ಬೆಂಗಳೂರು, ಅ.14- ಸಾರ್ವಜನಿಕರ ಚಾಲನಾ ಪರವಾನಗಿ ಪತ್ರದ ಸ್ಮಾರ್ಟ್ ಕಾರ್ಡ್ ಹಾಗೂ ವಾಹನ ನೋಂದಣಾ ಪತ್ರಗಳ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವ್ಯತ್ಯಯವಾಗದಂತೆ ರಾಜ್ಯದ ಸಾರಿಗೆ ಇಲಾಖೆಯ ಸಾರಿಗೆ ಕಚೇರಿಗಳಲ್ಲಿ ಜಾರಿಗೊಳಿಸಿರುವ ಗಣಕೀಕೃತ ಸೇವಾ ವಿತರಣೆ (ಸಿಎಸ್‌ಡಿಎಸ್‌ಟಿಓಕೆ) ಯೋಜನೆಯನ್ನು ಡಿಸೆಂಬರ್ 24ರವರೆಗೆ ಮುಂದುವರಿಸಲಾಗಿದೆ.
ಈ ಯೋಜನೆಯನ್ನು ಜಾರಿಗೊಳಿಸಲು ರೋಸ್ ಮರ್ಟ ಟೆಕ್ನಾಲಜೀಸ್ ಎಂಬ ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ 15 ವರ್ಷಗಳ ಅವಧಿಯ ಒಪ್ಪಂದ ಕಳೆದ ಸೆ.24ಕ್ಕೆ ಮುಗಿದಿದೆ. ಹೀಗಾಗಿ ಸೆ.25ರಿಂದ ಡಿಸೆಂಬರ್ 24ರವರೆಗೆ ಮೂರು ತಿಂಗಳವರೆಗೆ ಮುಂದುವರೆಸಲು ಅನುಮೋದನೆ ನೀಡಿ ಸಾರಿಗೆ ಇಲಾಖೆ ಆದೇಶಿಸಿದೆ.
ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಯೋಜನೆಯನ್ನು ಮುಂದುವರೆಸಲು ಕೋರಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.