Saturday, October 19, 2024
Homeರಾಜ್ಯಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಬೆವರಿದ ಮುಡಾ ಅಧಿಕಾರಿ ಹಾಗೂ ಸಿಬ್ಬಂದಿಗಳು..!

ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಬೆವರಿದ ಮುಡಾ ಅಧಿಕಾರಿ ಹಾಗೂ ಸಿಬ್ಬಂದಿಗಳು..!

ED Questions Muda officers and staff

ಮೈಸೂರು,ಅ.19– ಮುಡಾ ನಿವೇಶನ ಹಂಚಿಕೆ ಹಗರಣದ ಹಿನ್ನೆಲೆಯಲ್ಲಿ ಹಲವೆಡೆ ದಾಳಿ ನಡೆಸಿ ತನಿಖೆ ಆರಂಭಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿಗಳು ತತ್ತರಿಸುತ್ತಿದ್ದಾರೆ. ಹಲವು ಕಡತಗಳ ನಾಪತ್ತೆ, ಕೆಲವು ಕಡತಗಳ ತಿದ್ದುಪಡಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಇಂಚಿಂಚೂ ಪರಿಶೀಲಿಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಗರಣದ ಮೂಲ ಹುಡುಕಲು ಪಾತಾಳಗಂಗೆ ತನಿಖೆಯನ್ನು ಶುರು ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೇಶನ ಹಂಚಿಕೆಯಲ್ಲಿ ಪ್ರಭಾವ ಬಳಕೆ ಮಾಡಿರುವ ಆರೋಪಕ್ಕೆ ಒಳಗಾಗಿದ್ದರೆ, ಕಡತಗಳ ನಾಪತ್ತೆ ಹಾಗೂ ತಿದ್ದುಪಡಿಗೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರ ಕುರಿತಂತೆ ಅನುಮಾನಗಳು ದಟ್ಟವಾಗುತ್ತಿವೆ.ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಆರಂಭಗೊಂಡಿರುವ ಶೋಧ ಕಾರ್ಯಾಚರಣೆ ಹಾಗೂ ವಿಚಾರಣೆಗೆ ಉತ್ತರಿಸಲಾಗದೆ ಮುಡಾದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನಲಾಗಿದೆ.

ನಿನ್ನೆ ತಡರಾತ್ರಿಯವರೆಗೂ ದಾಖಲಾತಿಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಇಂದು ಬೆಳಿಗ್ಗೆ 9.30ರೊಳಗೆ ಎಲ್ಲಾ ಸಿಬ್ಬಂದಿಗಳು ಕಚೇರಿಗೆ ಆಗಮಿಸಬೇಕೆಂದು ಸೂಚನೆ ನೀಡಿದ್ದರು. ಅದರ ಅನುಸಾರ ಮುಡಾ ಆಯುಕ್ತ ರಘುನಂದನ್‌ ಸೇರಿದಂತೆ ಎಲ್ಲರೂ ತಡಬಡಾಯಿಸಿ ಕಚೇರಿಗೆ ಆಗಮಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ನೀಡಲಾಗಿರುವ 14 ನಿವೇಶನಗಳ ದಾಖಲಾತಿಯಲ್ಲಿ ಒಂದು ಪತ್ರಕ್ಕೆ ವೈಟ್ನರ್‌ ಹಾಕಿರುವ ಕುರಿತು ಮಾಹಿತಿ ಪಡೆದುಕೊಳ್ಳಲು ಇ.ಡಿ ಅಧಿಕಾರಿಗಳು ಯತ್ನಿಸಿದ್ದಾರೆ. ಆದರೆ ಆ ಕಡತವೇ ಕಾಣುತ್ತಿಲ್ಲ ಎಂಬ ವದಂತಿಗಳಿವೆ.

ವೈಟ್ನರ್‌ ಹಿಂದೆ ಇರುವ ಮೂಲ ಒಕ್ಕಣೆಯ ಬಗ್ಗೆ ಇ.ಡಿ ಅಧಿಕಾರಿಗಳು ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಮುಡಾದಲ್ಲಿ ಸುಮಾರು 4 ಸಾವಿರ ನಿವೇಶನಗಳು ಹಂಚಿಕೆಯಾಗಿದ್ದು, ಅದರಲ್ಲಿ ಎಲ್ಲಾ ಪಕ್ಷಗಳ ನಾಯಕರು, ಫಲಾನುಭವಿಗಳು ಎಂದು ಹೇಳಲಾಗಿದೆ.

