ಬೆಂಗಳೂರು,ಅ.18– ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ, ಸಮುದಾಯದ ಸಚಿವರು, ಪ್ರಮುಖರು ಹಾಗೂ ಜನಪ್ರತಿನಿಧಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶ್ಯಪ್ಪನವರ್, ಕೂಡಲ ಸಂಗಮ ಗುರುಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸಭೆಯನ್ನು ನಡೆಸಲಾಗುತ್ತಿದೆ. ಈ ಮೊದಲು ಔಪಚಾರಿಕವಾಗಿ ಸಮಾಲೋಚನೆಗಳಾಗಿದ್ದವು. ಇಂದು ಅಧಿಕೃತ ಚರ್ಚೆಯಲ್ಲಿ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ಸರ್ಕಾರ ಸಭೆಯ ಬಳಿಕ ಗಾಂಧಿ ಭವನದಲ್ಲಿ ಸಮುದಾಯದ ಪ್ರಮುಖರು ಹಾಗೂ ಜನಪ್ರತಿನಿಧಿಗಳು ಪ್ರತ್ಯೇಕ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲಿ ಮುಂದಿನ ಹೋರಾಟ ಅಥವಾ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂಬುದು ಹಲವು ದಶಕಗಳ ಹೋರಾಟವಾಗಿದೆ. ಈ ಹಿಂದೆ ಹಲವಾರು ಪಾದಯಾತ್ರೆಗಳು, ಪ್ರತಿಭಟನೆಗಳು ನಡೆದಿದ್ದವು. ಹಿಂದುಳಿದ ವರ್ಗಗಳ ವ್ಯಾಪ್ತಿಗೊಳಪಟ್ಟಂತೆ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಬಸವರಾಜ ಬೊಮಾಯಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಿಂಪಡೆದರು. ಪಂಚಮಸಾಲಿ ಸೇರಿದಂತೆ ಲಿಂಗಾಯತ ವೀರಶೈವ ಹಾಗೂ ಒಕ್ಕಲಿಗ ಸಮುದಾಯಕ್ಕೆ ತಲಾ 2ರಂತೆ ಹಂಚಿಕೆ ಮಾಡಲಾಗಿತ್ತು.
ಆಯುಕ್ತರು ಈ ನಿರ್ಧಾರದಿಂದ ಪಂಚಮಸಾಲಿಗಳು ತೃಪ್ತರಾಗಿರಲಿಲ್ಲ. ಆದರೆ ಚುನಾವಣೆ ಕಾರಣಕ್ಕಾಗಿ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇಂದು ನಡೆದ ಸಭೆಯಲ್ಲಿ ಹಿಂದಿನ ನಿರ್ಧಾರದ ಔಚಿತ್ಯವನ್ನು ಚರ್ಚೆಗೊಳಪಡಿಸಲಾಗಿದೆ.
ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಕಾನೂನಾತಕ ಸಾಧ್ಯತೆಗಳ ಬಗ್ಗೆ ವಿಸ್ತೃತ ವಿಶ್ಲೇಷಣೆ ನಡೆದಿದೆ. ರಾಜ್ಯ ಸರ್ಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿಯ ವರದಿಯನ್ನು ಬಹಿರಂಗ ಮಾಡುವ ಇರಾದೆಯಲ್ಲಿರುವುದನ್ನು ಲಿಂಗಾಯಿತ ವೀರಶೈವ ಸಮುದಾಯ ಪ್ರಬಲವಾಗಿ ವಿರೋಧಿಸಿದೆ.
ಈ ಹಂತದಲ್ಲಿ ಸಮುದಾಯದ ಉಪಪಂಗಡವಾಗಿರುವ ಪಂಚಮಸಾಲಿಗಳ ಮೀಸಲಾತಿ ಕುರಿತಂತೆ ಸಭೆ ನಡೆಸಿರುವುದು ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.