ಬೆಂಗಳೂರು,ಅ.16- ರಾಜ್ಯದ ಮಿನಿ ಸಮರವೆಂದೇ ಬಿಂಬಿಸಲಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅ.18 ರಂದು ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ತಮ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ, ಬಸವರಾಜ ಬೊಮಾಯಿ ಅವರು ತಮ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ಹಾಗೂ ಸಂಸದ ಇ.ತುಕಾರಾಂ ಅವರು ತಮ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದ ತೆರವಾಗಿರುವ ಸಂಡೂರು (ಎಸ್ಟಿ) ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ವೇಳಾಪಟ್ಟಿಯಂತೆ ಅ.18 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅ.25 ನಾಮಪತ್ರ ಸಲ್ಲಿಕೆಗೆ ಕಡೆಯ ದಿನ, ಅ.28 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ಉಮೇದುವಾರಿಕೆ ಹಿಂಪಡೆಯಲು ಅ.30 ರವರೆಗೂ ಕಾಲಾವಕಾಶವಿದ್ದು, ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ನ.13 ರಂದು ಮತದಾನ ನಡೆಯಲಿದೆ.
ನ.23 ರಂದು ಮತ ಎಣಿಕೆ ನಡೆದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ನ.25 ರೊಳಗೆ ಉಪಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.ಚನ್ನಪಟ್ಟಣದಲ್ಲಿ 2,32,836 ಮತದಾರರಿದ್ದಾರೆ. ಶಿಗ್ಗಾವಿಯಲ್ಲಿ 2,36,790 ಮತದಾರರು ಹಾಗೂ ಸಂಡೂರಿನಲ್ಲಿ 2,36,047 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಚನ್ನಪಟ್ಟಣದಲ್ಲಿ 208, ಶಿಗ್ಗಾವಿಯಲ್ಲಿ 196 ಹಾಗೂ ಸಂಡೂರಿನಲ್ಲಿ 153 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.