ಬೆಳಗಾವಿ,ಅ.19- ಗೂಡ್ಸ್ ವಾಹನದಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2.73 ಕೋಟಿಗೂ ಹೆಚ್ಚು ಹಣವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ಜಫ್ತಿ ಮಾಡಿದ್ದಾರೆ.ಕಳೆದ ರಾತ್ರಿ ಮಹಾರಾಷ್ಟ್ರದ ಸಾಂಗಲಿಯಿಂದ ಹುಬ್ಬಳ್ಳಿ ಕಡೆಗೆ ಆಶೋಕ ಲೆಯಲ್ಯಾಂಡ್ ಗೂಡ್ಸ್ ವಾಹನದಲ್ಲಿ ಭಾರಿ ಮೊತ್ತದ ಹಣವನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಇನ್ಸ್ ಪೆಕ್ಟರ್ ನಂದೀಶ್ವರ ಕುಂಬಾರ ಅವರ ತಂಡ ಕಾರ್ಯಾಚರಣೆ ನಡೆಸಿ ವಾಹನವನ್ನು ಪತ್ತೆ ಹಚ್ಚಿದೆ .
ನಂತರ ಪರಿಶೀಲನೆಯ ವೇಳೆ ವಾಹನದಲ್ಲಿ 2.73,27,500 ನಗದು ಹಣ ಪತ್ತೆ ಆಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಈ ನಗದು ಹಣ ಯಾರಿಗೆ ಸೇರಿದ್ದು ಎಂಬುದು ಸದ್ಯ ತನಿಖೆಯಿಂದ ತಿಳಿದು ಬರಬೇಕಿದೆ.ಈ ಸಂಬಂಧ ವಾಹನದ ಚಾಲಕ ಮಹಾರಾಷ್ಟ್ರದ ಸಾಂಗಲಿಯ ಸಚೀನ ಮೇನಕುದಳೆ ಹಾಗೂ ಮಾರುತಿ ಮಾರಗುಡೆ ಅವರನ್ನು ಅಕ್ರಮ ಹಣ ಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ.
ಅಕ್ರಮವಾಗಿ ಹಣ ಸಾಗಣೆ ಮಾಡಲು ಇವರು ವಾಹನದ ಕ್ಯಾಬಿನ್ನಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿದ್ದು, ಕಂಡುಬಂದಿದೆ.ಸದ್ಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಫ್ತಿ ಮಾಡಿರುವ ಹಣದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡವನ್ನು ಕೂಡ ಅಕ್ರಮ ತಡೆಗೆ ರಚಿಸಲಾಗಿದೆಯೆಂದು ಡಿಸಿಪಿ ರೋಹನ್ ಜಗದೀಶ್ ಅವರು ಈ ಸಂಜೆಗೆ ತಿಳಿಸಿದ್ದಾರೆ.