ಬೆಂಗಳೂರು,ಜ.15- ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ 11 ಪ್ರಮುಖ ಚಾರಣ ಪಥಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು.ಎಂ . ಅವರು, (ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ) ಹೊರಡಿಸಿದ ಆದೇಶದಂತೆ, ಬುಧವಾರದಿಂದಲೇ ಜಾರಿಗೆ ಬರುವಂತೆ ಮುಂದಿನ ಸೂಚನೆ ಹೊರಡುವವರೆಗೆ ಈ ನಿರ್ಬಂಧವನ್ನು ವಿಧಿಸಲಾಗಿದೆ.
ಬೇಸಿಗೆ ಹತ್ತಿರವಾಗುತ್ತಿರುವುದರಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಬೆಂಕಿ ಕಾಲ ಆರಂಭವಾಗುತ್ತಿದೆ. ಅರಣ್ಯದಲ್ಲಿ ಒಣ ಎಲೆಗಳು ಮತ್ತು ಹುಲ್ಲು ಹೆಚ್ಚಿರುವುದರಿಂದ ಕಾಡ್ಗಿಚ್ಚು ಸಂಭವಿಸುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟು ಅರಣ್ಯ ಇಲಾಖೆ ಕೆಲವು ಚಾರಣ ಮಾರ್ಗಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.
ಗಂಗಡಿಕಲ್ ಚಾರಣ, ಕುದುರೆಮುಖ ಚಾರಣ, ಕುರಿಂಜಾಲು ಚಾರಣ, ವಾಲಿಕುಂಜ ಚಾರಣ – ಎಸ್.ಕೆ.ಬಾರ್ಡರ್, ವಾಲಿಕುಂಜ ಚಾರಣ – ಕೆರ್ವಾಶೆ, ನರಸಿಂಹ ಪರ್ವತ – ಕಿಗ್ಗ, ನರಸಿಂಹ ಪರ್ವತ – ಮಳಂದೂರು, ಕೊಡಚಾದ್ರಿ-ವಳೂರು, ಕೊಡಚಾದ್ರಿ – ಹಿಡ್ಲುಮನೆ, ಬಂಡಾಜೆ – ವೊಳಂಬ್ರ, ನೇತ್ರಾವತಿ ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಈ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಲ್ಲದೆ, ಪ್ರವೇಶ ನಿಷೇಧಿಸಿರುವ ಜಾಗಗಳಲ್ಲಿ ಕಾವಲುಗಾರರನ್ನು ನೇಮಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಮ ಆದೇಶದಲ್ಲಿ ತಿಳಿಸಿದ್ದಾರೆ.
ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಮಾನವನಿಂದಲೇ ಹೆಚ್ಚಾಗಿ ಸಂಭವಿಸುತ್ತಿವೆ. ಹಿಂದಿನ ವರ್ಷಗಳಲ್ಲಿ ಅನೇಕ ಘಟನೆಗಳು ಉದ್ದೇಶಪೂರ್ವಕವಾಗಿಯೋ ಅಥವಾ ಗೊತ್ತಿಲ್ಲದೆಯೇ ಚಾರಣಕ್ಕೆ ಬಂದವರಿಂದ ಸಂಭವಿಸಿದೆ. ಸಮಗ್ರ ತಪಾಸಣೆ, ಜಾಗೃತಿ ಕಾರ್ಯಕ್ರಮಗಳು ಹಾಗೂ ಮಾರ್ಗದರ್ಶಕರ ನಿಯೋಜನೆಯಿದ್ದರೂ ಸಹ ಈ ಘಟನೆಗಳು ನಡೆದಿವೆ.
ಹೀಗಾಗಿ ಈ ಬಾರಿ ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಾದ್ಯಂತ ಟ್ರಕ್ಕಿಂಗ್ ಅನ್ನು ಬಂದ್ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಗಣತಿ ಕಾರ್ಯ ನಡೆಯುತ್ತಿರುವುದೂ ಕೂಡ ಮತ್ತೊಂದು ಕಾರಣವಾಗಿದೆ. ಹುಲಿ ಗಣತಿ ಹಾಗೂ ಮಾನವವನ್ಯಜೀವಿ ಸಂಘರ್ಷ ತಡೆಯುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಟ್ರಕ್ಕಿಂಗ್ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಕಷ್ಟಕರ. ಅಲ್ಲದೆ, ಈ ಬಾರಿ ಗಣತಿ ಕಾರ್ಯಕ್ಕೆ ಸ್ವಯಂಸೇವಕರನ್ನು ಸೇರ್ಪಡೆಗೊಳಿಸಲಾಗಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅರಣ್ಯ ಪ್ರವೇಶ ನಿರ್ಬಂಧಿಸಲಾಗಿದೆ.
