ಬೆಂಗಳೂರು, ಜ.15- ಮಾರುಕಟ್ಟೆ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಕಡಲೇಬೇಳೆ ಬೆಳೆಗಾರರ ನೆರವಿಗೆ ಧಾವಿಸಲು ಕೂಡಲೇ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹ್ವಾಣ್ ಅವರಿಗೆ ಪತ್ರ ಬರೆದಿದ್ದಾರೆ.
ಕಡಲೇಬೇಳೆ ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯ ಬೆಳೆಗಳಲ್ಲಿ ಒಂದಾಗಿದೆ. 9.24 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, 6.27 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ. ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ ಮತ್ತು ಚಿಕ್ಕಮಗಳೂರು ಮುಂತಾದ ಪ್ರದೇಶಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದು ಆದಾಯದ ಮೂಲವಾಗಿದೆ. ಅನಿಶ್ಚಿತ ಹವಾಮಾನ ಪರಿಸ್ಥಿತಿಗಳ ಬಳಿಕವೂ ಅನೇಕ ತಿಂಗಳ ಕಠಿಣ ಪರಿಶ್ರಮದ ಮೂಲಕ ಕಡಲೇಬೇಳೆ ಫಸಲು ರೈತರ ಕೈ ಸೇರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ 2026-27ನೇ ಸಾಲಿನಲ್ಲಿ ಕಡಲೆ ಬೇಳೆ ಪ್ರತಿ ಕ್ವಿಂಟಲ್‌ಗೆ 5,875 ರೂಪಾಯಿ ದರ ನಿಗದಿ ಮಾಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 4,260 ರಿಂದ 5,813 ರವರೆಗೂ ದರ ಇದೆ. ಸರಿ ಸುಮಾರು 800 ರಿಂದ 1,200 ರೂಪಾಯಿಗಿಂತಲೂ ಕಡಿಮೆ ಧಾರಣೆಯಿದೆ.
ಜನವರಿ ಮತ್ತು ಮಾರ್ಚ್ ತಿಂಗಳ ನಡುವೆ ಫಸಲು ಕೊಯ್ಲು ಹೆಚ್ಚಾಗಲಿದ್ದು, ಆ ವೇಳೆಗೆ ಮತ್ತಷ್ಟು ಬೆಲೆ ಕುಸಿತವಾಗುವ ಆತಂಕ ಇದೆ. ಬೆಲೆ ಕುಸಿತ ಕೇವಲ ಮಾರುಕಟ್ಟೆ ವೈಫಲ್ಯವಲ್ಲ, ಮಾನವ ಬಿಕ್ಕಟ್ಟು. ಇಂತಹ ವೇಳೆ ರೈತರ ನೆರವಿಗೆ ಸರ್ಕಾರ ಧಾವಿಸದಿದ್ದರೆ ಬೆಂಬಲ ಬೆಲೆಯ ಮೇಲಿನ ಸಾಂಸ್ಥಿಕ ಚೌಕಟ್ಟಿನ ಮೇಲೆಯೇ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದಾರೆ.
ಕೃಷಿ ವೆಚ್ಚಗಳು, ಸಾಲ ಬಾಧ್ಯತೆ ಮತ್ತು ಮನೆಯ ಅಗತ್ಯಗಳಿಂದಾಗಿ ಬೆಲೆ ಕುಸಿತದ ನಡುವೆಯೂ ಉತ್ಪನ್ನವನ್ನು ಮಾರಾಟ ಮಾಡುವ ಇಕ್ಕಟ್ಟಿಗೆ ರೈತರು ಸಿಲುಕುತ್ತಾರೆ. ಈ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಬೇಳೆ ಖರೀದಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಗಳು ಕರ್ನಾಟಕದಲ್ಲಿ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ರಾಜ್ಯ ಸರ್ಕಾರ ತನ್ನ ಚೌಕಟ್ಟಿನಲ್ಲಿ ತನ್ನ ಪಾಲಿನ ಜವಾಬ್ದಾರಿ ನಿಭಾಯಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ. ಈಗಾಗಲೇ ಅಗತ್ಯ ಅಧಿಸೂಚನೆಗಳನ್ನು ಹೊರಡಿಸಿದೆ, ರಾಜ್ಯ ಸಂಸ್ಥೆಗಳನ್ನು ಗೊತ್ತುಪಡಿಸಿದೆ, ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿದೆ. ಖರೀದಿ, ಸಾಗಾಣಿಕೆ, ರೈತರ ನೋಂದಣಿ, ಗೋದಾಮು, ಸಾರಿಗೆ ಮತ್ತು ರಾಜ್ಯ ಸುಂಕಗಳ ವಿನಾಯಿತಿಯನ್ನು ಸುಗಮಗೊಳಿಸಲು ಬದ್ಧವಾಗಿದೆ. ಕೇಂದ್ರ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧವಾಗಿದೆ ಎಂದಿದ್ದಾರೆ.
