Thursday, January 15, 2026
Homeರಾಜ್ಯನಾಡಿನೆಲ್ಲೆಡೆ ಸುಗ್ಗಿ ಸಂಕ್ರಾಂತಿ ಸಂಭ್ರಮ

ನಾಡಿನೆಲ್ಲೆಡೆ ಸುಗ್ಗಿ ಸಂಕ್ರಾಂತಿ ಸಂಭ್ರಮ

Sankranti celebrations across the State

ಬೆಂಗಳೂರು,ಜ.15- ವರ್ಷದ ಮೊದಲನೇ ಸುಗ್ಗಿಹಬ್ಬ ಸಂಕ್ರಾಂತಿಯನ್ನು ನಾಡಿನೆಲ್ಲೆಡೆ ಇಂದು ಸಂಭ್ರಮದಿಂದ ಆಚರಿಸಲಾಯಿತು. ಇಂದು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭಿಷೇಕ ಸೇರಿದಂತೆ ಮತ್ತಿತರ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಸೂರ್ಯ ಧನುರ್‌ ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುವ ಪರ್ವ ದಿನವನ್ನು ಮಕರ ಸಂಕ್ರಾಂತಿ ಎಂದು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಸಂಭ್ರಮದಿಂದ ಹಬ್ಬ ಆಚರಿಲಾಯಿತು. ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ ಎಂದು ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ವಿಷಯಗಳು ಕಂಡುಬಂದವು.

ನಾಡಿನ ಹಲವು ದೇವಾಲಯಗಳಲ್ಲಿ ಇಂದು ವಿಸಯವೇ ನಡೆಯಿತು. ಚಿಕ್ಕಬಳ್ಳಾಪುರ ತಾಲ್ಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಐತಿಹಾಸಿಕ ರಂಗಸ್ಥಳ ವೈಷ್ಣವ ಕ್ಷೇತ್ರದಲ್ಲಿ ರಂಗನಾಥ ಸ್ವಾಮಿಯ ಪಾದವನ್ನು ಸೂರ್ಯನ ಕಿರಣಗಳು ಸ್ಪರ್ಶಿಸಿದ ಐತಿಹಾಸಿಕ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು. ವಿವಿಧ ಬಗೆಯ ಹೂಗಳಿಂದ ಶ್ರೀ ರಂಗನಾಥ ಸ್ವಾಮಿಗೆ ವಿಶೇಷ ಪೂಜಾ ಪುನಸ್ಕಾರಗಳು ನಡೆದವು.

ಅದೇ ರೀತಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲೂ ಸಹ ಇಂದು ಸಂಜೆ 5.02 ಕ್ಕೆ ಸರಿಯಾಗಿ ಸೂರ್ಯ ಕಿರಣಗಳು ಗಂಗಾಧರೇಶ್ವರ ಸ್ವಾಮಿಯ ಮೇಲೆ ಬೀಳಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇವಾಲಯದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎರಡು ನಿಮಿಷಗಳ ಕಾಲ ಸೂರ್ಯ ರಶಿ ಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸಲಿದೆ.
ಇಂದು ಬೆಳಿಗ್ಗೆ ಧನುರ್ಮಾಸದ ಕಡೆಯ ಪೂಜೆ ನಡೆದಿದ್ದು, ಬೆಳಿಗ್ಗೆ ಎಳನೀರು, ಕ್ಷೀರಾಭಿಷೇಕ, ಸಂಕಲ್ಪ ಪೂಜೆ ಸೇರಿದಂತೆ ಮತ್ತಿತರ ಪೂಜಾ ಕೈಂಕರ್ಯ ಗಳು ನೆರವೇರಿದವು. 6 ಗಂಟೆಯ ಮಹಾಮಂಗಳಾರತಿ ನಂತರ ಮಧ್ಯಾಹ್ನ ದವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಬಾಗಿಲು ಬಂದ್‌ ಮಾಡಿದ್ದು, ಸಂಜೆ ಸೂರ್ಯನ ಆಗಮನಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಗ್ರಾಮೀಣ ಭಾಗದಲ್ಲಿ ರೈತರ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು. ವರ್ಷವಿಡೀ ದುಡಿದ ಜಾನುವಾರುಗಳಿಗೆ ಇಂದು ಶೃಂಗರಿಸಿ ಯಾವುದೇ ರೋಗ ರುಜಿನಗಳು ಬಾರದಿರಲಿ ಎಂದು ಕಿಚ್ಚು ಹಾಯಿಸಿದರು. ಕಷ್ಟಪಟ್ಟು ಬೆಳೆದ ದವಸ-ಧಾನ್ಯ ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.ಸಿಲಿಕಾನ್‌ ಸಿಟಿಯಲ್ಲೂ ಸಹ ಹಬ್ಬದ ಸಂಭ್ರಮ ಮನೆ ಮಾಡಿದೆ.