ಪ್ರಸ್ತುತ ಸ್ನೇಹಮಯಿ ಕೃಷ್ಣ ದೂರು ನೀಡಿರುವ ಕೆಸರೆ ಗ್ರಾಮದ ಜಮೀನಿಗೆ ಬದಲಿ ನಿವೇಶನ ಪ್ರಕರಣದಲ್ಲಿ ಮುಡಾದ ನಿರ್ಣಯ ಏನು?, ಯಾವ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದರ ಹಿಂದೆ ಯಾವ ಪ್ರಭಾವ ಕೆಲಸ ಮಾಡಿದೆ ಎಂಬೆಲ್ಲಾ ವಿವರಗಳನ್ನು ಇ.ಡಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.ತನಿಖೆ ಅಂದಿನ ಮುಡಾ ಕಾರ್ಯಕಾರಿ ಮಂಡಳಿಯ ಸದಸ್ಯರ ಕುರಿತಂತೆಯೂ ನಡೆಯುತ್ತಿದೆ ಎಂದು ತಿಳಿದುಬಂದಿದೆ.

1990 ರಿಂದ 1996 ರವರೆಗಿನ ಕೆಲವು ದಾಖಲೆಗಳು ನಾಪತ್ತೆಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಅಸ್ಪಷ್ಟ ಉತ್ತರಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ. ದಾಖಲೆ ಪತ್ರಗಳೇ ನಾಪತ್ತೆಯಾಗಿರುವುದರಿಂದ ಇ.ಡಿ ಅಧಿಕಾರಿಗಳು ಈಗ ಹೊಸ ರೀತಿಯಲ್ಲಿ ತನಿಖೆ ನಡೆಸಬೇಕಾಗುತ್ತದೆ. ಪ್ರಕರಣ ಬೆಳಕಿಗೆ ಬಂದ ನಂತರ ಆಯುಕ್ತರು ಸೇರಿದಂತೆ ಹಲವಾರು ಅಧಿಕಾರಿಗಳು ವರ್ಗಾವಣೆಯಾಗಿರುವುದರಿಂದ ಅಸಮರ್ಪಕ ಮಾಹಿತಿ ನೀಡುತ್ತಿದ್ದಾರೆ. ತನಿಖೆಗೆ ಸಹಕರಿಸದೇ ಇದ್ದರೆ ಬಂಧನದ ಕಾರ್ಯಾಚರಣೆ ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನು ಇ.ಡಿ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಡಾದಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿದ್ದು, ಪ್ರಸ್ತುತ ಇ.ಡಿ ಮಧ್ಯ ಪ್ರವೇಶದಿಂದ ಹಲವರು ಇದರಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆಯಿದೆ.ಹಲವರಿಗೆ ನೀಡಲಾಗಿರುವ ಬದಲಿ ನಿವೇಶನಗಳು, ನಿಯಮ ಬಾಹಿರವಾಗಿ ನಿವೇಶನ ಹಂಚಿಕೆ ಸೇರಿದಂತೆ ಕಾನೂನು ಬಾಹಿರವಾಗಿ ಹಂಚಿಕೆಯಾಗಿರುವ ನಿವೇಶನಗಳು ಮತ್ತು ಮುಡಾ ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಸರಿಯಾದ ಕಾಗದ ಪತ್ರಗಳು ಮತ್ತು ನಡಾವಳಿಗಳು ಕೂಡ ಪಾಲನೆಯಾಗದಿರುವುದು ಕಂಡುಬಂದಿದೆ.

ಮುಡಾದಲ್ಲಿ ನಿವೇಶನಗಳಿಗಾಗಿ ಶಿಾರಸು ಮಾಡಿರುವ ಪತ್ರಗಳನ್ನು ವಶಕ್ಕೆ ಪಡೆದಿರುವ ಇ.ಡಿ ಅಧಿಕಾರಿಗಳು ಎಲ್ಲಾ ಮೂಲ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಮುಡಾ ಆಯುಕ್ತ ರಘು ನಂದನ್‌ ಸೇರಿದಂತೆ ಇತರೆ ಅಧಿಕಾರಿಗಳು ಇ.ಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುವಾಗ ಎಲ್ಲವನ್ನೂ ದಾಖಲಿಸಿಕೊಳ್ಳಲಾಗುತ್ತಿದೆ ಮತ್ತು ಇಂದೂ ಕೂಡ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES

Latest News