಮಾರ್ ನಿರ್ಮಾಣದ ಪಿಆರ್‌ಕೆ ಪ್ರೊಡಕ್ಷನ್ಸ್ , ಕೆಆರ್‌ಜಿ ಸ್ಟುಡಿಯೋ ಹಾಗೂ ಜಯಣ್ಣ ಫಿಲ್ಮ್ಸ ಒಂದಾಗಿ ಯುವನ ಹೊಸ ಚಿತ್ರಕ್ಕೆ ಬಂಡವಾಳ ಹೂಡಿದ್ದು ಈ ಚಿತ್ರದ ಪ್ರೀ ಪೋಸ್ಟರ್ ದಸರಾ ಸಂಭ್ರಮವನ್ನು ಹೆಚ್ಚಿಸಿದೆ. ಪೋಸ್ಟರ್‌ನಲ್ಲಿ ಯುವ ರಾಜ್‌ಕುಮಾರ್ ಕೈಯಲ್ಲಿ ರಕ್ತಭರಿತ ಲಾಂಗ್ ಹಿಡಿಯುವ ಮೂಲಕ ರಗಡ್ ಲುಕ್ ನೀಡಿದ್ದಾರೆ. ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ.
ಬೈರತಿ ರಣಗಲ್‌ನ 4 ಪೋಸ್ಟರ್ ಬಿಡುಗಡೆ:
ವೇದ ಚಿತ್ರದ ನಂತರ ಗೀತಾಶಿವರಾಜ್‌ಕುಮಾರ್ ಅವರು ನಿರ್ಮಿಸುತ್ತಿರುವ ಬೈರತಿ ರಣಗಲ್' ಚಿತ್ರವು ದಸರಾ ಹಬ್ಬದಂದೇ ಬೆಳ್ಳಿತೆರೆಗೆ ಅಪ್ಪಳಿಸಬೇಕಾಗಿತ್ತಾದರೂ, ಧ್ರುವಸರ್ಜಾ ಅಭಿನಯದ
ಮಾರ್ಟಿನ್’ ಚಿತ್ರಕ್ಕೆ ಅನುವು ಮಾಡಿಕೊಡಲು ಸಿನಿಮಾದ ಬಿಡುಗಡೆಯನ್ನು ನವೆಂಬರ್ 15ಕ್ಕೆ ಘೋಷಿಸಿದ್ದರು. ಆದರೆ ಹಬ್ಬದ ಸಡಗರವನ್ನು ಹೆಚ್ಚಿಸಲು ಸಿನಿಮಾದ 4 ಪೋಸ್ಟರ್‌ಗಳು ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳ ಸಡಗರ ಹೆಚ್ಚಿಸಿದ್ದಾರೆ. ಮಫ್ತಿ' ಚಿತ್ರದ ಪ್ರೀಕ್ವೆಲ್ ಎಂದೇ ಬಿಂಬಿಸಿಕೊಂಡಿರುವ
ಬೈರತಿ ರಣಗಲ್’ ಸಿನಿಮಾದಲ್ಲಿ ಡಾನ್ ಚಿತ್ರದ ನಂತರ ಶಿವಣ್ಣ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಕೀಲನಾಗಿದ್ದ ರಣಗಲ್ ಯಾಕೆ ಡಾನ್ ಆಗುತ್ತಾನೆ ಎಂಬುದನ್ನು ತೋರಿಸಲಾಗಿದೆ. ಮಫ್ತಿ ನಿರ್ದೇಶಿಸಿದ್ದ ನರ್ತನ್ ಅವರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ.
ದೀಪಾವಳಿಗೆ ಬಘೀರಾ ಎಂಟ್ರಿ :
ಶ್ರೀಮುರಳಿ ನಟನೆಯ “ಬಘೀರಾ” ಸಿನಿಮಾವು ವರ್ಷದ ಬಹುನಿರೀಕ್ಷಿತ ಚಿತ್ರವಾಗಿದ್ದು ದೀಪಾವಳಿಗೆ ಬಿಡುಗಡೆ ಆಗುವ ಸೂಚನೆಯನ್ನು ಚಿತ್ರತಂಡ ನೀಡಿದೆ. ಈಗಾಗಲೇ ಟೀಸರ್ ಮೂಲಕ ಭಾರೀ ಸದ್ದು ಮಾಡಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಬೈರತಿ ರಣಗಲ್ ಚಿತ್ರ ಕೂಡ ಒಂದೆರಡು ವಾರಗಳ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ನವೆಂಬರ್‌ನಲ್ಲಿ ಮಾವ ಹಾಗೂ ಅಳಿಯನ ನಡುವೆ ಭರ್ಜರಿ -ಫೈಟ್ ನಿರೀಕ್ಷಿಸಬಹುದು.
“ಬಘೀರಾ” ಚಿತ್ರ ಹೊಂಬಾಳೆ ಫಿಲಂಸ್ ಅಡಿ ನಿರ್ಮಾಣವಾಗುತ್ತಿದ್ದು, ಡಾ.ಸೂರಿ ನಿರ್ದೇಶನವಿದ್ದು, ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಮುಂದಿನ ವಾರವೇ ಈ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ಕುತೂಹಲ ಕೆರಳಿಸಿರುವ ಕೆಡಿ, ಯುಐ:
ಇನ್ನು ಚಂದನವನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ, ಟೈಟಲ್ ಡಿಸೈನ್‌ನಿಂದಲೇ ಭಾರೀ ಸದ್ದು ಮಾಡುತ್ತಿದ್ದರೆ, ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ನಟನೆಯ K.D ಸಿನಿಮಾದ ಸಾಂಗ್ಸ್ ಅನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ. ಈ ಎರಡು ಚಿತ್ರಗಳು 2025ರಲ್ಲಿ ಸ್ಯಾಂಡಲ್‌ವುಡ್‌ನ ಯಶಸ್ವಿ ಚಿತ್ರಗಳ ಸಾಲಿನಲ್ಲಿ ನಿಲ್ಲಲಿದೆ.
ಗಮನ ಸೆಳೆದ ಪೋಸ್ಟರ್‌ಗಳು:
ಬಡವ ರಸ್ಕಲ್, ಹೆಡ್ ಬುಷ್, ಟಗರುಪಾಳ್ಯ ಚಿತ್ರಗಳ ನಂತರ ಡಾಲಿ ಧನಂಜಯ್ ನಿರ್ಮಿಸುತ್ತಿರುವ ಜೆಸಿ, ಧನು ಅಭಿನಯದ ಅಣ್ಣ -ಫ್ರಾಂ -ಮೆಕ್ಸಿಕೊ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ' ಚಿತ್ರದ ಪೋಸ್ಟರ್‌ಗಳು ಕೂಡ ದಸರಾ ಹಬ್ಬದ ಮೆರುಗನ್ನು ಹೆಚ್ಚಿಸಿದರೆ, ಚಾಲೆಂಜಿಂಗ್ ಸ್ಟಾರ್ ನಟಿಸಿ, ದಿನಕರ್ ತೂಗುದೀಪ್ ನಿರ್ದೇಶನದ
ನವಗ್ರಹ’ ಚಿತ್ರವನ್ನು ರೀ ರಿಲೀಸ್ ಮಾಡುವ ಸುದ್ದಿಯನ್ನು ದಿನಕರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕಾತರ ಹೆಚ್ಚಿಸಿದ್ದಾರೆ.