ಪೊಂಗಲ್‌ ತಯಾರಿಸಿ ಸಂಕ್ರಾಂತಿ ಸಂಭ್ರಮಿಸಿದ ಬಿಜೆಪಿ ನಾಯಕರು :

ಬೆಂಗಳೂರು, ಜ.15- ಜಯನಗರ ವಿಧಾನಸಭಾ ಕ್ಷೇತ್ರದ ರಾಗಿಗುಡ್ಡ ವಿವೇಕಾಂದ ವಸತಿ ಸಂಕೀರ್ಣ ಸ್ಲಂ ಪ್ರದೇಶದಲ್ಲಿ ಬಿಜೆಪಿ ನಾಯಕರು ಪೊಂಗಲ್‌ ತಯಾರಿಸುವ ಮೂಲಕ ಸಂಕ್ರಾಂತಿ ಹಬ್ಬ ಆಚರಿಸಿದರು.ಸಂಕ್ರಾಂತಿ ಹಬ್ಬದ ಅಚರಣೆ ಅಂಗವಾಗಿ ಸಂಸದ ತೇಜಸ್ವಿಸೂರ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ವಿದುಷಿ ಸ್ಕಂದ ಶಿವಪ್ರಸಾದ್‌ ಮತ್ತಿತರರು ಪೊಂಗಲ್‌ ತಯಾರಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು, ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಅಚರಿಸುತ್ತಾರೆ. ಹಿಂದೂಗಳಿಗೆ ಹಬ್ಬವೆಂದರೆ ಕುಟುಂಬದವರು, ಅಕ್ಕಪಕ್ಕದವರು ಮತ್ತು ಸ್ನೇಹಿತರ ಬಳಗ ಒಟ್ಟಾಗಿ ಸೇರಿ ಅಚರಿಸುವ ಪದ್ದತಿ ಇದೆ ಎಂದರು.ರೈತರಿಗೆ ನಾಡಿನ ಜನರಿಗೆ ಸಂಕ್ರಾಂತಿ ಹಬ್ಬದಲ್ಲಿ ಉತ್ತಮ ಮಳೆ, ಬೇಳೆಯಾಗಲಿ ಸುಖ, ಶಾಂತಿ, ನೆಮ್ಮದ್ದಿ ಸಿಗಲಿ ಎಂದು ಅವರು ಇದೇ ಸಂದರ್ಭದಲ್ಲಿ ಶುಭ ಹಾರೈಕೆ ಮಾಡಿದರು.

ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ ಜೆಪಿನಗರ ಈ ಭಾಗದಲ್ಲಿ ಜನಪ್ರಿಯ ಶಾಸಕರಾಗಿದ್ದ ವಿಜಯಕುಮಾರ್‌ ಅವರ ಸಹಕಾರದಿಂದ 1300ಮನೆಗಳಲ್ಲಿ ನಿರ್ಮಿಸಿ, 7ಕೋಟಿ ರೂ. ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಯಿತು.ಸಂಕ್ರಾಂತಿ ಹಬ್ಬವನ್ನು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಕುಟುಂಬದಂತೆ ಒಟ್ಟಾಗಿ ಅಚರಿಸಲಾಗುತ್ತಿದೆ ಎಂದು ಹೇಳಿದರು. ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮತ್ತಿತರ ಬಿಜೆಪಿ ಮುಖಂಡರು ಇದ್ದರು.

RELATED ARTICLES

Latest News