ಬೆಂಗಳೂರು,ಅ.18– ಹೊರರಾಜ್ಯದ ವ್ಯಕ್ತಿಗಳೊಂದಿಗೆ ಹವಾಲ ದಂಧೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಆಗ್ನೇಯ ವಿಭಾಗದ ಸಿಎಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳಿ ಮೂಲದ ಅಮನ್ (25) ಮತ್ತು ಅಹಮದಾಬಾದ್ ಮೂಲದ ಗುರುಬಾಯ್ ಮತ್ತು ಭರತ್ ಬಾಯಿ ಬಂಧಿತರು. ಎಚ್‌ಎಸ್‌ಆರ್ ಲೇಔಟ್‌ನ ವೆಂಕಟಪುರದ ವ್ಯಕ್ತಿಯೊಬ್ಬರನ್ನು ವಾಟ್ಸಪ್ ಮುಖಾಂತರ ಸಂಪರ್ಕಿಸಿದ ವಂಚಕರು, ಗಣೇಶ ಗ್ರೀನ್ ಭಾರತ್ ಲಿಮಿಟೆಡ್ ಐಪಿಒ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹಣ ದ್ವಿಗುಣವಾಗಲಿದ್ದು, ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಆಮಿಷವೊಡ್ಡಿ ಹಂತ ಹಂತವಾಗಿ 35.35 ಲಕ್ಷ ಹಣವನ್ನು ವಿವಿಧ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ಬಗ್ಗೆ ಅವರು ದೂರು ನೀಡಿದ್ದರು.
ತನಿಖೆ ಕೈಗೊಂಡ ಸಿಇಎನ್ ಠಾಣೆ ಪೊಲೀಸರು ವಿವಿಧ ಆಯಾಮಗಳಲ್ಲಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದಾಗ ದೂರುದಾರರಿಂದ ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಆ ಹಣವನ್ನು ವಿತ್ ಡ್ರಾ ಮಾಡಿದ ಇಬ್ಬರನ್ನು ಹೈದರಾಬಾದ್‌ನಲ್ಲಿರುವ ಚಾರ್ ಮಿನಾರ್ ಬಳಿ ವಶಕ್ಕೆ ಪಡೆದಿದ್ದಾರೆ. ಆ ಇಬ್ಬರನ್ನು ವಿಚಾರಣೆಗೊಳ ಪಡಿಸಿದಾಗ ಒಬ್ಬನ ಸಹೋದರ ದುಬೈನಲ್ಲಿ ವಾಸವಾಗಿದ್ದು, ಆತನು ಆರೋಪಿಗಳಿಬ್ಬರ ಜೊತೆ ಮತ್ತೊಬ್ಬ ಸೇರಿಕೊಂಡು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಸಿರುವುದು ಗೊತ್ತಾಗಿದೆ.
ಈ ರೀತಿ ಸಂದಾಯ ಮಾಡಿದ ಹಣವನ್ನು ಈ ಮೂವರು ವ್ಯಕ್ತಿಗಳ ಮುಖಾಂತರ ವಿತ್ ಡ್ರಾ ಮಾಡಿಸಿ ನಂತರ ಹವಾಲ ಮುಖಾಂತರ ದುಬೈನಲ್ಲಿ ಹಣವನ್ನು ಪಡೆದುಕೊಳ್ಳುತ್ತಿದದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ತನಿಖೆಯನ್ನು ಮುಂದುವರೆಸಿದಾಗ ಇತರೆ ವಿವಿಧ ಬ್ಯಾಂಕ್ ಖಾತೆಗಳ ಕೆವೈಸಿ ಹಾಗೂ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಹುಬ್ಬಳ್ಳಿ ಮೂಲದ ವ್ಯಕ್ತಿ ಇದರಲ್ಲಿ ಭಾಗಿಯಾಗಿರುವುದು ಗೊತ್ತಾಗಿ ಆತನನ್ನು ಗಾಂಧಿನಗರದಲ್ಲಿ ವಶಕ್ಕೆ ಪಡೆದಾಗ ಮತ್ತೊಬ್ಬ ಸಹಚರನ ಬಗ್ಗೆ ಮಾಹಿತಿ ನೀಡಿದ್ದು ಆತನನ್ನು ಸಹ ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಹವಾಲಾ ದಂಧೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.
ಈ ರೀತಿ ಕಳುಹಿಸುತ್ತಿದ್ದ ಹಣಕ್ಕೆ ಶೇ.3ರಷ್ಟು ಹಣವನ್ನು ಅಹಮದಾಬಾದ್‌ನಲ್ಲಿರುವ ವ್ಯಕ್ತಿಯು ಹವಾಲಾ ಏಜೆಂಟರಿಗೆ ಕಳುಹಿಸುತ್ತಿದ್ದನು. ನಂತರ ಸ್ನೇಹಿತರೊಂದಿಗೆ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಚೆಕ್ ಮೂಲಕ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಲ್ಲದೆ ಎಟಿಎಂಗಳಲ್ಲಿಯೂ ಸಹ ಹಣವನ್ನು ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.