ಬೆಂಗಳೂರು,ಅ.18- ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಕುಟುಂಬದ ಸದಸ್ಯರ ಮೇಲಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ಬಂದ ಮೇಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದು ಸಹಜ. ಸದ್ಯಕ್ಕೆ ಗೋಪಾಲ್ ಜೋಷಿ ಹಾಗೂ ಇತರರು ನಾಪತ್ತೆಯಾಗಿದ್ದಾರೆ. ಮೂರು ಜನರನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಪೊಲೀಸರು ಮಾಡುತ್ತಾರೆ ಎಂದರು.
ಟಿಕೆಟ್ಗಾಗಿ ಲಂಚ ಪಡೆದ ಪ್ರಕರಣದಲ್ಲಿ ಗೋಪಾಲ್ ಜೋಷಿ ಅವರೊಂದಿಗೆ ಅವರ ಸಹೋದರರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಪಾತ್ರ ಇರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಏಕಾಏಕಿ ನಾವು ಈ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಮೊದಲು ಗೋಪಾಲ್ ಜೋಷಿಯನ್ನು ಬಂಧಿಸಬೇಕು, ಹೇಳಿಕೆ ಪಡೆಯಬೇಕು. ವಿಚಾರಣೆ ನಡೆದ ಬಳಿಕ ಕೇಂದ್ರ ಸಚಿವರ ನೇರ ಪಾತ್ರ ಇದೆಯೇ? ಅಥವಾ ಇಲ್ಲವೇ ಎಂಬುದನ್ನು ಹೇಳಲು ಸಾಧ್ಯ. ಚೈತ್ರಾ ಕುಂದಾಪುರ ಸೇರಿದಂತೆ ಇಂತಹ ಪ್ರಕರಣಗಳ ಕುರಿತು ವರದಿ ಬರದೆ ಮಾತನಾಡುವುದು ಸರಿಯಲ್ಲ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ನೀಡಿರುವ ದೂರು ಆಧರಿಸಿ ನ್ಯಾಯಾಲಯ ವಾರಂಟ್ ರಹಿತ ಜಾಮೀನು ಜಾರಿ ಮಾಡಿದೆ. ಮುಂದಿನ ಕ್ರಮಗಳ ಬಗ್ಗೆ ನ್ಯಾಯಾಲಯದಿಂದ ನಿರ್ದೇಶನ ಕೇಳಲಾಗಿದೆ. ಅಲ್ಲಿನ ಸೂಚನೆ ಆಧರಿಸಿ ಬಂಧನವೂ ಸೇರಿದಂತೆ ಸೂಚಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಲಬುರಗಿಯಲ್ಲಿ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಬಳಕೆ ಹಾಗೂ ಇತರ ಚಟುವಟಿಕೆಗಳ ಬಗ್ಗೆ ಖುದ್ದು ಪೊಲೀಸ್ ಮಹಾನಿರ್ದೇಶಕರೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಆ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಪೊಲೀಸ್ ಇಲಾಖೆಯಲ್ಲಿನ ಪತಿ-ಪತ್ನಿ ಪ್ರಕರಣಗಳು ವರ್ಗಾವಣೆಗಳು ನಡೆಯುತ್ತವೆ. ಸಮಸ್ಯೆ ಆದಾಗಲೆಲ್ಲ ಸಿಬ್ಬಂದಿಗಳು ಬಂದು ದೂರು ಕೊಡುತ್ತಾರೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.