Friday, October 18, 2024
Homeರಾಜ್ಯಕುರಿ-ಮೇಕೆ ಕಳವು ಮಾಡಿ ಮಾರಾಟ ಮಾಡಿದ್ದ 6 ಮಂದಿ ಸೆರೆ

ಕುರಿ-ಮೇಕೆ ಕಳವು ಮಾಡಿ ಮಾರಾಟ ಮಾಡಿದ್ದ 6 ಮಂದಿ ಸೆರೆ

ಬೆಂಗಳೂರು,ಅ.16- ಗ್ರಾಮದ ಕೊಟ್ಟಿಗೆಯಲ್ಲಿದ್ದ ಕುರಿ, ಮೇಕೆಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿ 2.43 ಲಕ್ಷ ನಗದು, 12 ಲಕ್ಷ ರೂ. ಮೌಲ್ಯದ 29 ಕುರಿ-ಮೇಕೆಗಳು ಹಾಗೂ ಒಂದು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪರಶುರಾಮ್‌(28), ಅಮರೇಶ್‌(22), ರಮೇಶ್‌(21), ಹುಲುಗಪ್ಪ(32), ವೆಂಕಟೇಶ್‌(19), ಹೀರಣ್ಣ(27) ಬಂಧಿತ ಕುರಿಗಳ್ಳರು.

ದೊಡ್ಡ ಜಾಲ ಗ್ರಾಮದ ನಿವಾಸಿಯೊಬ್ಬರು ಜೀವನೋಪಾಯಕ್ಕಾಗಿ ವ್ಯವಸಾಯದ ಜೊತೆಗೆ ಕುರಿ, ಮೇಕೆ ಹಾಗೂ ದನ ಸಾಕಾಣಿಕೆ ಮಾಡುತ್ತಿದ್ದು, ಅವರು 10 ಹಸುಗಳು ಹಾಗೂ 25 ಕುರಿ ಮತ್ತು ಮೇಕೆಗಳನ್ನು ಸಾಕಿದ್ದರು. ಸೆ.15ರಂದು ಎಂದಿನಂತೆ ಕೊಟ್ಟಿಗೆಯಲ್ಲಿ ಹಸು, ಕುರಿ, ಮೇಕೆಗಳಿಗೆ ಮೇವು ಹಾಕಿ ಪಕ್ಕದಲ್ಲೇ ಇರುವ ಮನೆಗೆ ಹೋಗಿದ್ದಾರೆ. ಬೆಳಗಾಗುವಷ್ಟರಲ್ಲಿ ಕೊಟ್ಟಿಯಲ್ಲಿದ್ದ 15 ಮೇಕೆಗಳು ಕಾಣೆಯಾಗಿದ್ದು, ಕಳ್ಳರು ಸುಮಾರು 1.80 ಲಕ್ಷ ಮೌಲ್ಯದ ಮೇಕೆಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹುಡುಕಿಕೊಂಡು ಪಕ್ಕದ ಬಿಲ್ಲರಾಮನಹಳ್ಳಿ ಮತ್ತು ಶೆಟ್ಟಿಗೆರೆ ಗ್ರಾಮಕ್ಕೆ ಹೋಗಿ ವಿಚಾರಿಸಿದಾಗ ಆ ಗ್ರಾಮಗಳಲ್ಲೂ ಸಹ ಕುರಿ-ಮೇಕೆಗಳು ಕಳವಾಗಿರುವುದು ಗೊತ್ತಾಗಿದೆ.

ಈ ಬಗ್ಗೆ ಅವರು ಚಿಕ್ಕಜಾಲ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಚಿಕ್ಕಬಾಣವಾರ ಪೈಪ್‌ಲೈನ್‌ ಬಳಿ ಅನುಮಾನಸ್ಪದವಾಗಿ ನಿಂತಿದ್ದ ಆರು ಮಂದಿಯನ್ನು 15 ಕುರಿ ಮತ್ತು ಮೇಕೆಗಳಿದ್ದ ಬುಲೆರೊ ವಾಹನ ಸಮೇತ ವಶಕ್ಕೆ ಪಡೆದು ವಿಚಾರಿಸಿದಾಗ ಇವುಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ಠಾಣೆಗೆ ಕರೆದೊಯ್ದು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ್ದ ಕುರಿ ಮತ್ತು ಮೇಕೆಗಳನ್ನು ಹೊಸಪೇಟೆ, ಕೊಪ್ಪಳ, ಬಳ್ಳಾರಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳಿಂದ ಕುರಿ ಮತ್ತು ಮೇಕೆಗಳನ್ನು ಪಡೆದುಕೊಂಡಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಹೆಚ್ಚಿನ ಲಾಭಕ್ಕಾಗಿ ಬೇರೆಯವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ತನಿಖೆಯನ್ನು ಮುಂದುವರೆಸಿದ ಪೊಲೀಸರು ಆರೋಪಿಗಳಿಂದ ಖರೀದಿಸಿದ್ದ ವ್ಯಕ್ತಿಗಳಿಂದ 14 ಕುರಿ ಮತ್ತು ಮೇಕೆ ಹಾಗೂ ಇತರೆ ಕುರಿ ಮೇಕೆಗಳನ್ನು ಮಾರಾಟ ಮಾಡಿದ್ದ 2.44 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟಾರೆ ಈ ಪ್ರಕರಣದಲ್ಲಿ 12 ಲಕ್ಷ ರೂ. ಮೌಲ್ಯದ 29 ಕುರಿ, ಮೇಕೆಗಳು ಹಾಗೂ ಮಹೇಂದ್ರ ಬುಲೆರೊ ಪಿಕಪ್‌ ವಾಹನ ವಶಪಡಿಸಿಕೊಳ್ಳುವಲ್ಲಿ ಇನ್‌ಸ್ಪೆಕ್ಟರ್‌ ಆನಂದ್‌ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News